Advertisement

ಬಾರ್‌ ನಲ್ಲಿ ಜಗಳವಾಡಿ ಜೈಲು ಸೇರಿದ್ದ ಸ್ಟೋಕ್ಸ್‌ ಈಗ ವಿಶ್ವ ಗೆದ್ದ ಸಾಧಕ

09:40 AM Jul 16, 2019 | keerthan |

ಲಾರ್ಡ್ಸ್:‌ ವಿಶ್ವಕಪ್‌ ನ ಉದ್ಘಾಟನಾ ಪಂದ್ಯದಲ್ಲೇ ಶತಮಾನದ ಕ್ಯಾಚ್‌ ಪಡೆದ 27ರ ಯುವಕ ಅಂತಿಮ ಪಂದ್ಯದಲ್ಲಿ ಕ್ರಿಕೆಟ್‌ ಜನಕರ 44 ವರ್ಷದ ಕನಸು ನನಸು ಮಾಡಿದ  ಸಾಧಕ. ಟಿ- ಟ್ವೆಂಟಿ ವಿಶ್ವಕಪ್‌ ಫೈನಲ್‌ ನಲ್ಲಿ ಕೊನೆಯ ಓವರಿಗೆ 19 ರನ್‌ ಬಿಟ್ಟು ಕೊಟ್ಟ ಆಂಗ್ಲರ ಪಾಲಿನ ವಿಲನ್‌, ನೈಟ್‌ ಕ್ಲಬ್‌ ನಲ್ಲಿ ಗಲಾಟೆ ಮಾಡಿ ಜೈಲು ಸೇರಿದ್ದ ಪುಂಡ ಯುವಕ, ಇಂದು ಇಡೀ ಇಂಗ್ಲೆಂಡ್‌ ಎಂದೂ ಮರೆಯದ ಹೀರೋ.

Advertisement

ಇದೇ ನೋಡಿ, ಒಬ್ಬ ಆಟಗಾರ ತನ್ನ ಪ್ರಯತ್ನ, ಛಲ, ಸಾಧನೆಯಿಂದ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಇಂಗ್ಲೆಂಡ್‌ ನ ಆಟಗಾರ ಬೆನ್‌ ಸ್ಟೋಕ್ಸ್‌ ಸಾಕ್ಷಿ. 2011ರಲ್ಲಿ ಆಂಗ್ಲರ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ ಬೆನ್‌ ಸ್ಟೋಕ್ಸ್‌ ಹೆಚ್ಚು ಸುದ್ದಿಯಾಗಿದ್ದು ಮೈದಾನದ ಹೊರಗೆಯೇ ! ಕುಡಿತ, ಅತೀ ವೇಗದ ಕಾರು ಚಾಲನೆ, ಬಾರು, ನೈಟ್‌ ಕ್ಲಬ್‌ ಗಳಲ್ಲಿ ಹೊಡೆದಾಟ ಹೀಗೆ ತನ್ನ ಪುಂಡಾಟಗಳಿಂದಲೇ ಸುದ್ದಿಯಾಗುತ್ತಿದ್ದ ಬೆನ್‌ ಸ್ಟೋಕ್ಸ್‌ ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಬ್ಯಾಡ್‌ ಬಾಯ್.‌

2018ರಲ್ಲಿ ಬ್ರಿಸ್ಟೋಲ್‌ ನಲ್ಲಿ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ ಏಕದಿನ ಪಂದ್ಯ ಆಯೋಜನೆಯಾಗಿತ್ತು. ಈ ಪಂದ್ಯಕ್ಕೆ ಮುನ್ನಾದಿನ ಹತ್ತಿರದ ನೈಟ್‌ ಕ್ಲಬ್‌ ಒಂದಕ್ಕೆ ಸಹ ಆಟಗಾರ ಅಲೆಕ್ಸ್‌ ಹೇಲ್ಸ್‌ ಜೊತೆ ಹೋಗಿದ್ದ ಬೆನ್‌ ಅಲ್ಲಿ ಕುಡಿದ ಮತ್ತಿನಲ್ಲಿ ಓರ್ವನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದರು. ಆ ಗಲಾಟೆಯಲ್ಲಿ ಸ್ಟೋಕ್ಸ್‌ ಕೈಗೂ ಪೆಟ್ಟಾಗಿತ್ತು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಸ್ಟೋಕ್ಸ್‌ ಮತ್ತು ಹೇಲ್ಸ್‌ ರನ್ನು ಬಂಧಿಸಿದ್ದರು. ಆ ರಾತ್ರಿಯನ್ನು ಜೈಲಿನಲ್ಲೇ ಕಳೆದಿದ್ದ ಅವರಿಬ್ಬರು ಬಿಡುಗಡೆಯಾದರೂ ನಂತರದ ಆಶಸ್‌ ಸರಣಿಯನ್ನು ತಪ್ಪಿಸಿ ಕೊಂಡಿದ್ದರು.

ಟಿ ಟ್ವೆಂಟಿ ಫೈನಲ್‌ ನಲ್ಲಿ ವಿಲನ್‌
2016ರ ಟಿ-ಟ್ವೆಂಟಿ ವಿಶ್ವಕಪ್‌ ಫೈನಲ್‌ ಪಂದ್ಯ. ಕೊಲ್ಕತ್ತಾದ ಈಡನ್‌ ಗಾರ್ಡನ್‌ ನಲ್ಲಿ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ಎದುರಾಗಿದ್ದವು. ಎರಡನೇ ಬಾರಿ ಚುಟುಕು ಮಾದರಿಯ ಪ್ರಶಸ್ತಿ ಎತ್ತುವ ಅಭಿಲಾಷೆಯೊಂದಿಗೆ ಕಣಕ್ಕಿಳಿದಿದ್ದ ಆಂಗ್ಲರು ಗಳಿಸಿದ್ದು 155 ರನ್.‌ ಉತ್ತಮ ಬೌಲಿಂಗ್‌ ಕೂಡಾ ನಡೆಸಿದ್ದ ಇಂಗ್ಲೆಂಡ್‌, ಕೊನೆಯ ಓವರ್‌ ನಲ್ಲಿ ವಿಂಡಿಸ್‌ ಗೆ 19 ರನ್‌ ತೆಗೆಯುವ ಕಠಿಣ ಗುರಿ ನೀಡಿತ್ತು. ನಾಯಕ ಮಾರ್ಗನ್‌  ನಿರ್ಣಾಯಕ ಕೊನೆಯ ಓವರ್‌ ಎಸೆಯಲು ಚೆಂಡು ನೀಡಿದ್ದು ಬೆನ್‌ ಸ್ಟೋಕ್ಸ್‌ ಕೈಗೆ. ಆದರೆ ಸ್ಟ್ರೈಕ್‌ ನಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ವಿಂಡೀಸ್‌ ನ ಬ್ರಾತ್‌ ವೇಟ್‌ ಸ್ಟೋಕ್ಸ್‌ ಮೊದಲ ನಾಲ್ಕು ಎಸೆತಗಳನ್ನು ಸಿಕ್ಸರ್‌ ಗೆ ಅಟ್ಟಿ ವಿಂಡೀಸ್‌ ಗೆ ಜಯ ತಂದಿತ್ತಿದ್ದರು. ಅಸಾಧ್ಯ ಗೆಲುವನ್ನು ತಂದಿತ್ತ ಬ್ರಾತ್‌ ವೇಟ್‌ ವಿಂಡೀಸ್‌ ಗೆ ಹೀರೋ ಆಗಿದ್ದರೆ, ನಾಲ್ಕೇ ಬಾಲ್‌ ನಲ್ಲಿ ಸೋಲು ಎಳೆದುಕೊಂಡ ಸ್ಟೋಕ್ಸ್‌ ಇಂಗ್ಲೆಂಡ್‌ ಪಾಲಿಗೆ ವಿಲನ್‌ ಆಗಿದ್ದ.

ಆದರೆ ರವಿವಾರ ಲಾರ್ಡ್ಸ್‌ ನಲ್ಲಿ ಮಾತ್ರ ನಿಜಕ್ಕೂ ಆತ ರಾಜನಾಗಿದ್ದ. 19.3 ಓವರ್‌ ನಲ್ಲಿ ಕೇವಲ 71ರನ್‌ ಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ಗೆಲುವಿನ ದಡ ಸೇರಿಸಿದ ಗಟ್ಟಿಗ ಸ್ಟೋಕ್ಸ್.‌ ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಮತ್ತೊಂದೆಡೆ ಬಂಡೆಯಾಗಿ ನಿಂತ ಸ್ಟೋಕ್ಸ್‌ ಕೊನೆಗೂ ಕ್ರಿಕೆಟ್‌ ಜನಕರ ಮಹದಾಸೆಯನ್ನು ನೆರವೇರಿಸಿದರು.

Advertisement

ಪಂದ್ಯ ಇನ್ನೇನು ಕಿವೀಸ್‌ ನತ್ತ ಜಾರಿತು ಎನ್ನುವಾಗ ಸ್ಟೋಕ್ಸ್‌ ತೋರಿದ ಧೈರ್ಯ, ಆತ್ಮ ವಿಶ್ವಾಸ, ಕೊನೆಯ ಎರಡು ಓವರ್‌ ನಲ್ಲಿ ಪಂದ್ಯದ ಚಿತ್ರಣವನ್ನು ಬದಲಿಸಿದ ರೀತಿ, ಸೂಪರ್‌ ಓವರ್‌ ನಲ್ಲಿ ಆಡಿದ ಅದ್ಭುತ ಆಟದಿಂದಲೇ ಬೆನ್‌ ಸ್ಟೋಕ್ಸ್‌ ಇಂದು ಆಂಗ್ಲರ ನಾಡಿನ ಕಣ್ಮಣಿ.

ಕೇನ್‌ ಬಳಿ ಕ್ಷಮೆ ಕೇಳಿದ ಸ್ಟೋಕ್ಸ್‌
ಫೈನಲ್‌ ಪಂದ್ಯದ ಕೊನೆಯ ನಿರ್ಣಾಯಕ ಕ್ಷಣದಲ್ಲಿಎರಡು ರನ್‌ ಕದಿಯುವ ವೇಳೆ, ಮಾರ್ಟಿನ್‌ ಗಪ್ಟಿಲ್‌ ಎಸೆದ ಥ್ರೋ, ಸ್ಟೋಕ್ಸ್‌ ಬ್ಯಾಟಿಗೆ ತಾಗಿ ಬೌಂಡರಿಗೆ ಹೋಗಿತ್ತು. ಇದರಿಂದಾಗಿ ಇಂಗ್ಲೆಂಡ್‌ ಗೆ ನಾಲ್ಕು ಹೆಚ್ಚುವರಿ ರನ್‌ ದೊರಕಿತ್ತು. ವಿಪರ್ಯಾಸವೆಂದರೆ ಇದೇ ಕೊನೆಗೆ ಸೋಲು ಗೆಲುವನ್ನು ನಿರ್ಧರಿಸುವಂತೆ ಮಾಡಿತ್ತು. ಈ ಘಟನೆಯ ಬಗ್ಗೆ ಪಂದ್ಯದ ನಂತರ ಮಾತನಾಡಿದ ಸ್ಟೋಕ್ಸ್‌, ” ಬೇಕಂತಲೇ ನಡೆದ ತಪ್ಪಲ್ಲ, ಆದರೆ ನಾನು ನನ್ನ ಜೀವನ ಪರ್ಯಂತ ಆ ಕ್ಷಣಕ್ಕಾಗಿ ವಿಲಿಯಮ್ಸನ್‌ ಬಳಿ ಕ್ಷಮೆ ಕೇಳುತ್ತೇನೆ” ಎಂದರು. ವಿಶ್ವಕಪ್‌ ಗೆದ್ದ ಸಾಧಕ ಈ ವೇಳೆ ಕೋಟ್ಯಾಂತರ ಕ್ರೀಡಾಭಿಮಾನಿಗಳ ಹೃದಯ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next