Advertisement

ಹಿಂದುಳಿದ ವರ್ಗದ ಸಮೀಕ್ಷೆ ಜಾರಿ: ಹೋರಾಟ ಅನಿವಾರ್ಯ: ಸಿದ್ದರಾಮಯ್ಯ

01:14 AM Oct 19, 2020 | mahesh |

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ (ಜಾತಿ) ಸಮೀಕ್ಷೆಯನ್ನು ಜಾರಿಗೊಳಿಸು ವಂತೆ ಹಿಂದುಳಿದ ವರ್ಗಗಳ ಒಕ್ಕೂಟ ಒಕ್ಕೊರಲಿನಿಂದ ಆಗ್ರಹಿಸಿದೆ. ವರದಿ ಜಾರಿಗೊಳಿಸದಿದ್ದರೆ ಹೋರಾಟ ಅನಿವಾರ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮತ್ತೂಂದೆಡೆ, ಸಮೀಕ್ಷೆಯನ್ನು ಜಾರಿಗೊಳಿಸಲು ಸರಕಾರ ಬದ್ಧವಾಗಿದ್ದು, ಹೋರಾಟ ಅಗತ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ. ಎಸ್‌. ಈಶ್ವರಪ್ಪ ಹೇಳಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಇವರಿಬ್ಬರು ಮಾತನಾಡಿದರು. ಜತೆಗೆ ವಿವಿಧ ಸಮಾಜಗಳ ಮಠಾಧೀಶರು ಮತ್ತು ಮುಖಂಡರು ಕೂಡ ವರದಿಯನ್ನು ಜಾರಿಗೊಳಿಸುವಂತೆ ಸರಕಾರವನ್ನು ಆಗ್ರಹಿಸಿದರು.

Advertisement

ಸಿದ್ದರಾಮಯ್ಯ ಯಾಕೆ ಜಾರಿಗೊಳಿಸಿಲ್ಲ: ಈಶ್ವರಪ್ಪ ಪ್ರಶ್ನೆ
ನೀವೇ ಅಧಿಕಾರದಲ್ಲಿದ್ದರೂ ಜಾತಿ ಜನಗಣತಿಯನ್ನು ಯಾಕೆ ಜಾರಿಗೆ ತಂದಿಲ್ಲ ಎಂದು ಈಶ್ವರಪ್ಪ ಅವರು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು. ಸಮ್ಮಿಶ್ರ ಸರಕಾರದಲ್ಲೂ ಜಾರಿಗೆ ತರಲಿಲ್ಲ. ಈಗ ಬಿಜೆಪಿ ಸರಕಾರವಿದೆ. ನಾವು ಹೋರಾಟಕ್ಕೆ ಅವಕಾಶ ಕೊಡುವುದಿಲ್ಲ. ಆದರೆ, ವರದಿ ಜಾರಿಗೆ ನಾವೆಲ್ಲ ಒತ್ತಾಯಿಸೋಣ. ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶ್ರೀರಾಮುಲು ಅವರು ವಿಧಾನ ಪರಿಷತ್‌ನಲ್ಲಿ ಈಗಾಗಲೇ ವರದಿ ಒಪ್ಪಿಕೊಳ್ಳುವ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು.

ಕುಮಾರಸ್ವಾಮಿ ವರದಿ ಸ್ವೀಕರಿಸಲಿಲ್ಲ
ನಾನು ಮುಖ್ಯಮಂತ್ರಿ ಆಗಿದ್ದಾಗ ಜಾತಿ ಸಮೀಕ್ಷೆ ವರದಿ ಸಿದ್ಧವಾಗಿದ್ದರೆ ಅದನ್ನು ಜಾರಿ ಮಾಡುತ್ತಿದ್ದೆ. ಮೈತ್ರಿ ಸರಕಾರದಲ್ಲಿ ಪುಟ್ಟರಂಗ ಶೆಟ್ಟಿ ಹಿಂದುಳಿದ ವರ್ಗದ ಇಲಾಖೆ ಸಚಿವರಾಗಿದ್ದರು, ವರದಿಯನ್ನು ಸ್ವೀಕರಿಸದಂತೆ ಅವರಿಗೆ ಕುಮಾರಸ್ವಾಮಿ ಹೆದರಿಸಿದ್ದರು. ಈಶ್ವರಪ್ಪ ಈ ಸತ್ಯ ಅರಿಯಬೇಕು. ಇದರಲ್ಲಿ ಸಮಾಜದ ಎಲ್ಲ ವರ್ಗದವರ ಸಮೀಕ್ಷೆ ಇದೆ. ಸಮೀಕ್ಷೆಯು ಬೆಂಗಳೂರಿನಲ್ಲಿ ಶೇ. 84 ಹಾಗೂ ಉಳಿದೆಡೆ ಶೇ. 100ರಷ್ಟು ಯಶಸ್ವಿಯಾಗಿದೆ. ಈಗ ಬಿಜೆಪಿ ಅಧಿಕಾರದಲ್ಲಿದ್ದು, ಸರಕಾರ ವರದಿಯನ್ನು ಸ್ವೀಕರಿಸಿ ಸಂಪುಟದಲ್ಲಿ ಒಪ್ಪಿಗೆ ಪಡೆದು ಜಾರಿಗೊಳಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌, ರಾಜ್ಯ ನೇಕಾರರ ಸಂಘದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ, ವಿಶ್ವಕರ್ಮ ಸಮುದಾಯದ ಮುಖಂಡ ಕೆ. ಪಿ. ನಂಜುಂಡಿ, ಮಾಜಿ ಸಚಿವ ಪುಟ್ಟರಂಗ ಶೆಟ್ಟಿ ಹಾಗೂ ಗಾಣಿಗ, ಉಪ್ಪಾರ, ನೇಕಾರ ಸಹಿತ ವಿವಿಧ ಹಿಂದುಳಿದ ಸಮುದಾಯಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಶಾಸಕರ ರಾಜೀನಾಮೆ: ವಾಲ್ಮೀಕಿ ಶ್ರೀ
ದಾವಣಗೆರೆ: ವಾಲ್ಮೀಕಿ ನಾಯಕ ಸಮಾಜಕ್ಕೆ ಅ.31ರೊಳಗೆ ರಾಜ್ಯ ಸರಕಾರ ಶೇ.7.5 ಮೀಸಲಾತಿ ಘೋಷಿಸದಿದ್ದರೆ ಪರಿಶಿಷ್ಟ ಪಂಗಡದಿಂದ ಆಯ್ಕೆಯಾದ ಎಲ್ಲ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾ ನಂದಪುರಿ ಸ್ವಾಮೀಜಿ ಅವರು ರವಿವಾರ ಹೇಳಿದರು.

Advertisement

ಅರ್ಹರೆಲ್ಲ ಎಸ್‌ಟಿಗೆ ಸೇರಲಿ: ಸಿದ್ದು
ಬೆಂಗಳೂರು, ಅ. 18: ಕುರುಬರು ಸಹಿತ ಅರ್ಹತೆ ಇರುವ ಎಲ್ಲ ಸಮುದಾಯಗಳಿಗೂ ಪರಿಶಿಷ್ಟ ಪಂಗಡ ಮೀಸಲಾತಿ ಸಿಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯಕ್ಕೆ ಪರಿಶಿಷ್ಟ ವರ್ಗ ಮೀಸಲಿಗಾಗಿ ಹೋರಾಟ ಮಾಡುತ್ತಿರುವುದಕ್ಕೆ ಆಕ್ಷೇಪವಿಲ್ಲ. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ನಮ್ಮ ವಿರೋಧ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next