Advertisement

ಬ್ಯಾಡ್‌ ಬ್ಯಾಂಕ್‌ ಗುಡ್‌ ಐಡಿಯಾ ಆಗಬಹುದೇ?

11:34 PM Sep 23, 2021 | Team Udayavani |

ಇಂಡಿಯನ್‌ ಬ್ಯಾಂಕ್‌ ಅಸೋಸಿಯೇಶನ್‌ ಬ್ಯಾಡ್‌ ಬ್ಯಾಂಕ್‌ ಅನ್ನು ಸ್ಥಾಪಿಸಲಿದ್ದು ಇನ್ನು ಕೆಲವೇ ವಾರಗಳಲ್ಲಿ ಕಾರ್ಯಾಚರಣೆ ಪ್ರಾರಂಭಿಸಲಿದೆ. ಬ್ಯಾಡ್‌ ಬ್ಯಾಂಕ್‌ ಎಂದೇ ಕರೆಯಲಾಗುವ ರಾಷ್ಟ್ರೀಯ ಆಸ್ತಿ ಪುನರ್‌ ರಚನ ಕಂಪೆನಿ (ಎನ್‌ಎಆರ್‌ಸಿಎಲ್‌)ಯ ಸ್ಥಾಪನೆಯ ಬಗ್ಗೆ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅನುತ್ಪಾದಕ ಸಾಲಗಳ (ಎನ್‌ಪಿಎ) ಖಾತೆಗಳನ್ನು ನಿರ್ವಹಿಸಲು ಇಂಥದ್ದೊಂದು ಬ್ಯಾಂಕ್‌ ಸ್ಥಾಪಿಸುವ ಪ್ರಸ್ತಾ ವನೆಗೆ  ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. 5 ವರ್ಷಗಳಿಗೆ 30,600 ಕೋ. ರೂ. ಗ್ಯಾರಂಟಿ ನೀಡುವ ಮುಖಾಂತರ ಬ್ಯಾಂಕಿಂಗ್‌ ಕ್ಷೇತ್ರದ ವಸೂಲಾಗದ ಎನ್‌ಪಿಎ ಸಮಸ್ಯೆಯನ್ನು ಬಗೆಹರಿಸಲು ಒಪ್ಪಿಗೆ ನೀಡಿದೆ.

Advertisement

ವಸೂಲಾಗದ ಸಾಲದ ಖಾತೆಗಳು ಈ  ಬ್ಯಾಂಕ್‌ಗೆ ವರ್ಗಾವಣೆಯಾಗುತ್ತವೆ. ಈ ಬ್ಯಾಂಕಿ ನಲ್ಲಿರುವ ಸಾಲಗಳೆಲ್ಲ ಅನುತ್ಪಾದಕ ಸಾಲಗಳಾಗಿರು ವುದರಿಂದ ಈ ಬ್ಯಾಂಕ್‌ ಅನ್ನು ಬ್ಯಾಡ್‌ ಬ್ಯಾಂಕ್‌ ಎಂದು ಕರೆಯಲಾಗುವುದು. ಬ್ಯಾಂಕಿಂಗ್‌ ಕ್ಷೇತ್ರದ ಸುಧಾರಣೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದ್ದು ಇದ ರಿಂದ ಬ್ಯಾಂಕ್‌ಗಳ ಲೆಕ್ಕಪತ್ರವನ್ನು ಶುಚಿಗೊಳಿಸಲು ಸಾಧ್ಯವಾಗಲಿದೆ ಎಂಬುದು ಸರಕಾರದ ನಿಲುವು. ಈ ಬ್ಯಾಡ್‌ ಬ್ಯಾಂಕ್‌ ಯೋಜನೆಯಿಂದ ಕುಂಠಿತವಾಗಿ ಸಾಗುತ್ತಿರುವ ಆರ್ಥಿಕತೆಗೆ ಉತ್ತೇಜನಕಾರಿಯಾಗಲಿದೆ ಎಂಬ ನಿರೀಕ್ಷೆಯನ್ನು ಕೇಂದ್ರ ಸರಕಾರ ಹೊಂದಿದೆ. ಬ್ಯಾಡ್‌ ಬ್ಯಾಂಕ್‌ ಶೇ. 15:85ರ ಅನುಪಾತದಲ್ಲಿ ವಸೂಲಾಗದ ಖಾತೆಗಳನ್ನು ಖರೀದಿಸಲಿದೆ. ಶೇ. 15 ರಷ್ಟು ಹಣವನ್ನು ನಗದು ರೂಪದಲ್ಲಿ ಮೊದಲೇ ಬ್ಯಾಂಕ್‌ಗಳಿಗೆ ನೀಡಲಾಗುತ್ತದೆ. ಉಳಿದ ಶೇ 85ರಷ್ಟು ಹಣವನ್ನು ಸಾಲಕ್ಕೆ ಸಂಬಂಧಿಸಿದ ಆಸ್ತಿಗಳನ್ನು ಮಾರಾಟ ಮಾಡಿದ ಅನಂತರ ನೀಡಲಾಗುವುದು. ಬ್ಯಾಂಕ್‌ಗಳ ಒಟ್ಟು ಸಾಲದಿಂದ ಅನುತ್ಪಾದಕ ಸಾಲಗಳನ್ನು ಬೇರ್ಪಡಿಸುವುದರಿಂದ ಬ್ಯಾಂಕ್‌ಗಳ ಬ್ಯಾಲೆನ್ಸ್‌ಶೀಟ್‌ ಕ್ಲೀನ್‌ ಆಗುತ್ತದೆ. ಹೀಗಾಗಿ ಬ್ಯಾಂಕ್‌ಗಳಿಗೆ ಸರಕಾರದಿಂದ ಹೆಚ್ಚಿನ ಬಂಡವಾಳ ಪಡೆಯಲು ಸಹಾಯಕವಾಗುತ್ತದೆ.

ಬ್ಯಾಡ್‌ ಬ್ಯಾಂಕ್‌ ವಹಿವಾಟಿಗೆ ಸರಕಾರ ಬಂಡವಾಳ ಹೂಡುವುದಿಲ್ಲ. ಆದರೆ 5 ವರ್ಷಗಳವರೆಗೆ ಸಾವರಿನ್‌ ಗ್ಯಾರಂಟಿ ನೀಡುತ್ತದೆ. ಇದನ್ನು ಬ್ಯಾಡ್‌ ಬ್ಯಾಂಕ್‌ ಸಾಲ ವರ್ಗಾಯಿಸುವ ಬ್ಯಾಂಕ್‌ಗಳಿಗೆ ಸೆಕ್ಯುರಿಟಿ ರಶೀದಿ ನೀಡಲು ಬಳಸುತ್ತದೆ. 9 ಬ್ಯಾಂಕ್‌ಗಳು ಮತ್ತು ಎರಡು ಬ್ಯಾಂಕೇತರ ಸಂಸ್ಥೆಗಳು 7,000 ಕೋ. ರೂ. ಆರಂಭಿಕ ಬಂಡವಾಳವನ್ನು ಬ್ಯಾಡ್‌ ಬ್ಯಾಂಕ್‌ಗೆ ಪೂರೈಸುತ್ತವೆ. ಈ ಬ್ಯಾಂಕ್‌ನ ದೃಢೀಕೃತ ಬಂಡವಾಳವು 100 ಕೋ. ರೂ. ಆಗಿರುತ್ತದೆ. 74.60 ಕೋ.ರೂ. ಪಾವತಿಸಿದ ಬಂಡವಾಳ(ಪೇಯ್ಡಅಪ್‌ ಕ್ಯಾಪಿಟಲ್‌)ಆಗಿರುತ್ತದೆ. ಸಾರ್ವಜನಿಕ ಬ್ಯಾಂಕ್‌ಗಳು ಒಟ್ಟಾರೆ ಶೇ. 51 ಷೇರುಗಳನ್ನು ಹೊಂದಲಿವೆ. ಒಟ್ಟು 2.25 ಲಕ್ಷ ಕೋಟಿ ರೂ. ಅನುತ್ಪಾದಕ ಸಾಲ ಈ ಬ್ಯಾಂಕ್‌ಗೆ ವರ್ಗವಣೆಯಾಗಲಿದೆ. ಮೊದಲ ಹಂತದಲ್ಲಿ 22 ಪ್ರಕರಣಗಳ 8,300 ಕೋ.ರೂ. ಸಾಲ ವರ್ಗಾವಣೆಯಾಗುತ್ತದೆ. ಸುಮಾರು 500 ಕೋ.ರೂ.ಗಳಿಗೂ ಹೆಚ್ಚು ಬಾಕಿ ಇರುವ 102 ಪ್ರಕರಣಗಳ 2 ಲಕ್ಷ ಕೋಟಿ ರೂ. ಸಾಲವನ್ನು ಈ ಬ್ಯಾಂಕ್‌ಗೆ ವರ್ಗಾಯಿಸಲು ಗುರುತಿಸಲಾಗಿದೆ. ವಂಚನೆಗೆ ಒಳಗಾದ ಮತ್ತು ಬ್ಯಾಂಕ್‌ ದಿವಾಳಿ ಕಾನೂನಿನ ಇತ್ಯರ್ಥಕ್ಕೆ ರೆಫ‌ರ್‌ ಆದ ಪ್ರಕರಣಗಳನ್ನು ಈ ಬ್ಯಾಂಕ್‌ಗೆ ವರ್ಗಾಯಿಸಲಾಗುವುದಿಲ್ಲ.

ಬ್ಯಾಡ್‌ ಬ್ಯಾಂಕ್‌ ಈಗ ಕಾರ್ಯನಿರ್ವಹಿಸುತ್ತಿರುವ ಎಸೆಟ್‌ ರಿಕನ್‌ಸ್ಟ್ರಕ್ಷನ್‌ ಕಂಪೆನಿ (ಎಆರ್‌ಸಿ) ಮತ್ತು ಎಸೆಟ್‌ ಮೆನೇಜ್‌ಮೆಂಟ್‌ ಕಂಪೆನಿ (ಎಎಂಸಿ)ಯಂತೆ ಕಾಣುತ್ತಿದ್ದು ದೇಶದ ಅತೀ ದೊಡ್ಡ ಎಸೆಟ್‌ ರಿಕನ್‌ಸ್ಟ್ರಕ್ಷನ್‌ ಹೋಲ್ಡಿಂಗ್‌ ಕಂಪೆನಿ ಆಗುವ ಸಾಧ್ಯತೆ ಇದೆ. ಇದು ಸಾಲ ವರ್ಗಾವಣೆಯ ಪ್ರಕ್ರಿಯೆ ಮತ್ತು ವಸೂಲಿ ಪ್ರಕ್ರಿಯೆ. ನೂರಕ್ಕೆ ನೂರರಷ್ಟು ಸಾಲ ವಸೂಲಿ ಗುರಿಯೇ ಪ್ರಮುಖವಾಗಿರುವುದು ಈ ವ್ಯವಸ್ಥೆಯಲ್ಲಿ ಕಾಣುತ್ತದೆ. ಇದು ಸಾಲ ಮನ್ನಾ ಅಥ‌ವಾ ರೈಟ್‌ಆಫ್ ಆಗಿರದೆ ಬೇರೆ ಪುಸ್ತಕಕ್ಕೆ ಬದಲಾಗುತ್ತಿದೆ.

ಬ್ಯಾಡ್‌ ಬ್ಯಾಂಕ್‌ ಹೊಸ ಪರಿಕಲ್ಪನೆಯೇನಲ್ಲ. ಚೀನ, ಜಪಾನ್‌ ಮತ್ತು ಕೆಲವು ಯುರೋಪ್‌ ದೇಶಗಳಲ್ಲಿ ಪ್ರಚಲಿತದಲ್ಲಿದೆ. ಅನುತ್ಪಾದಕ ಸಾಲ ವಸೂಲಿಯಲ್ಲಿ ಇದೊಂದು ದಿಟ್ಟ ಹೆಜ್ಜೆ ಎಂದು ಬಣ್ಣಿಸಿದರೂ ಇದು ಬ್ಯಾಂಕ್‌ನ ದಿನನಿತ್ಯದ ತಲೆನೋವನ್ನು ಕಡಿಮೆ ಮಾಡುವುದನ್ನು ಬಿಟ್ಟರೆ ಏನನ್ನು ಸಾಧಿಸಲಾಗದು ಎನ್ನುವ ಮಾತು ಹಲವಾರು ಹಣಕಾಸು ತಜ್ಞರಿಂದ ಕೇಳಿಬರುತ್ತಿದೆ. ಬ್ಯಾಂಕ್‌ಗಳು ಸಾಲ ನೀಡುವಲ್ಲಿ ಬದ್ಧತೆಯನ್ನು ಕಳೆದುಕೊಂಡು, ಸಾಲ ವಸೂಲಿಯಾಗದಿದ್ದರೆ ಸಾಲವನ್ನು ಬ್ಯಾಡ್‌ ಬ್ಯಾಂಕಿಗೆ ವರ್ಗಯಿಸಿದರಾಯಿತು ಎನ್ನುವ ಉದಾಸೀನತೆ ಸಾಲ ನೀಡುವ ಮೂಲ ಬ್ಯಾಂಕ್‌ನಲ್ಲಿ ಬರದಂತೆ ಎಚ್ಚರ ವಹಿಸುವ ಅಗತ್ಯವಿದೆ. ಬ್ಯಾಂಕ್‌ಗಳ ಮರುಪಾವತಿಯಾಗದ ಸಾಲಗಳ ಸಮಸ್ಯೆಗೆ ಪರಿಹಾರವಿಲ್ಲ ಎನ್ನುವ ವಿಶ್ಲೇಷಣೆಯಿದೆ. ಸಾಲ ನೀಡಿದ ಮೂಲ ಬ್ಯಾಂಕ್‌ಗಳ ತಲೆನೋವು ಇನ್ನೊಂದು ಬ್ಯಾಂಕ್‌ಗೆ ವರ್ಗಾವಣೆಯಷ್ಟೇ ಎಂಬ ವ್ಯಾಖ್ಯಾನಗಳಿವೆ ಮತ್ತು ಇದನ್ನು ಅಲ್ಲಗಳೆಯಲಾಗದು.

Advertisement

ಪ್ರಸ್ತುತ ಸಾಲ ವಸೂಲಾತಿ ಮತ್ತು ಅನುತ್ಪಾದಕ ಸಾಲಗಳ ನಿರ್ವಹಣೆಗಾಗಿ ಬ್ಯಾಂಕ್‌ಗಳು ಗಮ ನಾರ್ಹ ಮಾನವ ಸಂಪನ್ಮೂಲವನ್ನು ವ್ಯಯಿಸುತ್ತಿದ್ದು  ವಸೂಲಾಗದ ಸಾಲಗಳು ಬ್ಯಾಡ್‌ ಬ್ಯಾಂಕ್‌ಗೆ ವರ್ಗಾವಣೆಯಾದರೆ ತಮ್ಮ ಅಮೂಲ್ಯ ಸಮಯವನ್ನು  ಮುಖ್ಯ ವ್ಯವಹಾರ (ಕೋರ್‌ ಬಿಸಿನೆಸ್‌) ವೃದ್ಧಿಸಲು ಉಪಯೋಗಿಸಬಹುದು. ಸಾಲ ವಸೂಲಿಯ ಪರಿಣತ ರನ್ನು ನೇಮಿಸಬಹುದು. ಈಗಿರುವ  ಕಾನೂನು, ನಿಯಮಗಳ ಪ್ರಕಾರ ಸಾಲ ವಸೂಲಾತಿ ಕ್ರಮಗಳು ಹಲವು ಅಡೆತಡೆಗಳನ್ನು ಎದುರಿಸುತ್ತಿದ್ದು ನಿರೀಕ್ಷಿತ ಫ‌ಲ ನೀಡದೇ ಇರುವುದರಿಂದ ಈ ಅನುತ್ಪಾದಕ ಸಾಲಗಳಿಗಾಗಿ ಬ್ಯಾಂಕ್‌ ತನ್ನ ಲಾಭದಲ್ಲಿ ಪ್ರತೀ ವರ್ಷ ಗಣನೀಯ ಪ್ರಮಾಣವನ್ನು ವರ್ಗಾಯಿಸುವುದರಿಂದ ಬ್ಯಾಂಕ್‌ಗಳ ನಿವ್ವಳ ಲಾಭದಲ್ಲಿ ಕಡಿತವಾಗುತ್ತದೆ. ಹಲವಾರು ಬ್ಯಾಂಕ್‌ಗಳು ನಷ್ಟ ಹೊಂದುತ್ತವೆ. ಅನುತ್ಪಾದಕ ಸಾಲ ಹೆಚ್ಚಿದಷ್ಟೂ ಸರಕಾರದಿಂದ ಪಡೆಯುವ ಬಂಡವಾಳ ಕಡಿಮೆಯಾಗುತ್ತಾ ಹೋಗುತ್ತದೆ. ಸಾಮಾನ್ಯ ವಸೂಲಿಗೆ ಸಮಯ ಹಿಡಿಯುವುದರಿಂದ ಬ್ಯಾಂಕಿಂಗ್‌ ಪರಿಣತರು ಮತ್ತು ಆರ್ಥಿಕ ತಜ್ಞರು ಮಾಡಿದ ಹೊಸ ಅವಿಷ್ಕಾರದ ಫ‌ಲವೇ ಬ್ಯಾಡ್‌ ಬ್ಯಾಂಕ್‌.

ಭಾರತೀಯ ಬ್ಯಾಂಕ್‌ಗಳ ಒಟ್ಟಾರೆ ವಸೂಲಾಗದ ಸಾಲ (ಎನ್‌ಪಿಎ) 2022ರ ಮಾರ್ಚ್‌ ವೇಳೆಗೆ 10 ಲಕ್ಷ ಕೋಟಿ ರೂ. ಗಳಿಗೆ ವೃದ್ಧಿಸುವ ಸಾಧ್ಯತೆ ಇದೆ ಎಂದು ಅಸೋಚೆಮ್‌ ಮತ್ತು ಕ್ರಿಸಿಲ್‌ ಸಂಸ್ಥೆಯ ವರದಿ ತಿಳಿಸಿದೆ. ರಿಟೇಲ್‌, ಎಂಎಸ್‌ಎಂಇ ಮತ್ತು ಇತರ ಕೆಲವು ವಲಯಗಳಲ್ಲಿ ಎನ್‌ಪಿಎ ಏರಿಕೆ ನಿರೀಕ್ಷಿಸಲಾಗಿದೆ. ಬ್ಯಾಡ್‌ ಬ್ಯಾಂಕ್‌ ನಿರ್ಧಾರದಿಂದ ಉದ್ದೇಶಪೂರ್ವಕ ಸಾಲಗಾರರ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ.

ಬ್ಯಾಂಕ್‌ ಅಧಿಕಾರಿಗಳ ಮತ್ತು ನೌಕರರ ಸಂಘಟ ನೆಗಳು ಉದ್ದೇಶಪೂರ್ವಕ ಸಾಲಗಳನ್ನು ಕ್ರಿಮಿನಲ್‌ ಅಪರಾಧಗಳೆಂದು ಪರಿಗಣಿಸಬೇಕು ಮತ್ತು ಸಾಲ ವಸೂಲಾತಿಗೆ ಇನ್ನೂ ಕಟ್ಟುನಿಟ್ಟಿನ ಮತ್ತು ಸಮಯ ಪರಿಮಿತಿಯ ಕಾನೂನು ತರಬೇಕೆಂದು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿವೆ. ಈ ಅನುತ್ಪಾದಕ ಆಸ್ತಿಗಳಲ್ಲಿ ಹೈಪ್ರೊಫೈಲ್‌, ಹೈವಾಲ್ಯೂ ಸಾಲಗಳೇ ಹೆಚ್ಚು ಮತ್ತು ಬ್ಯಾಂಕ್‌ಗಳ ಬೋರ್ಡ್‌ ಅಜೆಂಡಾಗಳಲ್ಲಿಯೇ ಮಂಜೂರಾದ ಸಾಲಗಳಾ ಗಿರುತ್ತವೆ. ಇವೆಲ್ಲವುಗಳಿಗೆ ಕಡಿವಾಣ ಹಾಕಲು ಈ ಬ್ಯಾಡ್‌ ಬ್ಯಾಂಕ್‌ ಗುಡ್‌ ಐಡಿಯಾವೇ ಎಂಬುದನ್ನು ಕಾದು ನೋಡಬೇಕಾಗಿದೆ.

 

-ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next