Advertisement

ಎಚ್‌ಕೆಆರ್‌ಡಿಬಿ ಶೇ.50 ಕಾಮಗಾರಿ ಅಪೂರ್ಣ!

05:08 PM Aug 15, 2018 | |

ರಾಯಚೂರು: ನಂಜುಂಡಪ್ಪ ವರದಿ ಆಶಯದಂತೆ ಹಿಂದುಳಿದ ಹೈದರಾಬಾದ್‌-ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಪ್ರಾತಿನಿಧ್ಯ ನೀಡಿ ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಅದು ನಿರೀಕ್ಷಿತ ಮಟ್ಟದಲ್ಲಿ ಖರ್ಚಾಗದೆ ಉಳಿಯುತ್ತಿದೆ. ಎಚ್‌ಕೆಆರ್‌ಡಿಬಿಯಡಿ ಶುರುವಾದ ಕಾಮಗಾರಿಗಳಲ್ಲಿ ಈವರೆಗೆ ಕೇವಲ ಶೇ.50ರಷ್ಟು ಮಾತ್ರ ಮುಗಿದಿವೆ.

Advertisement

ಒಂದೆಡೆ ಈ ಭಾಗ ಹಿಂದುಳಿದಿದೆ ಎಂಬ ಆರೋಪಗಳು, ಮತ್ತೊಂದೆಡೆ ಅಭಿವೃದ್ಧಿಗೆ ಅವಕಾಶವಿದ್ದಾಗ್ಯೂ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಕೊರಗು. 2013-14ನೇ ಸಾಲಿನಲ್ಲಿ ಶುರುವಾದ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸರ್ಕಾರ ವರ್ಷದಿಂದ ವರ್ಷಕ್ಕೆ ಅನುದಾನ ಪ್ರಮಾಣವನ್ನು ಹೆಚ್ಚಿಸುತ್ತಲೇ ಬಂದಿದೆ. ಆದರೆ, ಅದು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಬಳಕೆಯಾಗುತ್ತಿಲ್ಲ. ಅದಕ್ಕೆ ಇಲ್ಲಿನ ಜನನಾಯಕರ ನಿರುತ್ಸಾಹ ಹಾಗೂ ಅಸಹಾಯಕತೆ ಅಲ್ಲದೇ ಮತ್ತೇನು ಕಾರಣವಲ್ಲ. ಕಳೆದ ಐದು ವರ್ಷದಲ್ಲಿ ಸರ್ಕಾರದಿಂದ 4,381 ಕೋಟಿ ರೂ. ಅನುಮೋದಿತ ಅನುದಾನವಿದ್ದರೆ ಸರ್ಕಾರದಿಂದ 2,880 ಕೋಟಿ ರೂ. ಬಿಡುಗಡೆಯಾಗಿದೆ. ಅದರಲ್ಲೂ 2,201 ಕೋಟಿ ಮಾತ್ರ ಖರ್ಚಾಗಿದೆ. ಬೀದರ ಜಿಲ್ಲೆಯಲ್ಲಿ ಶೇ.56ರಷ್ಟು ಅನುದಾನ ಖರ್ಚಾದರೆ, ಕಲಬುರಗಿ ಶೇ.52, ಯಾದಗಿರಿ ಶೇ.45, ರಾಯಚೂರು ಶೇ.39, ಕೊಪ್ಪಳ ಶೇ.53, ಬಳ್ಳಾರಿ ಶೇ.39ರಷ್ಟು ಅನುದಾನ ಖರ್ಚು ಮಾಡಿವೆ. ಅನುಮೋದಿತ ಅನುದಾನವಿರಲಿ ಸರ್ಕಾರ ಬಿಡುಗಡೆ ಮಾಡಿದ ಅನುದಾನದಲ್ಲೂ ಶೇ.24ರಷ್ಟು ಇನ್ನೂ ಖರ್ಚಾಗದೆ ಉಳಿದಿದೆ. ಇರುವುದರಲ್ಲಿಯೇ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಬೀದರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ ರಾಯಚೂರು, ಬಳ್ಳಾರಿ ಕೊನೆ ಸ್ಥಾನದಲ್ಲಿವೆ. 

13,652 ಕಾಮಗಾರಿಗಳು: ಎಚ್‌ಕೆಆರ್‌ ಡಿಬಿಯಡಿ ಆರು ಜಿಲ್ಲೆಗಳಲ್ಲಿ 13,652 ಕಾಮಗಾರಿಗಳು ಮಂಜೂರಾಗಿವೆ. ಅದರಲ್ಲಿ ಈವರೆಗೆ 7,681 ಕಾಮಗಾರಿಗಳು ಮುಗಿದಿದ್ದರೆ, 3,536 ಕಾಮಗಾರಿಗಳು ಇನ್ನೂ ನಿರ್ಮಾಣದ ಹಂತದಲ್ಲಿವೆ. 2,435 ಕಾಮಗಾರಿಗಳು ಇನ್ನೂ ಟೆಂಡರ್‌ ಹಂತದಲ್ಲಿವೆ. ಇನ್ನು ಎಚ್‌ಕೆಆರ್‌ ಡಿಬಿಯಿಂದಲೇ ಕೈಗೊಂಡ ಕಾಮಗಾರಿಗಳಲ್ಲಿ 449ರಲ್ಲಿ 262 ಮಾತ್ರ ಪೂರ್ಣಗೊಂಡಿವೆ. 168 ಪ್ರಗತಿಯಲ್ಲಿದ್ದರೆ, 19 ಕಾಮಗಾರಿಗಳು ಇನ್ನೂ ಟೆಂಡರ್‌ ಹಂತದಲ್ಲಿವೆ. ಆದರೆ, ಅನುದಾನ ಬಳಕೆಯಲ್ಲಿ ಮಾತ್ರ ಮಂಡಳಿ ಅಧಿಕಾರಿಗಳು ಶೇ.74ರಷ್ಟು ಗುರಿ ತಲುಪಿದ್ದಾರೆ. ಆದರೆ, ಜನಪ್ರತಿನಿಧಿಗಳೇ ಹಿಂದುಳಿದಿದ್ದಾರೆ.

ಬೇಡಿಕೆಯಷ್ಟು ನೀಡದ ಸರ್ಕಾರ: ಸರ್ಕಾರ ಕೂಡ ಬಜೆಟ್‌ನಲ್ಲಿ ಮೀಸಲಿಟ್ಟ ಹಣವನ್ನು ಯಾವ ವರ್ಷದಲ್ಲೂ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿಲ್ಲ. ಆದರೆ, ನೀಡಿದ ಅನುದಾನ ಸರಿಯಾಗಿ ಬಳಕೆಯಾಗದ ಹಿನ್ನೆಲೆಯಲ್ಲಿ ಸರ್ಕಾರವೂ ಹೆಚ್ಚುವರಿ ಅನುದಾನ ನೀಡಲಿರಲಿಕ್ಕಿಲ್ಲ. ಹೀಗಾಗಿ ಸಿಕ್ಕ ಅನುದಾನ ಬಳಸಿಕೊಳ್ಳುವ ಜಾಣತನ ಈ ಭಾಗದ ನಾಯಕರಿಗೆ, ಅಧಿಕಾರಿಗಳಿಗೆ ಇಲ್ಲದಿರುವುದು ಇದರಿಂದಲೇ ಗೊತ್ತಾಗುತ್ತದೆ.

ಎಚ್‌ಕೆಆರ್‌ಡಿಬಿಗೆ ಬಿಡುಗಡೆಯಾದ ಅನುದಾನ ಖರ್ಚಾಗದಿದ್ದಲ್ಲಿ ಅದನ್ನು ಮುಂದಿನ ವರ್ಷಕ್ಕೆ ಬಳಕೆಗೆ ಅವಕಾಶವಿದೆ. ಮೊದಲ ಎರಡು ವರ್ಷ ಆಯವ್ಯಯ ರಾಜ್ಯಪಾಲರ ಬಳಿ ಹೋಗಿ ಬರಬೇಕಿತ್ತು. ಅದರಿಂದ ಅನುದಾನ ಖರ್ಚಾಗದೆ ಉಳಿಯುತ್ತಿತ್ತು. ಆದರೆ, ಈಗ ಆ ಸಮಸ್ಯೆ ಇಲ್ಲ. ಈ ಬಾರಿ ಚುನಾವಣೆ ವರ್ಷವಾದ ಕಾರಣ ಅನುದಾನ ಖರ್ಚು ನಿಧಾನಗತಿಯಲ್ಲಿ ಆಗಬಹುದು.
. ಪ್ರಿಯಾಂಕ್‌ ಖರ್ಗೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ

Advertisement

„ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next