ಬ್ರಿಟನ್: ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಶಿವಸೇನಾದ ಏಕನಾಥ ಶಿಂಧೆ ಮಹಾ ವಿಕಾಸ್ ಅಘಾಡಿ ನೇತೃತ್ವದ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರಿದ್ದು, ಸುಮಾರು 40ಕ್ಕೂ ಅಧಿಕ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದರು. ಇದರ ಪರಿಣಾಮ ಶಿಂಧೆ ಸಿಎಂ ಪಟ್ಟ ಅಲಂಕರಿಸಿದ್ದಾರೆ. ಇದೀಗ ಬ್ರಿಟನ್ ನಲ್ಲಿಯೂ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸಂಪುಟಕ್ಕೆ 50ಕ್ಕೂ ಅಧಿಕ ಸಚಿವರು ರಾಜೀನಾಮೆ ನೀಡಿ ಬಂಡಾಯ ಸಾರಿದ್ದಾರೆ. ರಾಜಕೀಯ ಬಿಕ್ಕಟ್ಟಿನ ನಿಟ್ಟಿನಲ್ಲಿ ಪ್ರಧಾನಿ ಸ್ಥಾನಕ್ಕೆ ಬೋರಿಸ್ ಗುರುವಾರ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ:ಮಾಜಿ ಕಾರ್ಪೋರೇಟರ್ ಬಳಿ ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಬಿಬಿಎಂಪಿ ಅಧಿಕಾರಿ
ಗುರುವಾರ ಸಂಜೆ ಅಥವಾ ತಡರಾತ್ರಿ ತಮ್ಮ ರಾಜೀನಾಮೆ ಬಗ್ಗೆ ಬೋರಿಸ್ ಜಾನ್ಸನ್ ಘೋಷಿಸುವ ಸಾಧ್ಯತೆ ಇರುವುದಾಗಿ ಬಿಬಿಸಿ ವರದಿ ಈ ಮೊದಲು ತಿಳಿಸಿತ್ತು. ಅದೇ ರೀತಿ ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ತೊರೆಯಲಿದ್ದಾರೆ ಎಂದು ವರದಿ ವಿವರಿಸಿದೆ.
ಕಳೆದ 48 ಗಂಟೆಗಳಲ್ಲಿ ಬ್ರಿಟನ್ ಸರ್ಕಾರದ 50ಕ್ಕೂ ಹೆಚ್ಚು ಸಚಿವರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೇಶದಲ್ಲಿ ಸರಣಿ ಹಗರಣಗಳು ನಡೆಯುತ್ತಿದ್ದು, ಪ್ರಧಾನಿ ಸ್ಥಾನದಲ್ಲಿ ಬೋರಿಸ್ ಮುಂದುವರಿಯಲು ಅರ್ಹರಲ್ಲ ಎಂದು ಕನ್ಸರ್ವೇಟಿವ್ ಪಕ್ಷದ ಸಚಿವರು ಆರೋಪಿಸಿ, ಬಂಡಾಯ ಎದ್ದಿದ್ದರು.
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಬೋರಿಸ್ ತಮ್ಮ ಅಧಿಕೃತ ನಿವಾಸದಲ್ಲಿ ಪಾರ್ಟಿ ಮಾಡಿದ್ದರ ವಿರುದ್ಧ ಮೇ ತಿಂಗಳಲ್ಲಿ ಜಾನ್ಸನ್ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಸೋಲು ಅನುಭವಿಸಿತ್ತು. ಹೀಗಾಗಿ ಮುಂದಿನ ಒಂದು ವರ್ಷ ಕಾಲ ಬೋರಿಸ್ ವಿರುದ್ಧ ಮತ್ತೊಂದು ಬಾರಿ ಗೊತ್ತುವಳಿ ಮಂಡಿಸುವಂತೆ ಇಲ್ಲ. ಹೀಗಾಗಿ ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡುವ ಮೂಲಕ ಬೋರಿಸ್ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.
ಮುಂದಿನ ಪ್ರಧಾನಿ ರಿಷಿ ?
ಒಂದು ವೇಳೆ ಹಾಲಿ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದರೆ ರಿಷಿ ಸುನಕ್‌ರನ್ನು ಆ ಹುದ್ದೆಗೆ ನೇಮಕ ಮಾಡುವ ಸಾಧ್ಯತೆಗಳು ಇವೆ. ಇದೇ ವೇಳೆ, ಸುನಕ್ ತಮ್ಮ ರಾಜೀನಾಮೆ ಪತ್ರದಲ್ಲಿ ಬೋರಿಸ್ ಜಾನ್ಸನ್ ನಾಯಕತ್ವದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇಶ ಹಲವು ಸವಾಲುಗಳನ್ನು ಎದುರಿಸುತ್ತಿದೆ. ನಾಗರಿಕರಿಗೆ ಕಡಿಮೆ ಪ್ರಮಾಣದಲ್ಲಿ ತೆರಿಗೆ ವಿಧಿಸುವುದು ಮತ್ತು ಹೆಚ್ಚಿನ ಪ್ರಮಾಣದ ಅಭಿವೃದ್ಧಿ ಸಾಧಿಸಲು ಬಯಸುತ್ತೇನೆ. ಈ ಉದ್ದೇಶ ಈಡೇರಲು ಒಂದು ಸದೃಢ ಮತ್ತು ಸಮರ್ಥ ಸರ್ಕಾರದ ಅಗತ್ಯ ಇದೆ. ಈ ಸತ್ಯವನ್ನು ಕೇಳಲು ದೇಶದ ಜನರು ಕಾತರರಾಗಿದ್ದಾರೆ’ ಎಂದು ರಾಜೀನಾಮೆ ಪತ್ರದಲ್ಲಿ ಸುನಕ್ ಬರೆದಿದ್ದಾರೆ.