ಬೆಂಗಳೂರು: ಜಾತಿ ಹೆಸರಿನಲ್ಲಿ ದಬ್ಟಾಳಿಕೆಯ ಜತೆಗೆ ಧರ್ಮದ ಹೆಸರಿನ ಚೌಕಟ್ಟು ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ಹಿಂದುಳಿದ ವರ್ಗಗಳ ಸಮುದಾಯಗಳು ತ್ರಿಶಂಕು ಸ್ಥಿತಿಯಲ್ಲಿವೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಗಾಂಧಿಭವನದಲ್ಲಿ ಶುಕ್ರವಾರ ಅಖಿಲ ಕರ್ನಾಟಕ ಹೆಳವ ಸಮಾಜ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮುಖಂಡರ ಸಭೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಬಹುಸಂಖ್ಯಾತರಿಗೆ ಮೀಸಲು ಅಲ್ಲ.ಎಲ್ಲಾ ವರ್ಗದ ಜನರಿಗೂ ಸಂವಿಧಾನದಲ್ಲಿ ಅವಕಾಶವಿದೆ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ತಿಳಿಸಿದರು.
ರಾಜಕೀಯ ಮುಖಂಡರು ಯಾವ ಪಕ್ಷ ಅಂತ ನೋಡಬೇಡಿ.ನಿಮಗೆ ಯಾರು ಸಹಾಯ ಮಾಡುತ್ತಾರೋ ಅವರಿಗೆ ಮತ ಹಾಕಿ.ಜನಪ್ರತಿನಿಧಿಗಳಿಗೆ ನಮ್ಮ ಶಕ್ತಿ ಏನು ಎಂಬುದು ಗೊತ್ತಾಗುತ್ತದೆ ಎಂದರು.
ಇದನ್ನೂ ಓದಿ :ಪ್ರಾಧಿಕಾರದಿಂದ ಮಲತಾಯಿ ಧೋರಣೆ : ನೆಲಕಚ್ಚಿದ ಆನೆಗೊಂದಿ ಪ್ರವಾಸೋದ್ಯಮ
ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯಾಧ್ಯಕ್ಷ ಎಂ.ನಾಗರಾಜ್, ಹೆಳವರು ಮೂಲತಃ ಅಲೆಮಾರಿಗಳು, ಈ ಸಮುದಾಯಕ್ಕೆ ಸುಲಭವಾಗಿ ಜಾತಿ ಪ್ರಮಾಣಪತ್ರ ಸಿಗುವುದಿಲ್ಲ. ಶೈಕ್ಷಣಿಕವಾಗಿ ಶೇ.2ರಷ್ಟು ಮಾತ್ರ ಮುಂದುವರಿದಿದ್ದು ಬಹುತೇಕರಿಗೆ ಮತದಾರರ ಗುರುತಿನ ಚೀಟಿ ಇಲ್ಲ, ಪಡಿತರ ಚೀಟಿ ಮತ್ತು ಆಧಾರ ಕಾರ್ಡ್ ನಂತಹ ಗುರುತೂ ಸಹ ಇಲ್ಲ. ಆ ಹಿನ್ನೆಲೆಯಲ್ಲಿ ಸರ್ಕಾರ ಹೆಳವ ಸಮಾಜದ ಅಭಿವೃದ್ದಿಗೆ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.
ಹೆಳವ ಸಮಾಜದ ಗುರು ಪೀಠಾಧ್ಯಕ್ಷರಾದ ಶ್ರೀಬಸವ ಭೃಂಗೇಶ್ವರ ಸ್ವಾಮೀಜಿ, ಸಿದ್ದಪ್ಪನ ಕಟ್ಟೆ ಮಾವಿನ ಬಾವಿಯ ಶ್ರೀಬಸವರಾಜ ಗುರೂಜಿ,ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಸಿ.ವೇಣುಗೋಪಾಲ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಪಿ.ಎನ್. ಶ್ರೀನಿವಾಸಚಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.