ಮಾಸ್ತಿ: ಮಾಲೂರು ತಾಲೂಕಿನ ಮಾಸ್ತಿ ಗ್ರಾಪಂ ವ್ಯಾಪ್ತಿಯ ಗೊಲ್ಲಪೇಟೆ ಗ್ರಾಮದಿಂದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಸುಗ್ಗೊಂಡಹಳ್ಳಿ ರಸ್ತೆಯು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.
ಮಾಸ್ತಿ ಗ್ರಾಪಂ ವ್ಯಾಪ್ತಿಯ ಗೊಲ್ಲಪೇಟೆ ಗ್ರಾಮದಿಂದ ಸುಗ್ಗೊಂಡಹಳ್ಳಿ ರಸ್ತೆಯ ಮೂಲಕ ಕೆ.ಉಪ್ಪಾರಹಳ್ಳಿ, ಶ್ಯಾಮಶೆಟ್ಟಹಳ್ಳಿ, ಚವರಮಂಗಲ, ಸುಗ್ಗೊಂಡಹಳ್ಳಿ, ಅಣಿಕರಹಳ್ಳಿ ಸೇರಿದಂತೆ ನೆರೆಯ ತಮಿಳುನಾಡಿನ ಸುಮಾರು ಹಳ್ಳಿಗಳಿಗೂ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಈ ಭಾಗದಲ್ಲಿ ಬಹುತೇಕ ಮಂದಿ ಕೂಲಿ, ಕೃಷಿಯಿಂದ ಜೀವನ ನಡೆಸುತ್ತಿದ್ದು, ಈ ಭಾಗದಲ್ಲಿ ತೀರ ಹಿಂದುಳಿದ ಗ್ರಾಮಗಳಾಗಿವೆ. ವ್ಯಾಪಾರ, ವಹಿವಾಟು ಸೇರಿದಂತೆ ಇನ್ನಿತರೆ ವ್ಯವಹಾರಗಳನ್ನು ಮಾಡಲು ಈ ರಸ್ತೆಯ ಮಾರ್ಗವಾಗಿಯೇ ಮಾಸ್ತಿ, ಮಾಲೂರು ಕಡೆಗಳಿಗೆ ಹೋಗಬೇಕಾಗಿದೆ. ಅಲ್ಲದೆ, ವಿದ್ಯಾ ರ್ಥಿಗಳು ಸಹ ಹೆಚ್ಚಾಗಿ ಓಡಾಡುತ್ತಿರುತ್ತಾರೆ.
ರಸ್ತೆ ಡಾಂಬರು ಕಂಡು 30 ವರ್ಷಗಳೇ ಕಳೆದಿದೆ: ಸುಗ್ಗೊಂಡಹಳ್ಳಿ ರಸ್ತೆಯು ಡಾಂಬರೀಕರಣ ಕಂಡು ಸುಮಾರು 25 ರಿಂದ 30 ವರ್ಷಗಳೇ ಕಳೆದಿದ್ದು, ಇದುವರೆವಿಗೂ ರಸ್ತೆ ಅಭಿವೃದ್ಧಿ ಭಾಗ್ಯ ಕಂಡಿಲ್ಲ. ಈ ರಸ್ತೆಯಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದಿದ್ದು, ರಸ್ತೆಯಲ್ಲಾ ಜಲ್ಲಿ ಕಲ್ಲುಗಳು ಮೇಲೆದ್ದಿವೆ. ಅಲ್ಲದೆ, ಮಳೆ ಬಂದರೆ ಕೆಸರು ಗದ್ದೆಯಾಗಿ ಮಾರ್ಪಾಡುವ ಈ ರಸ್ತೆಯು ನಂತರ ದಿನಗಳಲ್ಲಿ ಧೂಳು ಹಾಗೂ ಜಲ್ಲಿ ಕಲ್ಲುಗಳಿಂದ ಕೂಡಿರುತ್ತದೆ. ಮಳೆ ಬಂದರೆ ಕೆಸರಿನ ಅಭಿಷೇಕ, ನಂತರ ದಿನಗಳಲ್ಲಿ ದೂಳಿನ ಅಭಿಷೇಕವಾಗುವ ರಸ್ತೆಯ ಅಭಿವೃದ್ಧಿ ಬಗ್ಗೆ ಕೇಳುವವರಿಲ್ಲದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಶಾಸಕರದ್ದು ಬರಿ ಭರವಸೆಯಾಗಿದೆ: ರಸ್ತೆ ಹದಗೆಟ್ಟಿರುವ ಕಾರಣ ರಸ್ತೆಯಲ್ಲಿ ಸಂಚರಿಸುವ ನಾಗರಿಕರು ಹಾಗೂ ವಾಹನ ಸವಾರರು ಬಾರಿ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಎಷ್ಟೋ ಬಾರಿ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವ ವೇಳೆ ಆಯ ತಪ್ಪಿ ಬಿದ್ದು, ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆಯೂ ಸಹ ನಡೆದಿದೆ. ರಸ್ತೆಯಲ್ಲಿ ಸಂಚರಿಸುವ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆಯನ್ನು ಅಭಿವೃದ್ಧಿ ಮಾಡಿಸಿಕೊಡು ವಂತೆ ಸ್ಥಳಿಯ ಶಾಸಕ ನಂಜೇಗೌಡರಿಗೆ ಪ್ರತಿ ಬಾರಿ ಮನವಿ ಮಾಡುತ್ತಿದ್ದರೂ ಅವರ ಭರವಸೆ ಮಾತ್ರ ನೀಡುತ್ತಾರೆ. ಆದರೆ, ಅಭಿವೃದ್ಧಿ ಕೆಲಸ ಮಾತ್ರ ಮಾಡಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಸ್ತೆಯ ಅಭಿವೃದ್ಧಿಗೆ ಗ್ರಾಮಸ್ಥರ ಒತ್ತಾಯ : ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಡಾಂಬರೀಕರಣಗೊಳಿಸುವ ನೆಪದಲ್ಲಿ ಸುಗ್ಗೊಂಡಹಳ್ಳಿ ರಸ್ತೆಯನ್ನು ಅಗೆದು ಡಾಂಬರೀ ಕರಣ ಮಾಡದೆ ಹಾಗೆ ಬಿಟ್ಟಿರುವುದರಿಂದ ಈ ಭಾಗದ ವಾಹನಗಳ ಸಂಚಾರಕ್ಕೆ ಬಾರಿ ತೊಂದರೆಯಾಗಿದೆ. ಚುನಾವಣೆ ಸಮೀಪಿಸುತ್ತಿ ದ್ದಂತೆ ಈ ಭಾಗದಲ್ಲಿ ಮತದಾರರನ್ನು ಸೆಳೆಯಲು ಶೀಘ್ರದಲ್ಲೇ ರಸ್ತೆಗೆ ಡಾಂಬರೀಕರಣ ಹಾಕಿಸಿಕೊಡುವ ಭರವಸೆ ನೀಡಿ ಕಳೆದ ಸುಮಾರು ಒಂದೂವರೆ ತಿಂಗಳ ಹಿಂದೆ ಸುಮಾರು 1 ಕಿ.ಮೀ ನಷ್ಟು ರಸ್ತೆಯನ್ನು ಕಿತ್ತು ಹಾಕಿ ಹಾಗೇ ಬಿಟ್ಟಿದ್ದಾರೆ. ಜನ ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಆದಷ್ಟು ಶೀಘ್ರದಲ್ಲೇ ರಸ್ತೆಯನ್ನು ಅಭಿವೃದ್ಧಿಪಡಿಸಿ ಕೊಡಬೇಕು ಇಲ್ಲದಿದ್ದಲ್ಲಿ ಈ ಬಾರಿ ಶಾಸಕರಿಗೆ ತಕ್ಕ ಪಾಠ ಕಲಿಸುವುದಾಗಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಸುಗ್ಗೊಂಡಹಳ್ಳಿ ರಸ್ತೆ ಅಭಿವೃದ್ಧಿ ಕಂಡು ಸುಮಾರು 25-30 ವರ್ಷಗಳೇ ಕಳೆದಿದೆ. ಇದುವರೆಗೂ ರಸ್ತೆ ಅಭಿವೃದ್ಧಿ ಕಂಡಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ, ವಾಹನ ಸವಾರರಿಗೆ ಬಾರಿ ತೊಂದರೆಯಾಗಿದೆ. ಹಲವಾರು ಬಾರಿ ಸ್ಥಳಿಯ ಶಾಸಕರಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕು.
●ವೆಂಕಟೇಶ್, ಸುಗ್ಗೊಂಡಹಳ್ಳಿ ಗ್ರಾಮಸ್ಥ
ಸುಗ್ಗೊಂಡಹಳ್ಳಿ ರಸ್ತೆಯನ್ನು ಡಾಂಬರೀಕರಣ ಗೊಳಿಸುವ ನೆಪದಲ್ಲಿ ಸುಮಾರು 1 ಕಿ.ಮೀ.ನಷ್ಟು ಕಿತ್ತು ಹಾಕಿ. ಒಂದೂವರೆ ತಿಂಗಳು ಕಳೆದರೂ ರಸ್ತೆಯನ್ನು ಡಾಂಬರೀ ಕರಣಗೊಳಿಸಿಲ್ಲ. ರಸ್ತೆಯನ್ನು ಶೀಘ್ರ ಡಾಂಬರೀಕರಣಗೊಳಿಸಬೇಕು.
●ರಘುನಾಥ್, ತುರುಣಿಸಿ ಗ್ರಾಪಂ
-ಮಾಸ್ತಿ ಎಂ.ಮೂರ್ತಿ