Advertisement

ಬ್ಯಾಡಗಿ: ರೋಗಪೀಡಿತ ಗೋವಿನಜೋಳ ಬೆಳೆ ನಾಶ

06:17 PM Aug 05, 2023 | Team Udayavani |

ಬ್ಯಾಡಗಿ: ಕೆಂಪು ರೋಗ, ಬೇರು ಕೊಳೆ ರೋಗ, ಸೈನಿಕ(ಲದ್ದಿ) ಹುಳುಗಳ ಕಾಟದಿಂದ ತತ್ತರಿಸಿರುವ ರೈತರು ತಾಲೂಕಿನ ಬಹುತೇಕ ಕಡೆಗಳಲ್ಲಿ ಬಿತ್ತನೆಯಾಗಿದ್ದ ಸಾವಿರಾರು ಎಕರೆಯಷ್ಟು ಗೋವಿನಜೋಳ ಬೆಳೆ ನಾಶಪಡಿಸುತ್ತಿರುವ ಅಘಾತಕಾರಿ ಘಟನೆಗಳು ಬೆಳಕಿಗೆ ಬಂದಿವೆ. ತಾಲೂಕಿನ ಪ್ರಮುಖ ಬೆಳೆಗಳಲ್ಲಿ ಒಂದಾದ ಗೋವಿನ(ಮೆಕ್ಕೆ)ಜೋಳಕ್ಕೆ ಸಂಕಷ್ಟ ಎದುರಾಗಿದ್ದು ರೈತರನ್ನು ಚಿಂತೆಗೀಡು
ಮಾಡಿದೆ.

Advertisement

ಹತ್ತಿ ಮತ್ತು ಗೋವಿನಜೋಳ ತಾಲೂಕಿನ ಪ್ರಮುಖ ಬೆಳೆಗಳಾಗಿದ್ದು, ಒಟ್ಟು 34 ಸಾವಿರ ಹೆಕ್ಟರ್‌ ಬಿತ್ತನೆ ಪ್ರದೇಶದಲ್ಲಿ ಸುಮಾರು 19 ಸಾವಿರ ಹೆಕ್ಟೇರ್‌ನಲ್ಲಿ ಗೋವಿನಜೋಳ ಬಿತ್ತನೆಯಾಗಿದೆ. ಕಲ್ಲೇದೇವರ, ಸೇವಾನಗರ, ಹೆಡಿಗ್ಗೊಂಡ, ಕಾಗಿ ನೆಲೆ, ತಿಮಕಾಪುರ,
ಕಳಗೊಂಡ, ಮಾಸಣಗಿ ಇನ್ನಿತರ ಕಡೆಗಳಲ್ಲಿ ಬೆಳೆದು ನಿಂತಿದ್ದ ಗೋವಿನಜೋಳ ಬೆಳೆಯನ್ನೇ ನಾಶಪಡಿಸುತ್ತಿರುವ ಬಗ್ಗೆ ವರದಿಯಾಗಿದೆ.

ಏಪ್ರಿಲ್‌ ತಿಂಗಳಿಗೂ ಮುನ್ನ ಯಾವುದೇ ಮಳೆಯಾಗದೇ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದ ತಾಲೂಕಿನ ರೈತರು ತೋಟಗಾರಿಕೆಯ ಕಬ್ಬು, ಅಡಕೆ ಬೆಳೆಗಳನ್ನು ನಾಶಪಡಿಸಿದ್ದರು. ಆದರೆ, ಇದೀಗ ಮಳೆ ಹೆಚ್ಚಾಗಿ ಗೋವಿನಜೋಳದ ಸರದಿ ಆರಂಭವಾಗಿದ್ದು, ಬೆಳೆ ನಾಶಪಡಿಸುತ್ತಿರುವ ನೂರಾರು ಪ್ರಕರಣಗಳು ಬೆಳಕಿಗೆ ಬಂದಿವೆ.

ಬೇರು ಕೊಳೆ ರೋಗ: ಬಹುತೇಕ ಕಂಪನಿಯ ಗೋವಿನಜೋಳ ಬೀಜಕ್ಕೂ ಇದೇ ಕುತ್ತು ಎದುರಾಗಿದೆ. ತಾಲೂಕಿನಲ್ಲಿ ಡಿಕೆಶಿ, ಪಯೋನಿಯರ್‌, ಕಾಂಚನ, ಸಿಜೆಂಟ್‌(ಎನ್‌ಕೆ), ನೀರಜ್‌ ಸೇರಿದಂತೆ ಉತ್ತಮ ಹೈಬ್ರಿಡ್‌ ತಳಿ ಬೀಜಗಳನ್ನು ಬಿತ್ತನೆ ಮಾಡಿದ್ದೇನೋ
ನಿಜ. ಆದರೆ ಬಿತ್ತಿದಾಕ್ಷಣ ಸುರಿದ ಸತತ ಮಳೆಯಿಂದ ಹುಟ್ಟಿದ್ದ ಗೋವಿನಜೋಳ ಬೇರು ಕೊಳೆತು ನಿಯಂತ್ರಣ ಕಳೆದುಕೊಂಡು ಕೆಂಪು ಮತ್ತು ಹಳದಿ ವರ್ಣಕ್ಕೆ ತಿರುಗಿವೆ.

ಮೇ ತಿಂಗಳ ಮಳೆ ತಂದ ಕುತ್ತು: ಪ್ರಸಕ್ತ ವರ್ಷದ ಮೇ ತಿಂಗಳ ಎರಡನೇ ವಾರದಲ್ಲಿ ಅಲ್ಲಲ್ಲಿ ಸುರಿದ ಮಳೆಗೆ ತಾಲೂಕಿನಲ್ಲಿ ಮುಂಗಾರು ಬಿತ್ತನೆಗೆ ಚಾಲನೆ ನೀಡಲಾಗಿತ್ತು. ಆದರೆ ಮೇ 15 ರ ನಂತರ ಬಿತ್ತನೆ ಮಾಡಿದ ಗೋವಿನಜೋಳ ಬೆಳೆಗಳು ಬಳಿಕ ಸುರಿದ ಸತತ ಮಳೆಯೇ ಬೆಳೆ ರೋಗಕ್ಕೆ ತುತ್ತಾಗಲು ಕಾರಣವಾಯಿತು ಎಂಬುದು ರೈತರ ಸ್ಪಷ್ಟ ಅಭಿಮತ.

Advertisement

ಕೆಂಪು ರೋಗ, ಬೇರು ಕೊಳೆ ರೋಗ, ಸೈನಿಕ (ಲದ್ದಿ) ಹುಳುಗಳ ಕಾಟದಿಂದ ತತ್ತರಿಸಿರುವ ರೈತರು ಒಬ್ಬೊಬ್ಬರಾಗಿ ಗೋವಿನಜೋಳ ನಾಶಪಡಿಸುತ್ತಿದ್ದು, ರೈತರ ಸಂಖ್ಯೆ ಮತ್ತು ನಾಶವಾಗುವ ಕ್ಷೇತ್ರ ಇನ್ನಷ್ಟು ಹೆಚ್ಚಾಗುವ ಲಕ್ಷಣಗಳು ಗೋಚರಿಸುತ್ತಿವೆ. ಬಿತ್ತನೆ ಮಾಡಿ ಎರಡೂವರೆ ತಿಂಗಳು ಗತಿಸಿದ್ದು, ನಿರೀಕ್ಷಿತ ಪ್ರಮಾಣದ ಎತ್ತರಕ್ಕೆ ಬೆಳೆದಿಲ್ಲ. ಹಸಿರು ವರ್ಣದಲ್ಲಿರಬೇಕಾದ ಜೋಳದ ದಂಟು ಹಳದಿ ಮತ್ತು ಕೆಂಪು ಬಣ್ಣಕ್ಕೆ ತಿರುಗಿದೆ. ಇದರಿಂದ ಆತಂಕಕ್ಕೀಡಾದ ರೈತರು ಬೆಳೆ ನಾಶಪಡಿಸುತ್ತಿದ್ದಾರೆ.

ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳ ತಪ್ಪಿನಿಂದ ರೈತ ಬೆಳೆ ನಾಶದಂತಹ ಶಿಕ್ಷೆಗೆ ಒಳಗಾಗುತ್ತಿದ್ದಾನೆ. ಬೀಜೋಪಚಾರದಿಂದ ಹಿಡಿದು ಬೆಳೆ ಖಟಾವಿನವರೆಗೂ ಕಾಲಕಾಲಕ್ಕೆ ಸಿಂಪಡಿಸಬೇಕಾದ ಔಷ ಧ ಸೇರಿದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕೃಷಿ ಇಲಾಖೆಯಿಂದ ರೈತನಿಗೆ ಮಾಹಿತಿ ತಲುಪುತ್ತಿಲ್ಲ. ಕೂಡಲೇ ಸರ್ಕಾರ ಬೆಳೆ ನಾಶಪಡಿಸಿದ ರೈತರಿಗೆ ಪರಿಹಾರ ನೀಡಬೇಕು.
*ಮಲ್ಲಿಕಾರ್ಜುನ ಬಳ್ಳಾರಿ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಸದ್ಯಕ್ಕೆ ಎದುರಾಗಿರುವ ಕುತ್ತಿನಿಂದ ಹೊರಬರುವ ಯಾವುದೇ ಲಕ್ಷಣಗಳಿಲ್ಲ. ಪ್ರತಿ ಎಕರೆ ಬಿತ್ತನೆಗೆ 15 ರಿಂದ 20 ಸಾವಿರ ರೂ. ಈಗಾಗಲೇ ಕಳೆದುಕೊಂಡಿದ್ದೇವೆ. ಕನಿಷ್ಟ ಸೂರ್ಯಪಾನ, ಗೋಧಿ  ಅಥವಾ ಬಿಳಿ ಜೋಳ ಬಿತ್ತನೆ ಮಾಡಿ ಹಿಂಗಾರಿನಲ್ಲಾದರೂ
ಒಂದಿಷ್ಟು ಬೆಳೆ ತೆಗೆಯುವ ಉದ್ದೇಶದಿಂದ ಗೋವಿನಜೋಳ ನಾಶಪಡಿಸಿದ್ದೇವೆ.
*ಶಂಕರಪ್ಪ ಮರಗಾಲ, ಕಲ್ಲೇದೇವರ ಗ್ರಾಮದ ರೈತ

ತಡವಾಗಿ ಬಿತ್ತನೆ ಮಾಡಿದ ಹೊಲಗಳಲ್ಲಿ ಸಮಸ್ಯೆ ಕಂಡು ಬಂದಿದ್ದು, ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ಕಳೆ (ಹುಲ್ಲು) ತೆಗೆಯಲು ಸಾಧ್ಯವಾಗಿಲ್ಲ. ಇನ್ನೂ ಕೆಲವೆಡೆ ಯೂರಿಯಾ ಗೊಬ್ಬರ ಬೆಳೆಗಳ ಬುಡಕ್ಕೆ ಅತಿಯಾಗಿ ಹಾಕಿದ ಪ್ರಕರಣಗಳು ಕ್ಷೇತ್ರ ವೀಕ್ಷಣೆ ಸಂದರ್ಭದಲ್ಲಿ ಕಂಡು ಬಂದಿವೆ. ಇವೆಲ್ಲಾ ಕಾರಣಗಳಿಂದ  ರೋಗ ತಗುಲಿರಬಹುದು. ಇದಕ್ಕಾಗಿ 19 ಆಲ್‌ ಮತ್ತು ನ್ಯೂಟರಂಟ್‌ ಸ್ಪ್ರೆ ಮಾಡಿದಲ್ಲಿ ರೋಗ ಹತೋಟಿಗೆ ಬರುವ ಸಾಧ್ಯತೆಗಳಿವೆ.
*ಜಿ.ಶಾಂತಾಮಣಿ, ಸಹಾಯಕ ಕೃಷಿ ನಿರ್ದೇಶಕಿ, ಬ್ಯಾಡಗಿ

Advertisement

Udayavani is now on Telegram. Click here to join our channel and stay updated with the latest news.

Next