ಕಲಬುರಗಿ: ರಾಜ್ಯದಲ್ಲಿ ಜಾತಿ, ವರ್ಗ ಸಂಘರ್ಷ ತಪ್ಪಿದ್ದಲ್ಲ. ಆದರೆ, ಹಿಂದುಳಿದ ವರ್ಗಗಳು ಒಗ್ಗಟ್ಟಿನಿಂದ ನಡೆದಾಗ ಮಾತ್ರವೇ ನಾವು ವಂಚಿತ ಹಕ್ಕಿನ ಲಾಭ ಪಡೆಯಬಹುದು ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಪ್ರಯುಕ್ತವಾಗಿ ಹಮ್ಮಿಕೊಂಡಿದ್ದ ಅಮೃತಮಹೋತ್ಸವ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಹಿತಚಿಂತಕ ಸಿದ್ದರಾಮಯ್ಯ. ಈ ಹಿಂದೆ ಅಹಿಂದ ಕಟ್ಟಿದ್ದು ಅವರೇ. ಅಂತಹ ವ್ಯಕ್ತಿಯ ಅಮೃತ ಮಹೋತ್ಸವದಲ್ಲಿ ನಾವೆಲ್ಲರೂ ಖಂಡಿತವಾಗಿ ಭಾಗಿಯಾಗಬೇಕು. ಅವರು ಅಧಿಕಾರದಲ್ಲಿದ್ದಾಗ ಹಿಂದುಳಿದ ಜಾತಿಗಳಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುವುದರ ಮೂಲಕ ಅವಿಸ್ಮರಣೀಯ ಕಾರ್ಯ ಮಾಡಿದ್ದಾರೆ. ದೊಡ್ಡಮಟ್ಟದಲ್ಲಿ ನಾವು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಒಕ್ಕೂಟದ ಜಿಲ್ಲಾ ಮುಖಂಡ ಲಚ್ಚಪ್ಪ ಜಮಾದಾರ ಮಾತನಾಡಿ, ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಅಸ್ಮಿತೆ. ಅವರು ತಮ್ಮ ಸರಕಾರದ ಅವಧಿಯಲ್ಲಿ ಅನ್ನಭಾಗ್ಯ, ಶಿಕ್ಷಣ ಭಾಗ್ಯ ಹಲವು ಭಾಗ್ಯಗಳನ್ನು ನೀಡುವ ಮೂಲಕ ರಾಜ್ಯದ ಹಿಂದುಳಿದ ವರ್ಗವನ್ನು ಸಶಕ್ತ ಮಾಡಿದ್ದಾರೆ. ಆದರೆ, ಈಗ ಪರಿಸ್ಥಿತಿ ಭಿನ್ನವಾಗಿದೆ. ನಮ್ಮ ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಹಕ್ಕು ಮೊಟಕುಗೊಳ್ಳುತ್ತಿದೆ. ಶಿಷ್ಯವೇತನ, ಬಸ್ ಪಾಸಿಗಾಗಿ ಪರದಾಡುವಂತಹ ಪರಿಸ್ಥಿತಿ ಇದೆ. ದಿ. ದೇವರಾಜು ಅರಸು ಬಳಿಕ ಹಿಂದುಳಿದ ವರ್ಗಗಳ ಕಲ್ಯಾಣ ಬಯಸಿದ್ದು ಸಿದ್ದರಾಮಯ್ಯ ಅವರು. ಅವರಿಲ್ಲದೆ ಹೋದರೆ ಹಿಂದುಳಿದ ವರ್ಗವನ್ನು ಊಹಿಸಿಕೊಳ್ಳುವುದು ಕೂಡ ಅಸಾಧ್ಯ ಎಂದರು.
ಮಹಾಂತೇಶ ಕೌಲಗಿ, ಬಸವರಾಜ್ ಬೂದಿಹಾಳ್, ವಾಣಿಶ್ರೀ ಸಗರಕರ್, ಬೈಲಪ್ಪ ನೆಲೋಗಿ ಮಾತನಾಡಿದರು. ಸಮಾರಂಭದಲ್ಲಿ ಗೋವಿಂದ ಯಾದವ್, ಡಾ| ವಿಠಲ್ ದೊಡ್ಡಮನಿ, ಹಣಮಂತರಾವ ಹೂಗಾರ, ಮಲ್ಲಿಕಾರ್ಜುನ ಪೂಜಾರಿ ಹಾಗೂ ವಿವಿಧ ಮುಖಂಡರು ಇದ್ದರು.