Advertisement
ಇದರಿಂದಾಗಿ ವ್ಯಕ್ತಿ ಮಧುಮೇಹ, ಕೆಲವು ವಿಧವಾದ ಕ್ಯಾನ್ಸರ್‌ಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚುತ್ತವೆ. ಈ ಅಧ್ಯಯನದಲ್ಲಿ ಪಾಲ್ಗೊಂಡ ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಉಪಯೋಗಿಸುವ ವ್ಯಕ್ತಿಗಳು ಹೆಚ್ಚು ತಲೆನೋವು, ಎದೆ ಮತ್ತು ಬೆನ್ನುನೋವಿನ ತೊಂದರೆಗಳನ್ನು ಹೊಂದಿರುವುದಾಗಿಯೂ ಹೇಳಿದ್ದಾರೆ; ಇದರಿಂದಾಗಿಯೂ ಅವರ ವೈದ್ಯರ ಭೇಟಿಗಳು ಹೆಚ್ಚಿವೆ.
Related Articles
Advertisement
ನಿರಂತರವಾದ ನಿದ್ರಾಭಂಗವು ಪ್ರತಿಕೂಲವಾದ, ಸತತವಾದ ದೈಹಿಕ ಪರಿವರ್ತನೆಗಳನ್ನು ಉಂಟುಮಾಡಬಲ್ಲದಾಗಿದ್ದು, ಅಂತಿಮವಾಗಿ ಹೃದಯ ಅನಾರೋಗ್ಯಗಳು ಉದ್ಭವಿಸಲು ಪೂರಕ ಸ್ಥಿತಿಯನ್ನು ಸೃಷ್ಟಿಸುತ್ತದೆ. ಅಸಮರ್ಪಕ ಪ್ರಮಾಣ ಮತ್ತು ಕಳಪೆ ಗುಣಮಟ್ಟದ ನಿದ್ದೆ ಹಾಗೂ ಬೊಜ್ಜು ಮತ್ತು ಮಧುಮೇಹಕ್ಕೂ ನಿಕಟ ಸಂಬಂಧ ಇರುವುದನ್ನು ರೋಗಶಾಸ್ತ್ರೀಯ ದತ್ತಾಂಶಗಳು ಸಾಬೀತು ಪಡಿಸಿದ್ದು, ಇವೆರಡೂ ಕಾಯಿಲೆಗಳು ಹೃದ್ರೋಗಗಳು ತಲೆದೋರಲು ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತವೆ.
ದೈಹಿಕ ಚಟುವಟಿಕೆಯ ಕೊರತೆ, ಆಲಸ್ಯ ಮತ್ತು ಕಡಿಮೆ ದೈಹಿಕ ಸಾಮರ್ಥ್ಯಗಳಿಂದ ಬೊಜ್ಜು ಮತ್ತು ಹೃದ್ರೋಗಗಳು ತೀರಾ ಸಣ್ಣ ವಯಸ್ಸಿನಲ್ಲಿಯೇ ಆರಂಭವಾಗುತ್ತವೆ. ಅಧಿಕ ಸಮಯ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವವರಲ್ಲಿ ಬೇಕಾಬಿಟ್ಟಿ ತಿಂಡಿ ತಿನಿಸು ಸೇವನೆಯ ಅಭ್ಯಾಸವೂ ಇರುತ್ತದೆ. ಸಾಮಾಜಿಕ ಮಾಧ್ಯಮಗಳನ್ನು ತೀವ್ರವಾಗಿ ಬಳಸುವವರಲ್ಲಿ ರಾತ್ರಿ ಸಮಯ ರಕ್ತದೊತ್ತಡ ಅಧಿಕವಾಗುತ್ತದೆ.
ಜರ್ನಲ್ ಆಫ್ ಸೋಶಿಯಲ್ ಆ್ಯಂಡ್ ಕ್ಲಿನಿಕಲ್ ಸೈಕಾಲಜಿಯ ಪ್ರಕಾರ, ದಿನಕ್ಕೆ 30 ನಿಮಿಷಗಳಷ್ಟು ಸಮಯವನ್ನು ಮಾತ್ರವೇ 3 ಆ್ಯಪ್‌ಗ್ಳಲ್ಲಿ ವಿಭಜಿಸಿ ವಿನಿಯೋಗಿಸಬೇಕು. ಸಾಮಾಜಿಕ ಮಾಧ್ಯಮಗಳ ನೊಟಿಫಿಕೇಶನ್‌ಗಳನ್ನು ಮ್ಯೂಟ್ ಮಾಡುವುದು, ಸ್ಕ್ರೀನ್ ಸಮಯವನ್ನು ಕಡಿಮೆ ಮಾಡುವಂತಹ ಸಾಮಾಜಿಕ ಮಾಧ್ಯಮ ವ್ಯಸನವನ್ನು ನಿಯಂತ್ರಿಸುವ ವಿಧಾನಗಳು ಇದಕ್ಕೆ ಸಹಕಾರಿ.
ಸಾಮಾಜಿಕ ಮಾಧ್ಯಮಗಳ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು ದೈಹಿಕ ಚಟುವಟಿಕೆಗಳನ್ನು ದಿನಂಪ್ರತಿ ಕಡ್ಡಾಯವಾಗಿ ನಡೆಸಬೇಕು. ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು, ಹೊಸ ಗೆಳೆಯ-ಗೆಳತಿಯರನ್ನು ಮಾಡಿಕೊಳ್ಳುವುದು, ದೈಹಿಕವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ವರ್ಚುವಲ್ ವಿಧಾನಗಳಿಗಿಂತ ಅತ್ಯುತ್ತಮ ಮಾರ್ಗೋಪಾಯಗಳಾಗಿವೆ.
ಸೈಬರ್ ಕ್ರಾಂತಿಯು ನಮ್ಮ ಜೀವನವನ್ನು ಸುಲಭಗೊಳಿಸಿದೆ ಎಂಬುದೇನೋ ನಿಜ. ಆದರೆ ಪ್ರತಿಯೊಂದಕ್ಕೂ ನಿಯಮ ಮತ್ತು ಷರತ್ತುಗಳಿದ್ದೇ ಇರುತ್ತವೆ. ಅತಿಯಾದರೆ ಅಮೃತವೂ ವಿಷವೇ. ಹಾಗಾಗಿ ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಋಣಾತ್ಮಕ ಪರಿಣಾಮಗಳು ಉಂಟಾಗುವುದನ್ನು ತಡೆಯಲು ಮಿತಬಳಕೆ ಮತ್ತು ಸಮತೋಲನ ಸಾಧಿಸುವುದೇ ಕೀಲಿಕೈ.
-ಡಾ| ನರಸಿಂಹ ಪೈ,
ಮುಖ್ಯಸ್ಥರು, ಕಾರ್ಡಿಯಾಲಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಾರ್ಡಿಯಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)