Advertisement

ಪರಿಸರದ ಹೆಸರಲ್ಲಿ ಅಭಿವೃದ್ಧಿಗೆ ಹಿನ್ನಡೆ: ಜಗದೀಶ ಶೆಟ್ಟರ್‌

12:39 AM Aug 27, 2023 | Team Udayavani |

ಉಡುಪಿ: ಪರಿಸರಕ್ಕೆ ತೊಂದರೆಯಾಗದ ರೀತಿಯಲ್ಲಿ ಸರಕಾರಗಳು ಅಭಿವೃದ್ಧಿಗೆ ಒತ್ತು ನೀಡುತ್ತಿವೆ. ಆದರೆ ಪರಿಸರದ ಹೆಸರಲ್ಲಿ ಕೆಲವು ಅಭಿವೃದ್ಧಿ ಯೋಜನೆಗಳಿಗೆ ಅಡ್ಡಗಾಲು ಹಾಕುವ ವ್ಯವಸ್ಥಿತ ಷಡ್ಯಂತ್ರವೂ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಕಳವಳ ವ್ಯಕ್ತಪಡಿಸಿದರು.

Advertisement

ಮಣಿಪಾಲದ ಫಾರ್ಚುನ್‌ ಇನ್‌ ವ್ಯಾಲಿ ವ್ಯೂನಲ್ಲಿ ಶನಿವಾರ ನಡೆದ “ಕೈಗಾರಿ ಕೆಗಳಲ್ಲಿ ಮಾಲಿನ್ಯ ನಿಯಂತ್ರಣ ಮತ್ತು ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಉತ್ತೇಜನ’ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆಗೆ ಸಾಕಷ್ಟು ಶ್ರಮಿಸಿದ್ದೆವು. ಪರಿಸರ ಹೋರಾಟಗಾರರು ಕೋರ್ಟ್‌ಗೆ
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಯೋಜನೆಯ ಹಿನ್ನಡೆಗೆ ಕಾರಣರಾದರು. ಉತ್ತರ ಕನ್ನಡ ಜಿಲ್ಲೆಯ ಆರ್ಥಿಕ ಅಭಿವೃದ್ಧಿ, ಸಾರಿಗೆ ಸೌಕರ್ಯ ಸಹಿತ ಎಲ್ಲ ಬಗೆಯ ಅವಕಾಶಕ್ಕೆ ವಿಳಂಬವಾಯಿತು. ಇದೀಗ ಯೋಜನೆಗೆ ಪರಿಷ್ಕೃತ ಪ್ರಸ್ತಾವನೆ ಅಂತಿಮಗೊಂಡಿದ್ದು, ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮೋದನೆ ಕೊಡಬೇಕಿದೆ. ಯೋಜನೆ ಅನುಷ್ಠಾನವಾದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ಚಟುವಟಿಕೆ ಉತ್ತೇಜನ, ಆರ್ಥಿಕ ಪುನಶ್ಚೇತನ ಸಾಧ್ಯವಿದೆ ಎಂದರು.

ಶಾಸಕ ಆರ್‌.ವಿ. ದೇಶಪಾಂಡೆ ಮಾತನಾಡಿ, ಪರಿಸರ ಸಮತೋಲನ ಕಾಪಾಡಿಕೊಂಡು ಉದ್ಯೋಗ ಸೃಷ್ಟಿ ನೆಲೆಯಲ್ಲಿ ಯೋಜನೆಗಳು ರೂಪುಗೊಳ್ಳಬೇಕು. ಸಣ್ಣ ಮತ್ತು ಮಧ್ಯಮಕೈಗಾರಿಕೆಗಳು ಪರಿಸರ ಸ್ನೇಹಿ ವ್ಯವಸ್ಥೆ ಅಳವಡಿಸಿಕೊಂಡು ಕಾರ್ಯ ನಿರ್ವಹಿಸಬಹುದು. ಕೈಗಾರಿಕೆ ಮತ್ತುಹೂಡಿಕೆದಾರರಿಗೆ ಅನುಕೂಲ ಆಗುವಂತಹ ವ್ಯವಸ್ಥೆಯನ್ನು ಸರಕಾರ ಮಾಡಿಕೊಡಬೇಕು ಎಂದರು.

ದ.ಕ., ಉಡುಪಿ, ಉ.ಕ. ಜಿಲ್ಲೆಯ ಕರಾವಳಿ ಅಭಿವೃದ್ಧಿ ವಿಷನ್‌ ಪ್ಲ್ಯಾನ್‌ ಬಿಡುಗಡೆಗೊಳಿಸಿ ಸರಕಾರಕ್ಕೆ ಸಲ್ಲಿಸ ಲಾಯಿತು. ಸಮಿತಿಯ ಅಧ್ಯಕ್ಷ ಎಲ್‌. ವಿ. ಅಮೀನ್‌ ಅಧ್ಯಕ್ಷತೆ ವಹಿಸಿದ್ದರು.

Advertisement

ಸಮ್ಮೇಳನದ ಆಯೋಜಕರಾದ ಜಯ ಶ್ರೀಕೃಷ್ಣ ಪರಿಸರ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಮಾಜಿ ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿ’ಸೋಜಾ, ಕ್ಯಾ| ಗಣೇಶ್‌ ಕಾರ್ಣಿಕ್‌, ಮಾಜಿ ಸಚಿವ ನಾಗರಾಜ್‌ ಶೆಟ್ಟಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಪ್ರಮುಖರಾದ ಜಗದೀಶ್‌ ಅಧಿಕಾರಿ, ಸುರೇಂದ್ರ ಮೆಂಡನ್‌, ತುಳಸಿದಾಸ್‌ ಎಲ್‌. ಅಮೀನ್‌ ಉಪಸ್ಥಿತರಿದ್ದರು. ಸಮಿತಿಯ ದಯಾಸಾಗರ್‌ ಚೌಟ, ನಿತ್ಯಾನಂದ ಡಿ. ಕೋಟ್ಯಾನ್‌ ನಿರೂಪಿಸಿದರು.

ಮಾರಕ ಯೋಜನೆಗಳು ಬೇಡ: ಸ್ಪೀಕರ್‌ ಖಾದರ್‌
ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು. ಅಭಿವೃದ್ಧಿ ಹೆಸರಿನಲ್ಲಿ ಪರಿಸರಕ್ಕೆ ಮಾರಕ ಯೋಜನೆಗಳು ಬೇಡ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದರು. ಪರಿಸರಕ್ಕೆ ಹಾನಿಕಾರಕವಲ್ಲದ ಉದ್ಯೋಗ, ಆರ್ಥಿಕತೆಗೆ ಪೂರಕವಾಗುವ ಸಾಕಷ್ಟು ಕೈಗಾರಿಕೆ, ಉದ್ಯಮ ಘಟಕಗಳು ಕರಾವಳಿಯಲ್ಲಿ ಈಗಾಗಲೇ ಇವೆ. ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ ನೆಲೆಯಲ್ಲಿ ಇನ್ನಷ್ಟು ಹೂಡಿಕೆದಾರರಿಗೆ ಕರಾವಳಿಯಲ್ಲಿ ಉದ್ಯಮ ಆರಂಭಿಸಲು ಉತ್ತಮ ಸೌಕರ್ಯಗಳ ಅವಕಾಶ ಮಾಡಿಕೊಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next