Advertisement

ಮತ್ತೆ ಮಾಲ್ಗುಡಿ ಡೇಸ್‌

12:30 AM Mar 01, 2019 | Team Udayavani |

“ಮಾಲ್ಗುಡಿ ಡೇಸ್‌’ ಅಂದ್ರೆ ಇಂದಿಗೂ ಅದೆಷ್ಟೋ ಜನರ ಕಣ್ಣು-ಕಿವಿ ಅರಳುತ್ತದೆ. 1980ರ ದಶಕದಲ್ಲಿ ಸಾಕಷ್ಟು  ಜನಪ್ರಿಯತೆ ಪಡೆದುಕೊಂಡು ನಂತರ ಕಿರುತೆರೆಯ ಧಾರಾವಾಹಿಯಾಗಿ ಅಸಂಖ್ಯಾತ ಪ್ರೇಕ್ಷಕರ ಗಮನ ಸೆಳೆದಿದ್ದ ಆರ್‌.ಕೆ ನಾರಾಯಣ್‌ ಅವರ “ಮಾಲ್ಗುಡಿ ಡೇಸ್‌’ ಕಾದಂಬರಿ ನಿಮಗೆ ಗೊತ್ತಲ್ಲ, ಈಗ ಅದೇ ಹೆಸರು ಹಿರಿತೆರೆ ಮೇಲೂ ಬರುತ್ತಿದೆ. 

Advertisement

ಹೌದು, “ಮಾಲ್ಗುಡಿ ಡೇಸ್‌’ ಎನ್ನುವ ಹೆಸರಿನಲ್ಲಿ ಕನ್ನಡದಲ್ಲಿ ಚಿತ್ರವೊಂದು ತಯಾರಾಗುತ್ತಿದೆ. ಅಂದಹಾಗೆ, ಈ ಚಿತ್ರದ ಹೆಸರು “ಮಾಲ್ಗುಡಿ ಡೇಸ್‌’ ಅಂತಿದ್ದರೂ, ಇದು ಶಂಕರ್‌ ನಾಗ್‌ ನಿರ್ದೇಶನದ ಧಾರಾವಾಹಿಗಾಗಲಿ, ಆರ್‌.ಕೆ ನಾರಾಯಣ್‌ ಅವರ ಕಾದಂಬರಿಗಾಗಲಿ ಸಂಬಂಧಿಸಿದ್ದಲ್ಲ. ಇದೊಂದು ಇಂದಿನ ಜನರೇಷನ್‌ ಕಥೆಯಾಧಾರಿತ ಚಿತ್ರವಾಗಿದ್ದು, ಚಿತ್ರದ ಸಬ್ಜೆಕ್ಟ್ಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಚಿತ್ರಕ್ಕೆ “ಮಾಲ್ಗುಡಿ ಡೇಸ್‌’ ಅಂತ ಹೆಸರಿಟ್ಟುಕೊಂಡಿದೆ.

ಇತ್ತೀಚೆಗೆ “ಮಾಲ್ಗುಡಿ ಡೇಸ್‌’ ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ ಚಿನ್ನೇಗೌಡ, ನಿರ್ಮಾಪಕ ಕರಿಸುಬ್ಬು  ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದು, ಚಿತ್ರಕ್ಕೆ ಚಾಲನೆ ನೀಡಿದರು. 

“ಮಾಲ್ಗುಡಿ ಡೇಸ್‌’ ಚಿತ್ರದಲ್ಲಿ ವಿಜಯ ರಾಘವೇಂದ್ರ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ನವ ಪ್ರತಿಭೆ ಕಿಶೋರ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಗಗನ್‌ ಬಡೇರಿಯಾ ಸಂಗೀತ ಸಂಯೋಜಿಸುತ್ತಿದ್ದಾರೆ. “ಮಾಲ್ಗುಡಿ ಡೇಸ್‌’ ಚಿತ್ರದ ದೃಶ್ಯಗಳನ್ನು ಉದಯ್‌ ಲೀಲಾ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಲಿದ್ದಾರೆ. ಚಿತ್ರಕ್ಕೆ ಪ್ರದೀಪ್‌ ನಾಯಕ್‌ ಸಂಕಲನ ಕಾರ್ಯವಿದೆ. ರತ್ನಾಕರ್‌ ಕಾಮತ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಬೆಂಗಳೂರು, ಮೈಸೂರು, ತೀರ್ಥಹಳ್ಳಿ, ಕಳಸ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ. ಒಟ್ಟಾರೆ ಕಿರುತೆರೆಯಲ್ಲಿ ಮೋಡಿ ಮಾಡಿದ್ದ “ಮಾಲ್ಗುಡಿ ಡೇಸ್‌’ ಎಂಬ ಹೆಸರು ಈಗ ಹಿರಿತೆರೆಯಲ್ಲಿ ಎಷ್ಟರ ಮಟ್ಟಿಗೆ ಕಮಾಲ್‌ ಮಾಡಲಿದೆ ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next