Advertisement

ಮೂರನೇ ಸಲವೂ ಬೆಂಗಳೂರಿಗೆ ಬ್ಯಾಡ್‌ ಲಕ್‌!

07:39 AM Apr 20, 2022 | Team Udayavani |

ರಾಯಲ್‌ ಚಾಲೆಂಜರ್ ಬೆಂಗಳೂರು ತಂಡಕ್ಕೆ ಮತ್ತೆ ಬ್ಯಾಡ್‌ ಲಕ್‌ ಎದುರಾದದ್ದು 2016ರ ಫೈನಲ್‌ನಲ್ಲಿ. ವಿಪರ್ಯಾಸವೆಂದರೆ, ಇದು ಬೆಂಗಳೂರು ಫ್ರಾಂಚೈಸಿಯ ತವರು ಅಂಗಳವಾದ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲೇ ಸಾಗಿದ ಪ್ರಶಸ್ತಿ ಸಮರವಾಗಿತ್ತು. ಎದುರಾಳಿ ಸನ್‌ರೈಸರ್ ಹೈದರಾಬಾದ್‌. ಫ‌ಲಿತಾಂಶ-ವಿರಾಟ್‌ ಕೊಹ್ಲಿ ಪಡೆಗೆ 8 ರನ್ನುಗಳ ಸಣ್ಣ ಅಂತರದ ಆಘಾತಕಾರಿ ಸೋಲು.

Advertisement

3 ಸಲ ಐಪಿಎಲ್‌ ಫೈನಲ್‌ ಪ್ರವೇಶಿಸಿದ ಆರ್‌ಸಿಬಿ ಮೂರೂ ಸಲ ಲಾಗ ಹಾಕಿದ್ದೊಂದು ದುರಂತ. ಇದು ಆರ್‌ಸಿಬಿ ಅಭಿಮಾನಿಗಳಿಗೆ ಎದುರಾದ ದೊಡ್ಡ ಆಘಾತ. ಅನಂತರ ಆರ್‌ಸಿಬಿ ಪ್ರಶಸ್ತಿ ಸುತ್ತು ಪ್ರವೇಶಿಸಿಲ್ಲ. ಬೆಂಗಳೂರು ತಂಡದ ಫೈನಲ್‌ ಸೋಲು ಮೂರಕ್ಕೇ ಮುಕ್ತಾಯವಾಗಲಿ ಎಂಬುದು ಅಭಿಮಾನಿಗಳ ಹಾರೈಕೆ!

ಅಂದು ಬೆಂಗಳೂರಿನಲ್ಲಿ ನಡೆದದ್ದು ದೊಡ್ಡ ಮೊತ್ತದ ಹಣಾಹಣಿ. ಮೊದಲು ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌ 7 ವಿಕೆಟಿಗೆ 208 ರನ್‌ ರಾಶಿ ಹಾಕಿತು. ದಿಟ್ಟ ರೀತಿಯಲ್ಲೇ ಜವಾಬಿತ್ತ ಆರ್‌ಸಿಬಿ 7 ವಿಕೆಟಿಗೆ 200 ರನ್‌ ಬಾರಿಸಿ ತೀವ್ರ ನಿರಾಸೆ ಅನುಭವಿಸಿತು.

ಹೈದರಾಬಾದ್‌ ಸರದಿಯಲ್ಲಿ ಆರಂಭಕಾರ ಡೇವಿಡ್‌ ವಾರ್ನರ್‌ ಸರ್ವಾಧಿಕ 69 ರನ್‌ ಬಾರಿಸಿದರು. ಬೆನ್‌ ಕಟಿಂಗ್‌ ಅವರದು ಆಲ್‌ರೌಂಡ್‌ ಶೋ ಆಗಿತ್ತು-ಅಜೇಯ 39 ರನ್‌ ಮತ್ತು 35ಕ್ಕೆ 2 ವಿಕೆಟ್‌. ಇದರಲ್ಲೊಂದು ವಿಕೆಟ್‌ ಸ್ಫೋಟಕ ಓಪನರ್‌ ಕ್ರಿಸ್‌ ಗೇಲ್‌ ಅವರದ್ದಾಗಿದ್ದರೆ, ಇನ್ನೊಂದು ಕೆ.ಎಲ್‌. ರಾಹುಲ್‌ ಅವರದಾಗಿತ್ತು.

ಗೇಲ್‌-ಕೊಹ್ಲಿ ಅಮೋಘ ಆರಂಭ
ಬೃಹತ್‌ ಮೊತ್ತವನ್ನು ಬೆನ್ನಟ್ಟುವಾಗ ಕ್ರಿಸ್‌ ಗೇಲ್‌-ವಿರಾಟ್‌ ಕೊಹ್ಲಿ ಅಮೋಘ ಆರಂಭ ಒದಗಿಸಿದರು. ಹತ್ತರ ಸರಾಸರಿಯಲ್ಲಿ ರನ್‌ ಹರಿದುಬರತೊಡಗಿತು. 10.3 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 114 ರನ್‌ ಹರಿದು ಬಂತು. ಕ್ರಿಸ್‌ ಗೇಲ್‌ ಬರೀ 38 ಎಸೆತಗಳಿಂದ 76 ರನ್‌ ಸಿಡಿಸಿ ಹೈದರಾಬಾದನ್ನು ಬೆಚ್ಚಿಬೀಳಿಸಿದ್ದರು. ಜಮೈಕಾದ ಈ ದೈತ್ಯ ಕ್ರಿಕೆಟಿಗನಿಂದ 8 ಸಿಕ್ಸರ್‌, 4 ಬೌಂಡರಿ ಸಿಡಿಯಲ್ಪಟ್ಟಿತು.

Advertisement

13ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ವಿರಾಟ್‌ ಕೊಹ್ಲಿ 35 ಎಸೆತಗಳಿಂದ 54 ರನ್‌ ಬಾರಿಸಿದರು (5 ಬೌಂಡರಿ, 2 ಸಿಕ್ಸರ್‌). ಒಂದು ಹಂತದಲ್ಲಿ ಒಂದೇ ವಿಕೆಟಿಗೆ 140 ರನ್‌ ಪೇರಿಸಿದ್ದ ಆರ್‌ಸಿಬಿ ಮೊದಲ ಸಲ ಐಪಿಎಲ್‌ ಕಿರೀಟ ಏರಿಸಿಕೊಳ್ಳುವುದು ಖಚಿತ ಎಂಬ ಸಂಭ್ರಮದ ವಾತಾವರಣ ಮನೆಮಾಡಿತ್ತು. ಆದರೆ ಅನಂತರ ಸಂಭವಿಸಿದ್ದೇ ಬೇರೆ!

ಗೇಲ್‌-ಕೊಹ್ಲಿ ಸೇರಿಕೊಂಡು ನಿರ್ಮಿಸಿದ ಈ ಭದ್ರ ಬುನಾದಿಯ ಮೇಲೆ ರನ್ನಿನ ಇಟ್ಟಿಗೆ ಜೋಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಎಬಿಡಿ (5), ರಾಹುಲ್‌ (11), ವಾಟ್ಸನ್‌ (11), ಬಿನ್ನಿ (8) ಎಲ್ಲರೂ ಕೈಕೊಟ್ಟರು. ಒಂದೆಡೆ ಸಚಿನ್‌ ಬೇಬಿ ಸಿಡಿದು ನಿಂತರೂ ಇನ್ನೊಂದೆಡೆ ಸೂಕ್ತ ಬೆಂಬಲ ಸಿಗಲಿಲ್ಲ. 3 ವಿಕೆಟ್‌ ಕೈಲಿದ್ದರೂ ಆರ್‌ಸಿಬಿಗೆ ಟ್ರೋಫಿ ಎತ್ತಲಾಗಲಿಲ್ಲ!

ಹೈದರಾಬಾದ್‌ಗೆ
2ನೇ ಪ್ರಶಸ್ತಿ
ಹೈದರಾಬಾದ್‌ ಫ್ರಾಂಚೈಸಿಗೆ ಒಲಿದ 2ನೇ ಐಪಿಎಲ್‌ ಪ್ರಶಸ್ತಿ ಇದಾಗಿದೆ. 2009ರಲ್ಲಿ ಅದು ಮೊದಲ ಸಲ ಕಪ್‌ ಎತ್ತಿತ್ತು. ಅಂದು ಡೆಕ್ಕನ್‌ ಚಾರ್ಜರ್ ಹೆಸರಲ್ಲಿ ಕಣಕ್ಕಿಳಿದಿತ್ತು. ಫೈನಲ್‌ ಎದುರಾಳಿ ಬೇರೆ ಯಾವುದೇ ಅಲ್ಲ, ಆರ್‌ಸಿಬಿ! ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಡೆಕ್ಕನ್‌ ಗೆಲುವಿನ ಅಂತರ ಆರೇ ರನ್‌.

Advertisement

Udayavani is now on Telegram. Click here to join our channel and stay updated with the latest news.

Next