Advertisement

ಮರಳಿ ಸಂಬಂಧಗಳತ್ತ

11:11 AM May 06, 2017 | |

“ಸಂಬಂಧ ಅನ್ನೋದು ದೊಡ್ಡದು…’ ಎಲ್ಲಾ ಮುಗಿದ ಮೇಲೆ ಈ ಅರ್ಥಪೂರ್ಣ ಪದ ಪರದೆ ಮೇಲೆ ಮೂಡುತ್ತೆ. ಅಷ್ಟೊತ್ತಿಗಾಗಲೇ, ಕಳೆದು ಹೋದ, ಮರೆತೇ ಹೋದ, ಬಿಟ್ಟು ಹೋದ ಸಂಬಂಧಗಳ ಬೆಲೆಯ ಬಗ್ಗೆ ಆಪ್ತವಾಗಿ, ಆಳವಾಗಿ, ಭಾವನಾತ್ಮಕವಾಗಿ ಮತ್ತು ಸೂಕ್ಷ್ಮವಾಗಿ ಹೇಳುವ ಮತ್ತು ತೋರಿಸುವ ಮೂಲಕ ನೋಡುವ ಕಣ್ಣುಗಳನ್ನು ಒದ್ದೆಯನ್ನಾಗಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿರುತ್ತಾರೆ. ಇದು “ಮರಳಿ ಮನೆಗೆ’ ಚಿತ್ರದ ಕಥೆ.

Advertisement

ಇಲ್ಲಿ ಕಥೆ ಅನ್ನುವುದಕ್ಕಿಂತ ಭಾವನಾತ್ಮಕ ಸಂಬಂಧಗಳ ತಲ್ಲಣ ಮತ್ತು ಹೂರಣದ ರುಚಿಯನ್ನು ಉಣಬಡಿಸುತ್ತಾ ಹೋಗುತ್ತಾರೆ. ಕೇವಲ ಕಥೆಯನ್ನಾಗಿಸದೆ, “ಜೀವಂತವಾಗಿ ಇರೋವರೆಗೂ ಇನ್ನೊಬ್ಬರ ಕಣ್ಣೀರು ಒರೆಸಬೇಕು’ ಎಂಬ ಅರ್ಥಪೂರ್ಣ ಅಂಶವನ್ನು ಹೊರಗೆಡವುತ್ತಾರೆ.  ಇಲ್ಲಿ ಅತಿಯಾದ ಅಕ್ಕರೆ, ಪ್ರೀತಿ ಹಾಗು ಸಂಭ್ರಮದ ಜತೆಗೆ ಕಾಡುವ, ಮತ್ತೆ ಮತ್ತೆ ನೆನಪಿಸುವ ಸಂಬಂಧಗಳ ಮೌಲ್ಯ ಚಿತ್ರದ ವೇಗವನ್ನು ಕಾಯ್ದುಕೊಳ್ಳುತ್ತಾ ಹೋಗುತ್ತೆ.

ಒಂದೇ ಮಾತಲ್ಲಿ ಹೇಳುವುದಾದರೆ, ಯಾವುದೋ ಕಾರಣಕ್ಕೆ ಹೆತ್ತರವನ್ನು ಬಿಟ್ಟು, ಸಂಬಂಧಗಳಿಗೆ ಬೇಲಿ ಹಾಕಿಕೊಂಡು ಒದ್ದಾಡುತ್ತಿರುವ ಮನಸುಗಳೊಮ್ಮೆ ಈ ಚಿತ್ರ ನೋಡಿದರೆ ಖಂಡಿತ ಆ ಎಲ್ಲಾ ಹಮ್ಮು-ಗಿಮ್ಮು, ಮುನಿಸು, ಮನಸ್ತಾಪ ಬಿಟ್ಟು ಓಡಿ ಹೋಗಿ ಸಂಬಂಧಗಳನ್ನು ಬಾಚಿ ತಬ್ಬಿಕೊಳ್ಳಬೇಕೆನಿಸದೇ ಇರದು. ಅಷ್ಟರಮಟ್ಟಿಗೆ ಕಣ್ಣುಗಳನ್ನು ತೇವವಾಗಿಸುತ್ತಲೇ ನೋಡಿಸಿಕೊಂಡು ಹೋಗುವ ತಾಕತ್ತು ಚಿತ್ರಕಥೆಗಿದೆ.

ಹಾಗಂತ, ಇಲ್ಲಿ ಎಲ್ಲವೂ ಸರಿಯಾಗಿದೆ ಅಂತಲ್ಲ, ಇಲ್ಲೂ ಕೆಲ ತಪ್ಪುಗಳು ಕಾಣಿಸಿಕೊಂಡರೂ, ಆ ಸಮಯಕ್ಕೆ ಕಾಣಿಸಿಕೊಳ್ಳುವ ಹಾಡು, ಸಂಗೀತ ಅವೆಲ್ಲವನ್ನೂ ಮರೆ ಮಾಚಿಸುತ್ತೆ. ಅಕ್ಕಪಕ್ಕದ ಮನೆಯಲ್ಲಿ ನಡೆದ ಘಟನೆ, ನಮ್ಮ ನಡುವೆಯೇ ಸಾಗುವ ಕಥೆ ಎಂಬಷ್ಟರಮಟ್ಟಿಗೆ ಆಪ್ತವಾಗುತ್ತದೆ. ಮೊದಲರ್ಧ ಸ್ವಲ್ಪ ನಿಧಾನವಾಗಿ ಸಾಗುವ ಚಿತ್ರ, ಕ್ರಮೇಣ ಹಿಡಿತ ಸಾಧಿಸುತ್ತದೆ. ಒಂದು ಹುಡುಗಿ ಮುಂದೆ ಪ್ರೀತಿ ನಿವೇದಿಸಿಕೊಳ್ಳಬೇಕೆನ್ನುವ ಹುಡುಗನನ್ನು ಪದೇ ಪದೇ ಅದೇ ಬೀದಿಯಲ್ಲಿ ಸುತ್ತಾಡಿಸುವ ದೃಶ್ಯಗಳು ಕೊಂಚ ಬೇಸರ ತರಿಸುತ್ತವೆ.

ಅಲ್ಲೊಂದಷ್ಟು ಚಿತ್ರಕಥೆ ಆಮೆಗತಿಯಂತಾಗಿದೆ. ಅದನ್ನು ಹೊರತುಪಡಿಸಿದರೆ, ಹಳ್ಳಿ ಸೊಗಡು, ದೇಸಿತನಕ್ಕೇನೂ ಕೊರತೆ ಇಲ್ಲ. ಎಲ್ಲಕ್ಕಿಂತಲೂ ಹೆಚ್ಚಾಗಿ ಸಂಬಂಧಗಳ ಮೌಲ್ಯಕ್ಕೆ ಇಲ್ಲಿ ಹೆಚ್ಚು ಆದ್ಯತೆ ಕೊಡಲಾಗಿದೆ. ಬಹುಶಃ ಅದೇ ಸಿನಿಮಾದ ಶಕ್ತಿ ಎನ್ನಬಹುದು. ಇಲ್ಲಿ ಮರಾಠಿ ಕುಟುಂಬವೊಂದರ ಹಿನ್ನೆಲೆಯೂ ಪ್ರಮುಖವಾಗಿದೆ. ಮರಾಠಿ ಭಾಷೆ ಪ್ರಯೋಗವಿದ್ದರೂ, ಅದು ಕಥೆಗೆ ಪೂರಕವಾಗಿರುವುದರಿಂದ ಅಷ್ಟೇನೂ ಭಾಸ ಎನಿಸುವುದಿಲ್ಲ.

Advertisement

ಕಥೆ ಏನು, ಎತ್ತ?
ಒಂದು ಕಡೆ ವಯಸ್ಸಾದ ತಾಯಿನ ಬಿಟ್ಟು, ಕೆಲಸ ಅರಸಿ ವಿದೇಶಕ್ಕೆ ಹೋಗಿ ಕೇವಲ ಪತ್ರ ಮೂಲಕ ಅಮ್ಮನ ಯೋಗಕ್ಷೇಮ ವಿಚಾರಿಸೋ ಮಗ. ಮಗನನ್ನು ನೋಡದೆ, ಅವನ ಬರುವಿಕೆಗೆ ಹಂಬಲಿಸಿ ಜೀವ ಬಿಡೋ ಜೀವ. ಇನ್ನೊಂದು ಕಡೆ, ತಾನೊಬ್ಬ ಕಥೆಗಾರ ಆಗಬೇಕೆಂದು ಯಾವುದೋ ಒಂದು ಹೋಟೆಲ್‌ನಲ್ಲಿ ಸಪ್ಲೆಯರ್‌ ಆಗಿ ಕೆಲಸ ಮಾಡುತ್ತಲೇ, ಹೆತ್ತಮ್ಮನನ್ನು ಕಳೆದುಕೊಂಡು ವ್ಯಥೆ ಪಡುವ ನಾಯಕ. ಮತ್ತೂಂದೆಡೆ, ಸಣ್ಣ ತಪ್ಪಿಗೆ ಹೆದರಿ ಚಿಕ್ಕಂದಿನಲ್ಲೇ ಮನೆ ಬಿಟ್ಟು ಹೋಗುವ ಇಬ್ಬರು ಗೆಳೆಯರು.

ಮಕ್ಕಳ ಬರುವಿಕೆಗೆ ವರ್ಷಗಟ್ಟಲೇ ಕಾಯೋ ಹೆತ್ತ ಜೀವಗಳು. ಸಂಬಂಧಗಳೇ ದೊಡ್ಡದು ಅಂದುಕೊಂಡು ಅವರು ಹೆತ್ತ ಕರಳನ್ನು ಹುಡುಕಿ ಬರುತ್ತಾರೋ, ಇಲ್ಲವೋ ಎಂಬುದೇ ಕಥಾಹಂದರ. ಇಲ್ಲಿ ಕಥೆ ಸಿಂಪಲ್‌ ಆಗಿದ್ದರೂ, ತೋರಿಸುವ ವಿಧಾನದಲ್ಲಿ ದೊಡ್ಡತನವಿದೆ, ಅದರಲ್ಲಿ ಮನಸ್ಸನ್ನು ಭಾರವಾಗಿಸುವ ಗುಣವೂ ಇದೆ. ಹೋದವರು “ಮರಳಿ ಮನೆಗೆ’ ಬರುತ್ತಾರಾ? ಕುತೂಹಲವಿದ್ದರೆ, ಸಿನಿಮಾ ನೋಡಿ, ಯಾವುದೋ ಕಾರಣಕ್ಕೆ ದೂರ ಮಾಡಿ ಬಂದಿರುವ ಸಂಬಂಧಗಳನ್ನು ಹುಡುಕಿ ಹೋಗಬಹುದು!

ಶ್ರುತಿ ಇಲ್ಲಿ ಮಗನನ್ನು ಕಳಕೊಂಡ ಅಮ್ಮನಾಗಿ ಇಷ್ಟವಾಗುತ್ತಾರೆ. ಭ್ರಮೆಯಲ್ಲೇ ಬದುಕೋ ಅವರ ನಟನೆಯೂ ನೆನಪಲ್ಲುಳಿಯುವಂತಿದೆ. ಸುಚೇಂದ್ರ ಪ್ರಸಾದ್‌ ಕೂಡ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅನಿರುದ್ಧ ತೆರೆಯ ಮೇಲೆ ಸ್ವಲ್ಪ ಹೊತ್ತು ಇದ್ದರೂ, ನೆನಪಲ್ಲುಳಿಯುತ್ತಾರೆ. ಉಳಿದಂತೆ ಶಂಕರ್‌ ಆರ್ಯನ್‌, ಸಹನಾ, ಅರುಂಧತಿ ಇವರೆಲ್ಲರೂ ಪಾತ್ರವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಯೋಗೇಶ್‌ ಮಾಸ್ಟರ್‌ ಮತ್ತು ಗುರುಮೂರ್ತಿ ವೈದ್ಯ ಅವರ ಸಂಗೀತ ಹೇಳಿಕೊಳ್ಳುವಂತಿಲ್ಲ. ಸುರೇಂದ್ರನಾಥ್‌ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕ. ರಾಜ್‌ ಶಿವಶಂಕರ್‌ ಕ್ಯಾಮೆರಾ ಕೈಚಳಕದಲ್ಲಿ ಪವಾಡವಿಲ್ಲ.

ಚಿತ್ರ: ಮರಳಿ ಮನೆಗೆ
ನಿರ್ದೇಶನ: ಯೋಗೇಶ್‌ ಮಾಸ್ಟರ್‌
ನಿರ್ಮಾಣ: ಎಸ್‌.ಎನ್‌.ಲಿಂಗೇಗೌಡ, ಸುಭಾಷ್‌ ಎಲ್‌.ಗೌಡ
ತಾರಾಗಣ: ಶ್ರುತಿ, ಸುಚೇಂದ್ರಪ್ರಸಾದ್‌, ಶಂಕರ್‌ ಆರ್ಯನ್‌, ಅನಿರುದ್ಧ, ರೋಹಿತ್‌, ಸಹನಾ, ರೋಹನ್‌ಶೆಟ್ಟಿ, ಅರುಂಧತಿ ಜಟ್ಕರ್‌ ಇತರರು

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next