Advertisement

ಹಿಂದುಳಿದ ಸಮುದಾಯದವರು ಸಂಘಟಿತರಾಗಬೇಕು

01:08 PM Feb 21, 2018 | |

ಮೈಸೂರು: ಸರ್ವಜ್ಞರ ಜನ್ಮ ರಹಸ್ಯವನ್ನೇ ಮರೆಮಾಚುವ ಕೆಲಸ ನಡೆದಿದ್ದು, ಅಂತಹ ಸುಳ್ಳುಗಳಿಗೆ ಕಿವಿಗೊಡದೆ ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಬೇಕು ಎಂದು ಶಾಸಕ ಎಂ.ಕೆ.ಸೋಮಶೇಖರ್‌ ಹೇಳಿದರು.

Advertisement

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಮಂಗಳವಾರ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,  ತ್ರಿಪದಿಗಳ ಮೂಲಕ ಸಾಹಿತ್ಯ ಲೋಕಕ್ಕೆ ಅದ್ಭುತ ಕೊಡುಗೆ ನೀಡಿರುವ ಸರ್ವಜ್ಞರನ್ನು ನೆನೆಸಿಕೊಳ್ಳುವ ಕಾರ್ಯ ಮಹತ್ತರವಾದುದು.

ಮಹಾನ್‌ ದಾರ್ಶನಿಕರನ್ನು ಸಮಾಜಕ್ಕೆ ಪರಿಚಯಿಸುವ ಜತೆಗೆ ಹಿಂದುಳಿದ ಸಮಾಜಗಳು ಸಂಘಟಿತರಾಗಲಿ ಎಂಬ ಕಾರಣದಿಂದ ಸಿದ್ದರಾಮಯ್ಯ ಸರ್ಕಾರ ಹಲವು ದಾರ್ಶನಿಕರ ಜಯಂತಿಗಳನ್ನು ಆಚರಿಸುತ್ತಿದೆ ಎಂದರು. ಮಹಾನ್‌ ಕವಿ ಸರ್ವಜ್ಞರ ಅನುಭವಾಮೃತದಿಂದ ಬಂದಿರುವ ತ್ರಿಪದಿಗಳು ಸಾರ್ವಕಾಲಿಕ.

ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಸರ್ವಜ್ಞ ಮುಟ್ಟದ ವಿಷಯವೇ ಇಲ್ಲ. ತಾವು ಅನುಭವಿಸಿದ ನೋವನ್ನೇ ಅವರು ತ್ರಿಪದಿಗಳಲ್ಲಿ ಹೇಳಿದ್ದಾರೆ ಎಂದರು. ಹಿಂದುಳಿದ ಸಮಾಜದಲ್ಲಿ ಹುಟ್ಟಿದ ವ್ಯಾಸ, ವಾಲ್ಮೀಕಿ, ಸರ್ವಜ್ಞರ ಹುಟ್ಟನ್ನೇ ಮರೆಮಾಚುವ ಕೆಲಸ ನಡೆದಿದೆ. ಇಂತಹ ಸುಳ್ಳುಗಳಿಗೆ ಕಿವಿಗೊಡದೆ ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಿರಿ ಎಂದು ಹೇಳಿದರು.

ಸಮಾಜ ಜಾಗೃತಿಗೆ ಅನುಕೂಲ: ಮುಖ್ಯಭಾಷಣ ಮಾಡಿದ ಹುಣಸೂರಿನ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಆರ್‌.ಗುರುಸ್ವಾಮಿ, ಸರ್ಕಾರ ವರ್ಷಕ್ಕೆ 30 ಜಯಂತಿಗಳನ್ನು ಮಾಡುತ್ತಾ ಬಂದಿದೆ. ಇದರ ಹಿಂದೆ ರಾಜಕೀಯ ಉದ್ದೇಶ ಏನೇ ಇದ್ದರೂ ಇದರಿಂದ ಸಮಾಜದ ಜಾಗೃತಿಗೆ ಅನುಕೂಲವಾಗಲಿದೆ ಎಂದರು.

Advertisement

ಕನ್ನಡ ಪ್ರಜ್ಞೆ ಇದ್ದ ಕವಿ ಸರ್ವಜ್ಞ, ಜನಸಾಮಾನ್ಯರನ್ನು ಎಚ್ಚರಿಸಲು ತ್ರಿಪದಿ ಬರೆದ. ವೈದಿಕಶಾಹಿಗಳು ಪ್ರತಿಭಾವಂತರೆಲ್ಲ ನಮ್ಮ ಬೀಜದಿಂದಲೇ ಹುಟ್ಟಿದವರು ಎಂಬ ಭಾÅಂತಿಯಲ್ಲಿದ್ದಾರೆ. ಇತರೆ ವರ್ಗದ ಪ್ರತಿಭಾವಂತರನ್ನು ಹೈಜಾಕ್‌ ಮಾಡುವ ಕೆಲಸ ನಡೆದಿದೆ. ಸರ್ವಜ್ಞನನ್ನು ಅನೈತಿಕತೆಯ ಸಂಬಂಧದಿಂದ ಹುಟ್ಟಿದವನು ಎಂದು ದಾಖಲಿಸಲಾಗಿದೆ. ಕುಂಬಾರ ಗುಂಡಯ್ಯನನ್ನೂ ವಿದ್ವಾಂಸರು ಅಲಕ್ಷ್ಯ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರು ಮಹಾ ನಗರಪಾಲಿಕೆ ಸದಸ್ಯ ಪ್ರಕಾಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪ, ಕನ್ನಡ ಚಳವಳಿಗಾರ ತಾಯೂರು ವಿಠಲಮೂರ್ತಿ, ಸಮುದಾಯದ ಮುಖಂಡರುಗಳಾದ ನಾಗಣ್ಣ, ರೇಣುಕಾಂಬ, ರಾಮು, ಹರೀಶ್‌, ತಿಮ್ಮಶೆಟ್ಟಿ, ಗುರುಪುರ ಸಣ್ಣಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

31 ಜನ ಜನಪ್ರತಿನಿಧಿಗಳಲ್ಲಿ ಬಂದವರು ಒಬ್ಬರೇ!: ಕವಿ ಸರ್ವಜ್ಞ ಜಯಂತಿ ಸರ್ಕಾರಿ ಕಾರ್ಯಕ್ರಮವಾದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಶಿಷ್ಠಾಚಾರದ ಪ್ರಕಾರ ಜಿಲ್ಲೆಯ 31 ಮಂದಿ ಚುನಾಯಿತ ಪ್ರತಿನಿಧಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ಆದರೆ, ಶಾಸಕ ಎಂ.ಕೆ.ಸೋಮಶೇಖರ್‌ ಹೊರತುಪಡಿಸಿದರೆ ಯಾವುದೇ ಜನಪ್ರತಿನಿಧಿಗಳು ಇತ್ತ ಬರಲಿಲ್ಲ.

ಜತೆಗೆ ಸಂಘಟನೆ ಕೊರತೆಯಿಂದ ಬೆರಳೆಣಿಕೆ ಸಭಿಕರಿಂದ ಕಲಾಮಂದಿರ ಭಣಗುಡುತ್ತಿತ್ತು.ಪೇಚಿಗೆ ಸಿಲುಕಿದ ಶಾಸಕ ಸೋಮಶೇಖರ್‌ ಶಾಸಕ ಎಂ.ಕೆ.ಸೋಮಶೇಖರ್‌ ತಮ್ಮ ಭಾಷಣದ ನಡುವೆ ಕೇಂದ್ರ ಸರ್ಕಾರ ಏನೂ ಮಾಡಿಲ್ಲ ಎಂದಾಗ ಸಭಿಕರೊಬ್ಬರು ರಾಜ್ಯಸರ್ಕಾರವು ಏನೂ ಮಾಡಿಲ್ವಲ್ಲಾ ಎಂದಾಗ ಪೇಚಿಗೆ ಸಿಲುಕಿದರು. ಹಿಂದುಳಿದ ಸಮಾಜಗಳವರು ಸಂಘಟಿತರಾಗಬೇಕು. ಆಗ ಮಾತ್ರ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯ.

ಇಲ್ಲವಾದಲ್ಲಿ ಬಲಿಷ್ಠರ ಪಾಲಾಗುತ್ತವೆ ಎಂದು ಹೇಳಲು ಹೊರಟ ಶಾಸಕ ಸೋಮಶೇಖರ್‌, ಕೇಂದ್ರ ಸರ್ಕಾರ ಏನೂ ಮಾಡಿಲ್ಲ ಎಂದರು. ಸಭಿಕರ ಮಧ್ಯೆಯಿಂದ ರಾಜ್ಯ ಸರ್ಕಾರ ಸಹ ಏನೂ ಮಾಡಿಲ್ವಲ್ಲಾ ಸಾರ್‌ ಎಂಬ ಪ್ರಶ್ನೆ ತೂರಿಬಂತು. ಇದರಿಂದ ಪೇಚಿಗೆ ಸಿಲುಕಿದ ಶಾಸಕರು, ಇದು, ಇದು ಪ್ರಾರಂಭ ಮಾಡಿದ್ದೇವಲ್ಲ, 3 ವರ್ಷದ ಹಿಂದೆ ಸರ್ವಜ್ಞ ಜಯಂತಿ ಶುರು ಮಾಡಿದ್ದೇವೆ. ನಾನಾಗಿ ರಾಜಕೀಯ ಮಾತನಾಡಲಿಲ್ಲ. ನೀವಾಗಿ ಕೇಳಿದ್ದಕ್ಕೆ ಹೇಳಿದೆ ಎಂದು ಸಮಜಾಯಿಷಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next