Advertisement

ಹಿನ್ನೀರು ಮೀನುಗಾರಿಕೆ ಕೃಷಿ ಸಬ್ಸಿಡಿಗೆ 1 ಸಾವಿರ ಅರ್ಜಿ

09:29 AM Nov 28, 2020 | Suhan S |

ಕುಂದಾಪುರ, ನ. 27: ಕೋವಿಡ್ ನಂತರದ ದಿನಗಳಲ್ಲಿ ಆತ್ಮನಿರ್ಭರ ಭಾರತವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೀನುಗಾರಿಕೆ ಇಲಾಖೆ ಕೈಗೊಂಡ ಪಂಜರ ಕೃಷಿ ಮೀನುಗಾರಿಕೆ ಯೋಜನೆ ಯಶಸ್ಸು ಕಾಣುವ ಹಂತದಲ್ಲಿದೆ. ಹಿನ್ನೀರು ಮೀನುಗಾರಿಕೆ ಕೃಷಿ ಸಬ್ಸಿಡಿಗೆ 1 ಸಾವಿರಕ್ಕೂ ಮಿಕ್ಕಿ ಅರ್ಜಿಗಳು ಬಂದಿವೆ. ಕಳೆದ ವರ್ಷಕ್ಕಿಂತ 4 ಪಟ್ಟು ಬೇಡಿಕೆ ಹೆಚ್ಚಾಗಿದೆ.

Advertisement

ಪ್ರಯೋಗಶೀಲ ಮನಸ್ಸು :

ತಲ್ಲೂರಿನ ರವಿ ಖಾರ್ವಿ ಅವರು ಇಲ್ಲಿನ ಪಂಚಗಂಗಾವಳಿಯಲ್ಲಿ ಪ್ರಯೋಗಾತ್ಮಕ ಪಂಜರ ಕೃಷಿ ಮೀನುಗಾರಿಕೆ ಮಾಡಿದ್ದು,  ಈಗ ಬಲಿತ ಮೀನುಗಳನ್ನು ತೆಗೆಯು ವಲ್ಲಿಗೆ ಮೀನುಗಾರಿಕೆ ಇಲಾಖೆ ಅಧಿಕಾರಿ ಗಳು ಕೂಡ ಭೇಟಿ ನೀಡಿ ಮೆಚ್ಚುಗೆ ಸೂಚಿಸಿದ್ದಾರೆ. ರವಿ ಟೈಲ್ಸ್‌ ಕೆಲಸಕ್ಕೆ  ಮಾಡುತ್ತಿದ್ದು   ಇವರು ಬಿಡುವಿನ ಅವಧಿಯಲ್ಲಿ ಪಂಜರ ಕೃಷಿ ಮೀನುಗಾರಿಕೆ ಮಾಡುತ್ತಾರೆ. ಅದರಲ್ಲೂ ದೊಡ್ಡ ಮೊತ್ತದ ಲಾಭಗಳಿಸಬಹುದು ಎಂದು ಸಾಧಿಸಿ ತೋರಿಸಿದ್ದಾರೆ.

ಮಾರ್ಪಾಡು :

ಕೇರಳದಲ್ಲಿ ಪಂಜರ ಕೃಷಿ ಯಶಸ್ಸು ಕಂಡಿದ್ದು  ಉಪ್ಪುಂದ ಭಾಗದಲ್ಲಿ ಕಳೆದ  ಕೆಲವು ವರ್ಷಗಳಿಂದ ಈ ಕೃಷಿ ಚಾಲ್ತಿ ಯಲ್ಲಿದೆ. ಕೇಂದ್ರ ಸರಕಾರ ಪಂಜರ ನಿರ್ಮಾಣಕ್ಕೆ ಅನುದಾನ ಕೂಡ ನೀಡುತ್ತದೆ.  ಇದೆಲ್ಲ ಗಮನಿಸಿ ಪಂಜರದಲ್ಲಿ ಸ್ವಲ್ಪ  ಮಾರ್ಪಾಡು ಮಾಡಿ ಆಸಕ್ತಿ ವಹಿಸಿ ಪಂಜರ ಕೃಷಿಯಲ್ಲಿ ತೊಡಗಿಕೊಂಡರು. ಹಾಗಾಗಿ ಆದಾಯ ಕೈ ಹಿಡಿಯಿತು. ಪರಿಣಾಮವಾಗಿ ಇಲ್ಲಿನ ಪಂಚಗಂಗಾವಳಿಯಲ್ಲಿ ನೂರಕ್ಕೂ ಅಧಿಕ ಪಂಜರಗಳಿವೆ.

Advertisement

ಖರ್ಚು :  13×13 ಅಡಿಯ 2 ಗೂಡಿಗೆ ಕೇಂದ್ರ ಸರಕಾರ 1.4 ಲಕ್ಷ ರೂ. ಸಬ್ಸಿಡಿ ನೀಡುತ್ತಿತ್ತು. ಆದರೆ ಆ ವಿನ್ಯಾಸ ಕರಾವಳಿ ಭಾಗಕ್ಕೆ ಸೂಕ್ತವಾಗಿಲ್ಲ ಎನ್ನುವುದು ರವಿಯವರ ಅನುಭವದ ಮಾತು. ಬದಲಾಗಿ 55 ಸಾವಿರ ರೂ. ಖರ್ಚು ಮಾಡಿ ಮೂರು ವಿಭಾಗಗಳನ್ನು ಮಾಡಬಲ್ಲ 20×10 ಅಡಿಯ ಗೂಡು ತಯಾರಿಸಿದರು. ಮೀನಿನ ಮರಿ ಖರೀದಿ, ಗೂಡು, ಮೀನಿಗೆ ಆಹಾರ, ಕೂಲಿ ಇತ್ಯಾದಿ ಸೇರಿ 1,500 ಮೀನಿಗೆ 2.85 ಲಕ್ಷ ರೂ. ಖರ್ಚಾಗುತ್ತದೆ.  ಪಲ್ಸ್‌ಪೋರ್ಟ್‌, ರೆಡ್‌ ಸ್ನಾಪರ್‌, ಸೀಬಾಸ್‌ ಮೊದಲಾದ ತಳಿಯ ಮೀನುಗಳನ್ನು ಪಂಜರ ಕೃಷಿಯಲ್ಲಿ ಬೆಳೆಸಲಾಗುತ್ತದೆ. ಬಲಿತ ಮೀನು ತಲಾ 1 ಕೆ.ಜಿ. ತೂಗಿದರೂ 400 ರೂ. ಧಾರಣೆಯಂತೆ 1,200 ಕೆ.ಜಿ.ಗೆ 4.80 ಲಕ್ಷ ರೂ. ಆದಾಯ ಬರುತ್ತದೆ. 300 ಮೀನುಗಳ ಲೆಕ್ಕ ಬಿಡಲಾಗಿದ್ದು, 40 ಸಾವಿರ ರೂ. ಕೂಲಿ ವೇತನ ಲೆಕ್ಕ ಇಡಲಾಗಿದೆ.  ಬಲಿತ ಮೀನು 3ರಿಂದ 4 ಕೆ.ಜಿ. ವರೆಗೆ ಬರುವ ಕಾರಣ 12 ಲಕ್ಷ ರೂ.ಗೂ ಹೆಚ್ಚು ಆದಾಯ ಬರುವುದರಲ್ಲಿ ಸಂಶಯ ಇಲ್ಲ.  1 ಮರಿ ಖರೀದಿಗೆ 35ರಿಂದ 40 ರೂ.  ಇದ್ದರೆ 16 ತಿಂಗಳು ಸಾಕಿ ಮಾರಾಟ ಮಾಡುವಾಗ 1,200 ರೂ.ವರೆಗೆ ದೊರೆಯತ್ತದೆ.

ಬೇಡಿಕೆ ಹೆಚ್ಚಾಗಿದೆ :  ಮನೆ ಸಮೀಪ, ಪ್ರತ್ಯೇಕ ಕೊಳ ಇಲ್ಲದೆ  ಕಡಿಮೆ ಖರ್ಚಿನಲ್ಲಿ, ಸ್ಥಳೀಯ ಮೀನನ್ನೇ ಆಹಾರವಾಗಿ ಬಳಸಿ ಪಂಜರ ಕೃಷಿ ಮೀನುಗಾರಿಕೆ ನಡೆಸಬಹುದು. ಇಲಾಖೆಯಿಂದ ಮೀನುಮರಿ ದರ, ದಾಸ್ತಾನಿನ ಮೇಲೆ ಸಬ್ಸಿಡಿ ನೀಡಲಾಗುತ್ತಿದ್ದು ಒಬ್ಬ ವ್ಯಕ್ತಿಗೆ ಗರಿಷ್ಠ 60 ಸಾವಿರ ರೂ.ವರೆಗೆ ನೀಡಲು ಅವಕಾಶ ಇದೆ. ಕಳೆದ ವರ್ಷ ಕುಂದಾಪುರದಲ್ಲಿ 270 ಅರ್ಜಿಗಳು ಬಂದಿದ್ದು ಈ ವರ್ಷ ತರಬೇತಿ, ಕಾರ್ಯಾಗಾರ ಬಳಿಕ 1 ಸಾವಿರಕ್ಕೂ ಮಿಕ್ಕಿ ಅರ್ಜಿಗಳು ಬಂದಿವೆ. ಗಣೇಶ್‌, ಉಪ ನಿರ್ದೇಶರು, ಮೀನುಗಾರಿಕೆ ಇಲಾಖೆ, ಉಡುಪಿ

ಸ್ವೋದ್ಯೋಗಕ್ಕೆ ಉತ್ತಮ :  ಬೇರೆ ಉದ್ಯೋಗ ಮಾಡುತ್ತಾ ಬಿಡುವಿನ ವೇಳೆಯಲ್ಲಿ ಮಾಡಬಹುದಾದ ಕೃಷಿ ಇದಾಗಿದೆ.  ಸ್ವಂತ ದುಡಿದರೆ ಹೆಚ್ಚು ಆದಾಯ ಗಳಿಸಬಹುದು.  ರವಿ ಖಾರ್ವಿ, ತಲ್ಲೂರು

Advertisement

Udayavani is now on Telegram. Click here to join our channel and stay updated with the latest news.

Next