Advertisement

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹಿನ್ನಡೆ

07:03 AM May 20, 2019 | mahesh |

ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ನಿರೀಕ್ಷೆಯಂತೆಯೇ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಊಹಿಸಿವೆ. ಆದರೆ ಬಿಜೆಪಿ ಮಿತ್ರಪಕ್ಷಗಳು ಈ ಭಾಗದಲ್ಲಿ ಗಮನಾರ್ಹ ಸಾಧನೆ ಮಾಡಲಿವೆ. ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್‌ ತನ್ನ ಸ್ಥಾನವನ್ನು ಕಾಯ್ದುಕೊಳ್ಳಲಿದೆ. ಆಂಧ್ರದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಹೆಚ್ಚಿನ ಸೀಟ್‌ಗಳಲ್ಲಿ ಗೆಲ್ಲಲಿದ್ದರೆ, ಟಿಡಿಪಿ ಹಿನ್ನಡೆ ಸಾಧಿಸಲಿದೆ. ಇದರಿಂದ ವೈಎಸ್‌ಆರ್‌ಸಿಪಿ ಹೆಚ್ಚಿನ ಸೀಟು ಗೆಲ್ಲುವುದು ಎನ್‌ಡಿಎಗೆ ನೆರವಾದೀತು ಎನ್ನಲಾಗಿದೆ.

Advertisement

ಇನ್ನು ತಮಿಳುನಾಡಿನಲ್ಲಿ ಕಾಂಗ್ರೆಸ್‌ ಹಾಗೂ ಡಿಎಂಕೆ ಮೈತ್ರಿ ಮುಂಚೂಣಿಯಲ್ಲಿರಲಿದ್ದು, ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿಗೆ ಹಿನ್ನಡೆಯಾಗಲಿದೆ ಎಂದು ಸಮೀಕ್ಷೆಗಳು ಊಹಿಸಿವೆ. ಬಿಜೆಪಿ ಇಲ್ಲಿ ಎಐಎಡಿಎಂಕೆ, ಪಿಎಂಕೆ, ಡಿಎಂಡಿಕೆ ಮತ್ತು ಪುತಿಯ ತಮಿಳಗಂ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ, 4-6 ಸೀಟ್‌ಗಳು ಸಿಗುತ್ತವೆ ಎಂದು ಊಹಿಸಲಾಗಿದೆ. ಹೀಗಾಗಿ ಇಲ್ಲಿ ಯುಪಿಎಗೆ ಹೆಚ್ಚಿನ ಬೆಂಬಲ ಸಿಗುವ ಸಾಧ್ಯತೆಯಿದೆ.

ಕೇರಳದಲ್ಲಿ ಕಾಂಗ್ರೆಸ್‌ ಅಲೆ ಇದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ವಯನಾಡ್‌ನಿಂದ ರಾಹುಲ್‌ ಸ್ಪರ್ಧಿಸಿದ್ದು ಉತ್ತಮ ಪ್ರತಿಫ‌ಲ ನೀಡುತ್ತಿದ್ದು, 20 ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಗೆಲ್ಲುವ ನಿರೀಕ್ಷೆಯಿದೆ. ಕೆಲವು ಸಮೀಕ್ಷೆಗಳ ಪೈಕಿ ಬಿಜೆಪಿ ಶೂನ್ಯ ಸಾಧನೆ ಮಾಡಲಿದ್ದು, ಬಹುತೇಕ ಸಮೀಕ್ಷೆಗಳ ಪೈಕಿ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಇಲ್ಲಿ ಶಬರಿಮಲೆ ವಿವಾದವು ಬಿಜೆಪಿಗೆ ಮತವಾಗಿ ಪರಿವರ್ತನೆಯಾದಂತಿಲ್ಲ.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಉತ್ತಮ ನೆಲೆ ಇರುವುದು ಕರ್ನಾಟಕದಲ್ಲಿ. ಈ ಬಾರಿ ಬಿಜೆಪಿ ಪರ ಅಲೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದ್ದು, ಬಹುತೇಕ ಸಮೀಕ್ಷೆಗಳು 21 ರಿಂದ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಊಹಿಸಿವೆ. ಮೂರರಿಂದ ಆರು ಕ್ಷೇತ್ರಗಳಿಗೆ ಕಾಂಗ್ರೆಸ್‌ ಸೀಮಿತವಾದರೆ, ಒಂದರಲ್ಲಿ ಜೆಡಿಯು ಗೆಲ್ಲಲಿದೆ. ಕೆಲವು ಸಮೀಕ್ಷೆಗಳ ಪ್ರಕಾರ ಜೆಡಿಎಸ್‌ ಶೂನ್ಯ ಸಂಪಾದನೆಯನ್ನೂ ಮಾಡುವ ಸಾಧ್ಯತೆಯಿದೆ.

ಹಿಂದಿ ಹಾರ್ಟ್‌ಲ್ಯಾಂಡ್‌ ಕಾಯ್ದುಕೊಂಡ ಬಿಜೆಪಿ
ಲೋಕಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷವನ್ನು ನಿರ್ಧರಿಸುವುದೇ ಹಿಂದಿ ಭಾಷಿಕ ರಾಜ್ಯಗಳು ಎಂಬುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ಮಾತು. ಈ ಪೈಕಿ ಉತ್ತರ ಪ್ರದೇಶ (80), ಬಿಹಾರ (40), ರಾಜಸ್ಥಾನ (25) ಮತ್ತು ಮಧ್ಯಪ್ರದೇಶ (29) ರಾಜ್ಯಗಳು ಮಹತ್ವ ಪಡೆದಿದ್ದು, ಎಲ್ಲ ಪಕ್ಷಗಳೂ ಈ ರಾಜ್ಯಗಳನ್ನೇ ಹೆಚ್ಚು  ಕೇಂದ್ರೀಕರಿಸುತ್ತಲೂ ಇವೆ. ಇಲ್ಲಿನ ಪ್ರಾದೇಶಿಕ ಪಕ್ಷಗಳೊಂದಿಗೆ ರಾಷ್ಟ್ರೀಯ ಪಕ್ಷಗಳು
ಹೋರಾಡುತ್ತಿವೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮಹತ್ವದ ಪಕ್ಷಗಳಾಗಿದ್ದು, ಇವುಗಳನ್ನು ರಾಷ್ಟ್ರೀಯ ಪಕ್ಷ ಎದುರಿಸಬೇಕಾಗಿದೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಉತ್ತರ ಪ್ರದೇಶದಲ್ಲಿ 56 ಸೀಟ್‌ಗಳನ್ನು ಗೆಲ್ಲಲಿದೆ ಎಂದು ಟೈಮ್ಸ್‌ನೌ-ವಿಎಂಆರ್‌ ಎಕ್ಸಿಟ್‌ ಪೋಲ್‌ ನಿರೀಕ್ಷಿಸಿದ್ದರೆ, ಕಾಂಗ್ರೆಸ್‌ ಕೇವಲ 2 ಹಾಗೂ ಇತರರು 20 ಕ್ಷೇತ್ರಗಳಲ್ಲಿ ಗೆಲ್ಲಲಿವೆ ಎನ್ನಲಾಗಿದೆ.  ರಾಜಸ್ಥಾನದಲ್ಲಿ ಕಳೆದ ಬಾರಿ 25 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿತ್ತು. ಈ ಬಾರಿಯೂ ಬಹುತೇಕ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆಯನ್ನು ವಿವಿಧ ಸಮೀಕ್ಷೆಗಳು ಮಾಡಿವೆ. ಬಿಹಾರದಲ್ಲೂ
ವಿವಿಧ ಪಕ್ಷಗಳ ಮಧ್ಯೆ ಭಾರಿ ಹೋರಾಟವಿದ್ದು ಬಿಜೆಪಿಯೇ ಹೆಚ್ಚಿನ ಸೀಟ್‌ಗಳಲ್ಲಿ ಗೆಲ್ಲಲಿದೆ. ಮಧ್ಯಪ್ರದೇಶದಲ್ಲಿ ಕಳೆದ ಬಾರಿ ಬಹುತೇಕ ಕ್ಲೀನ್‌ ಸ್ವೀಪ್‌ ಮಾಡಿದ್ದ ಬಿಜೆಪಿ ಈ ಬಾರಿಯೂ ಬಹುತೇಕ ಅದೇ ಸ್ಥಾನದಲ್ಲಿರಲಿದೆ. ಇನ್ನು ಪಂಜಾಬ್‌ನಲ್ಲಿ ಸಹಜವಾಗಿಯೇ
ಬಿಜೆಪಿ ಹಿನ್ನಡೆ ಸಾಧಿಸಲಿದ್ದು, ಕಾಂಗ್ರೆಸ್‌ ಮುಂಚೂಣಿಯಲ್ಲಿರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next