Advertisement
ಪುತ್ತೂರು ತಾಲೂಕಿನ ಬಡಗನ್ನೂರು ಮತ್ತು ಅರಿಯಡ್ಕ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಬಸ್ ತಂಗುದಾಣಗಳು ಅವ್ಯವಸ್ಥೆಗಳಿಂದ ಕೂಡಿ ಪ್ರಾತಿನಿಧಿಕವಾಗಿವೆ. ಯಾವ ಬಸ್ ನಿಲ್ದಾಣದಲ್ಲೂ ಶುಚಿತ್ವದ ಪಾಲನೆಯಾಗಿಲ್ಲ. ತ್ಯಾಜ್ಯಗಳು ದುರ್ವಾಸನೆ ಬೀರುತ್ತಿವೆ, ತಂಗುದಾಣಗಳು ಶಿಥಿಲಗೊಂಡಿವೆ, ಕೆಲವು ಬಸ್ ನಿಲ್ದಾಣಗಳು ಕಿಡಿಗೇಡಿಗಳ ತಾಣವಾಗಿ ಮಾರ್ಪಟ್ಟಿವೆ. ನೂರಾರು ವಿದ್ಯಾರ್ಥಿಗಳು, ಸಾವಿರಾರು ಪ್ರಯಾಣಿಕರು ಬಳಸುವ ಬಸ್ ನಿಲ್ದಾಣಗಳ ಈ ಸ್ಥಿತಿಯ ಬಗ್ಗೆ ಗ್ರಾಮ ಪಂಚಾಯತ್ ಸೇರಿದಂತೆ ಆಡಳಿತ ವ್ಯವಸ್ಥೆ ಗಮನ ಹರಿಸಬೇಕು ಎನ್ನುವ ಕಳಕಳಿಯೊಂದಿಗೆ ಈ ಚಿತ್ರಣವನ್ನು ಮುಂದಿಟ್ಟಿದ್ದೇವೆ.
ತಂಗುದಾಣದ ಹಿಂಬದಿ ಮತ್ತು ಸುತ್ತಮುತ್ತ ಕಿಡಿಗೇಡಿ ಗಳು ಗೋಣಿ ಚೀಲದಲ್ಲಿ ಕೊಳೆತ ತ್ಯಾಜ್ಯ ತುಂಬಿಸಿ ಹಾಕಿದ್ದಾರೆ. ಇದರ ದುರ್ವಾಸನೆಯಿಂದಾಗಿ ತಂಗುದಾಣದಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಬಸ್, ಇತರ ವಾಹನ ಹತ್ತಿ, ಇಳಿಯುತ್ತಾರೆ. ಬಡಗನ್ನೂರು ಗ್ರಾಮದ ಮೈಂದನಡ್ಕ
ಹಳೆಯ ಬಸ್ ನಿಲ್ದಾಣದ ಒಳಗಿನ ಕುಳಿತು ಕೊಳ್ಳುವ ಜಾಗದ ಸಿಮೆಂಟ್ ಎದ್ದು ಹೋಗಿದೆ. ದುರಸ್ತಿ ಕಾರ್ಯದ ಕಳಪೆ ಗುಣಮಟ್ಟದಿಂದ ಪರಿಸ್ಥಿತಿ ಬಿಗಡಾಯಿಸಿದೆ. ಮೇಲ್ಛಾವಣಿಯಲ್ಲಿ ಹುಲ್ಲು ಬೆಳೆದು ನಿಂತು ಮೇಲ್ಭಾಗದಿಂದ ಮಳೆ ನೀರು ಹರಿದು ಒಳಭಾಗದಲ್ಲಿ ನೀರು ತುಂಬಿ ಕೆಸರುಮಯವಾಗುತ್ತಿದೆ.
Related Articles
Advertisement
ಮೇಲಿನ ಕಾವು ಜಂಕ್ಷನ್ ತಂಗುದಾಣಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ತಂಗು ದಾಣ. ಒಳ ಮತ್ತು ಹೊರಭಾಗದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಗುಟ್ಕಾ ತಿಂದು ಉಗುಳಿದ ಚಿತ್ತಾರಗಳು ಹೇಸಿಗೆ ಹುಟ್ಟಿಸುತ್ತಿವೆ. ತಂಗುದಾಣವು ಧರೆಯ ಅಡಿ ಭಾಗದಲ್ಲಿದ್ದು, ಮೇಲ್ಭಾಗದಲ್ಲಿ ದಟ್ಟವಾದ ಅರಣ್ಯದ ರೀತಿಯಲ್ಲಿ ಗಿಡ – ಮರ ಗಳು ಬೆಳೆದು ನಿಂತಿದೆ.
ಧರೆಯ ಅಡಿಭಾಗದಲ್ಲಿ ನಿರ್ಮಿಸಿರುವ ತಂಗುದಾಣ ಕಳೆದ ಮಳೆಗಾಲದಲ್ಲಿ ಭೂಕುಸಿತ ದಿಂದ ಸ್ವಲ್ಪದರಲ್ಲೇ ಬಚಾವಾಗಿತ್ತು. ಮೇಲ್ಭಾಗದಲ್ಲಿ ದೊಡ್ಡ ಮರವೂ ಬೆಳೆದು ನಿಂತಿದೆ. ಧರೆ ಕುಸಿತಕ್ಕೆ ಮೊದಲು ಇಲ್ಲಿ ಸಾಕಷ್ಟು ಜನರು ನಿಲ್ಲುತ್ತಿದ್ದರು. ಈಗ ಯಾರೆಂದರೆ ಯಾರೂ ಒಳಗೆ ಪ್ರವೇಶ ಮಾಡುವುದಿಲ್ಲ.
ತಂಗುದಾಣದ ಸಿಮೆಂಟ್ ಶೀಟ್ ಒಡೆದು ಹೋಗಿ ಮಳೆಯ ನೀರು ನೇರವಾಗಿ ಒಳಗೆ ಬೀಳುತ್ತಿದೆ. ಮಳೆಗಾಲದಲ್ಲಿ ಭಾರೀ ಸಮಸ್ಯೆ ಎದುರಾದಾಗಲೂ ಯಾರೂ ಅದರ ದುರಸ್ತಿಗೆ ಮುಂದಾಗಿಲ್ಲ. ಇದೀಗ ಮಳೆ ನಿಂತಿರುವುದರಿಂದ ಈ ಬಾರಿಯಾದರೂ ಸರಿ ಮಾಡಬಹುದು ಎನ್ನುವ ನಿರೀಕ್ಷೆ ಜನರದ್ದು.
ಪಟ್ಟೆಯಲ್ಲಿ ಹಲವು ವಿದ್ಯಾಸಂಸ್ಥೆಗಳಿರುವುದರಿಂದ ಬೇರೆ ಭಾಗಗಳಿಂದ ಸಾಕಷ್ಟು ವಿದ್ಯಾರ್ಥಿಗಳು ಬರುತ್ತಾರೆ. ಅವರಿಗೆಲ್ಲ ಆಸರೆಯಾಗಬೇಕಾದ ತಂಗುದಾಣ ಕಸದ ರಾಶಿಯಿಂದಾಗಿ ಅಸಹ್ಯ ಹುಟ್ಟಿಸುವಂತಿದೆ. ಹೊರ, ಒಳಭಾಗದಲ್ಲಿ ಕಸ ಮತ್ತು ಗಲೀಜು ತುಂಬಿಕೊಂಡಿದ್ದು ಒಳಗೆ ಪ್ರವೇಶಿಸಲು ಮನಸು ಬಾರದಂತಿದೆ.
ರಾತ್ರಿ ಹೊತ್ತು ಬೇರೆ ಭಾಗಗಳಿಂದ ಬರುವ ಕಿಡಿಗೇಡಿಗಳು ಇಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸುವ ಆರೋಪವಿದೆ. ಗ್ರಾಮದಲ್ಲಿ ನಡೆಯುವ ಸಮಾರಂಭಗಳಲ್ಲಿ ಊಟ, ಉಪಚಾರಕ್ಕೆ ಬಳಸಿದ ಪ್ಲಾಸ್ಟಿಕ್ ತಟ್ಟೆ, ಲೋಟ ಮತ್ತು ಇತರ ತ್ಯಾಜ್ಯವನ್ನು ರಾತ್ರಿ ಹೊತ್ತು ಸುರಿದು ಹೋಗಲಾಗುತ್ತಿದೆ.