Advertisement

ವಕ್ತಾರರಿಗೆ ನಿಯಮದ ಬೇಲಿ; ವಿವಾದ ಹಿನ್ನೆಲೆ ಹೊಸ ನಿಯಮಾವಳಿ ಜಾರಿ ಮಾಡಿದ ಬಿಜೆಪಿ

01:37 AM Jun 08, 2022 | Team Udayavani |

ಹೊಸದಿಲ್ಲಿ: “ಇನ್ನು ಮುಂದೆ ಪಕ್ಷದ ಅಧಿಕೃತ ವಕ್ತಾರರು ಮಾತ್ರವೇ ಟಿವಿ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು, ಯಾವುದೇ ಧರ್ಮ, ಅದರ ಸಂಕೇತಗಳು ಹಾಗೂ ಧಾರ್ಮಿಕ ನಾಯಕರ ವಿರುದ್ಧ ಟೀಕೆ ಮಾಡಬಾರದು, ಆಡುವ ಮಾತಿನ ಮೇಲೆ ಹಿಡಿತವಿರಬೇಕು.’

Advertisement

ಇವು ತಮ್ಮ ಪಕ್ಷದ ವಕ್ತಾರರು ಮತ್ತು ನಾಯಕರಿಗೆ ಮಂಗಳವಾರ ಬಿಜೆಪಿ ಜಾರಿ ಮಾಡಿರುವ ಹೊಸ ನಿಯಮಾವಳಿಗಳು. ಪ್ರವಾದಿ ಮೊಹಮ್ಮದ್‌ಗೆ ಸಂಬಂಧಿಸಿ ಬಿಜೆಪಿ ವಕ್ತಾರರಾದ ನೂಪುರ್‌ ಶರ್ಮಾ ಮತ್ತು ನವೀನ್‌ ಜಿಂದಾಲ್‌ ನೀಡಿರುವ ಹೇಳಿಕೆಗಳಿಗೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪಕ್ಷವು ಇಂಥದ್ದೊಂದು ನಿಯಮಗಳನ್ನು ಜಾರಿ ಮಾಡಿದೆ. ಯಾವುದೇ ಚಾನೆಲ್‌ಗೆ ಸಂವಾದಕ್ಕೆಂದು ಹೋಗುವ ಮೊದಲು ಯಾವ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ ಎಂಬ ಬಗ್ಗೆ ಅರಿತುಕೊಳ್ಳಬೇಕು, ಆ ವಿಚಾರಕ್ಕೆ ಸಂಬಂಧಿಸಿ ಪಕ್ಷದ ನಿಲುವೇನು ಎಂಬುದನ್ನು ಅರಿತುಕೊಂಡು ಪೂರ್ವತಯಾರಿ ಮಾಡಿಕೊಳ್ಳಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ. ಜತೆಗೆ, ವಕ್ತಾರರು ಸರಕಾರದ ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ಕೊಟ್ಟು ಮಾತಾಡಬೇಕು ಎಂಬ ಸಲಹೆಯನ್ನೂ ನೀಡಲಾಗಿದೆ.

ನೂಪುರ್‌ಗೆ ಭದ್ರತೆ: ಬಿಜೆಪಿಯಿಂದ ಅಮಾನತಾಗಿ ರುವ ವಕ್ತಾರೆ ನೂಪುರ್‌ ಶರ್ಮಾ ಮತ್ತು ಕುಟುಂಬಕ್ಕೆ ನಿರಂತರ ಜೀವ ಬೆದರಿಕೆಗಳು ಬರುತ್ತಿರುವ ಹಿನ್ನೆಲೆ ಯಲ್ಲಿ ದಿಲ್ಲಿ ಪೊಲೀಸರು ಅವರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿಭದ್ರತೆ ಕಲ್ಪಿಸಿದ್ದಾರೆ. ಇನ್ನೊಂದೆಡೆ, ವಿವಾದಿತ ಹೇಳಿಕೆ ಸಂಬಂಧ ಮುಂಬಯಿಯಲ್ಲಿ ಎಫ್ಐಆರ್‌ ದಾಖಲಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಮಂಗಳವಾರ ನೂಪುರ್‌ ಶರ್ಮಾರಿಗೆ ಸಮನ್ಸ್‌ ಜಾರಿ ಮಾಡಿದೆ. ಜೂ.22ರಂದು ಹಾಜರಾಗುವಂತೆ ಅದರಲ್ಲಿ ಸೂಚಿಸಲಾಗಿದೆ.

ಪಾಕ್‌ನಿಂದ ಅಭಿಯಾನ!: ನೂಪುರ್‌ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭ ವಾಗಲು ಪಾಕ್‌ ಟೂಲ್‌ಕಿಟ್‌ ಕಾರಣ ಎಂದು ಟೈಮ್ಸ್‌ ನೌ ವರದಿ ಮಾಡಿದೆ. ರಾಜಕಾರಣಿಗಳು, ಪತ್ರಕರ್ತರ ನಕಲಿ ಖಾತೆಗಳ ಮೂಲಕ ಭಾರತ ವಿರೋಧಿ ಟ್ವೀಟ್‌ಗಳನ್ನು ಮಾಡಲಾಗುತ್ತಿತ್ತು ಎಂದೂ ಹೇಳಲಾಗಿದೆ.

16 ದೇಶಗಳಿಂದ ಖಂಡನೆ: ವಿವಾದಿತ ಹೇಳಿಕೆ ಖಂಡಿಸಿ ಭಾರತದ ವಿರುದ್ಧ ಪ್ರತಿಭಟನೆ ಸಲ್ಲಿಸುತ್ತಿರುವ ದೇಶಗಳ ಸಂಖ್ಯೆ 16ಕ್ಕೇರಿದೆ. ಮಂಗಳವಾರ ಮಲೇಷ್ಯಾ, ಲಿಬಿಯಾ, ಟರ್ಕಿ, ಮಾಲ್ಡೀವ್ಸ್‌, ಜೋರ್ಡಾನ್‌, ಇಂಡೋನೇಷ್ಯಾ ಕೂಡ ಭಾರತದ ರಾಯಭಾರಿಗಳನ್ನು ಕರೆಸಿ ಆಕ್ಷೇಪ ಸಲ್ಲಿಸಿವೆ.

Advertisement

ಬಿಜೆಪಿ ನಾಯಕನ ಬಂಧನ: ನೂಪುರ್‌ ಹೇಳಿಕೆ ಬೆನ್ನಲ್ಲೇ ನಡೆದ ಕಾನ್ಪುರ ಹಿಂಸಾಚಾರಕ್ಕೆ ಸಂಬಂಧಿಸಿ ಮಂಗಳವಾರ ಬಿಜೆಪಿ ನಾಯಕರೊಬ್ಬರನ್ನು ಬಂಧಿಸ ಲಾಗಿದೆ. ಬಿಜೆಪಿ ಯುವ ಘಟಕದ ಪದಾಧಿಕಾರಿ ಹರ್ಷಿತ್‌ ಶ್ರೀವಾಸ್ತವ ಅವರು ಆಕ್ಷೇಪಾರ್ಹ ಕಮೆಂಟ್‌ಗಳ ಮೂಲಕ ವಾತಾವರಣವನ್ನು ಹದ ಗೆಡಿ ಸಲು ಯತ್ನಿಸಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಪ್ರಾಮುಖ್ಯ ನೀಡಬೇಕಾಗಿಲ್ಲ: ರಾಜ್ಯಪಾಲ
ವಿವಾದಿತ ಹೇಳಿಕೆಗೆ ಸಂಬಂಧಿಸಿ ಸರಕಾರ ಕ್ಷಮೆ ಯಾಚಿಸಬೇಕು ಎಂಬ ಕತಾರ್‌ ದೇಶದ ಆಗ್ರಹಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹ ಮ್ಮದ್‌ ಖಾನ್‌ ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಅವರವರ ಅಭಿಪ್ರಾಯಗಳನ್ನು ಹೇಳುವ ಅಧಿಕಾರವಿದೆ. ಕ್ಷಮೆ ಕೇಳಬೇಕಾದ ಅಗತ್ಯವಿಲ್ಲ. ಇಂಥ ಸಣ್ಣಪುಟ್ಟ ಪ್ರತಿಕ್ರಿಯೆಗಳಿಗೆ ಭಾರತ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದೂ ಖಾನ್‌ ಹೇಳಿದ್ದಾರೆ.

ಬಾಂಧವ್ಯಕ್ಕೆ ಧಕ್ಕೆಯಾಗದು: ಪಿಯೂಷ್‌ ಗೋಯಲ್‌
ಬಿಜೆಪಿ ನಾಯಕರ ವಿವಾದಿತ ಹೇಳಿಕೆಯಿಂದ ಎನ್‌ಡಿಎ ಸರಕಾರದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಜತೆಗೆ ಗಲ್ಫ್ ದೇಶಗಳೊಂದಿಗಿನ ಭಾರತದ ಬಾಂಧವ್ಯವೂ ಮುಂದುವರಿಯಲಿದೆ ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಮಂಗಳವಾರ ಹೇಳಿದ್ದಾರೆ. ಕೇರಳದ ಕೊಚ್ಚಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನೂಪುರ್‌ ಶರ್ಮಾ ಮತ್ತು ಜಿಂದಾಲ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅವರಿಬ್ಬರೂ ಸರಕಾರದ ಪ್ರತಿನಿಧಿಗಳಲ್ಲ. ಹಾಗಾಗಿ ಅದರಿಂದ ಸರಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

ವಕ್ತಾರರಿಗೆ ಷರತ್ತುಗಳೇನು?
-ಟಿವಿಯಲ್ಲಿ ಬರುವ ಸಂವಾದಗಳಲ್ಲಿ ಕೇವಲ ಪಕ್ಷದ ಅಧಿಕೃತ ವಕ್ತಾರರು ಮಾತ್ರವೇ ಪಾಲ್ಗೊಳ್ಳಬೇಕು.
-ಎಷ್ಟೇ ಬಿರುಸಿನ ಚರ್ಚೆಯಾಗಿದ್ದರೂ ನಿಮ್ಮ ಮಿತಿಯನ್ನು ದಾಟಬಾರದು, ಆಡುವ ಭಾಷೆಯ ಬಗ್ಗೆ ಗಮನವಿರಬೇಕು.
-ಎಷ್ಟೇ ಪ್ರಚೋದನೆ ವ್ಯಕ್ತವಾದರೂ ಪಕ್ಷದ ಸಿದ್ಧಾಂತ ಅಥವಾ ಆದರ್ಶಗಳನ್ನು ಉಲ್ಲಂ ಸಬಾರದು
-ಸಂವಾದಕ್ಕೆ ಹೋಗುವ ಮುನ್ನ ವಿಷಯದ ಬಗ್ಗೆ ಅರಿತುಕೊಂಡು, ಪೂರ್ವಸಿದ್ಧತೆ ಮಾಡಿಕೊಂಡು ಹೋಗಬೇಕು.
ವಕ್ತಾರರು ಮತ್ತು ಪ್ಯಾನೆಲಿಸ್ಟ್‌ಗಳು ತಮ್ಮ ಅಜೆಂಡಾದೊಳಗೇ ಮಾತಾಡಬೇಕು. ಯಾರೋ ಬೀಸಿದ ಬಲೆಗೆ ಬೀಳಬಾರದು.

ಎಲ್ಲ ದೇಶಗಳೂ ಎಲ್ಲ ಧರ್ಮಗಳನ್ನು ಗೌರವಿಸಬೇಕು ಮತ್ತು ಸಹಿಷ್ಣುತೆಯನ್ನು ಪಾಲಿಸಬೇಕು ಎಂದು ನಾವು ಬಯಸುತ್ತೇವೆ.
ಸ್ಟೀಫೆನ್‌ ಡುಜಾರಿಕ್‌, ವಿಶ್ವಸಂಸ್ಥೆ
ಮುಖ್ಯಸ್ಥರ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next