ಮಹಾರಾಷ್ಟ್ರದಂಥ ರಾಜ್ಯ ಮತ್ತು ಮುಂಬಯಿಯಂಥ ನಗರಿ ಕೋವಿಡ್‌ನ ಎರಡನೆಯ ಅಲೆಯಿಂದ ತತ್ತರಿಸಿಹೋಗಿವೆ. ದಿಲ್ಲಿ ಮತ್ತು ಕರ್ನಾಟಕದಂಥ ರಾಜ್ಯಗಳೂ ಅದೇ ಹಾದಿಯಲ್ಲೇ ಇವೆ.
Advertisement
ಹೀಗಾಗಿ ನಾವು ಲಾಕ್‌ಡೌನ್‌ನ ಅನಿವಾರ್ಯದಿಂದ ತಪ್ಪಿಸಿಕೊಳ್ಳಬೇಕೆಂದರೆ ಈ ಸಾಂಕ್ರಾಮಿಕವನ್ನು ಹೇಗೆ ತಡೆಗಟ್ಟಬೇಕು ಎನ್ನುವ ಪ್ರಶ್ನೆಯನ್ನು ಕೇಳಲಾಗುತ್ತಿದೆ. ಈ ಸಮಸ್ಯೆಗೆ ಬೇರು ಮಟ್ಟದಲ್ಲಿ ಅವಲೋಕನ ಮಾಡಿದಾಗ ಅತ್ಯಂತ ಸರಳ ಉತ್ತರ ಸಿಗುತ್ತದೆ. ಈ ಪರಿ ಕೋವಿಡ್ ಪ್ರಕರಣಗಳು ಏರುತ್ತಿರುವುದರ ಹಿಂದೆ ನಿಷ್ಕಾಳಜಿ ಮತ್ತು ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಕ್ಯಾರೆ ಎನ್ನದಿರುವ ಮನೋಭಾವವೇ ಕಾರಣ.
ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ, ಕೈಗಳನ್ನು ನಿಯಮಿತವಾಗಿ ತೊಳೆಯುವುದು ಮತ್ತು ಜನಸಂದಣಿಯಿಂದ ದೂರ ಇರುವುದಾಗಿದೆ.
Related Articles
Advertisement
ಇನ್ನು ಕೋವಿಡ್ ವಿರುದ್ಧದ ಯುದ್ಧದಲ್ಲಿ ನಮ್ಮ ಶಸ್ತ್ರಾಗಾರದಲ್ಲಿರುವ ಮತ್ತೂಂದು ಪ್ರಮುಖ ಅಸ್ತ್ರವೆಂದರೆ ಸಾಮೂಹಿಕ ವ್ಯಾಕ್ಸಿನೇಶನ್. ಬೃಹತ್ ಪ್ರಮಾಣದ ಲಸಿಕೆಗಳನ್ನು ದೇಶದಲ್ಲಿಯೇ ಉತ್ಪಾದಿಸುವ ಸಾಮರ್ಥ್ಯ ಭಾರತಕ್ಕಿರುವುದು ಮತ್ತು ಈ ವರ್ಷದ ಜನವರಿ ತಿಂಗಳಿಂದಲೇ ಲಸಿಕೆ ಪ್ರಕ್ರಿಯೆ ಆರಂಭಿಸಲಾಗಿರುವುದು ಅದೃಷ್ಟದ ವಿಷಯ.
ಈಗ ಲಸಿಕೆ ವಿತರಣೆ ಕಾರ್ಯಕ್ರಮವನ್ನು ನಾವು ಆಕ್ರಮಣಕಾರಿಯಾಗಿ ಚುರುಕುಗೊಳಿಸಬೇಕಿದೆ. ಅಲ್ಲದೇ ಆಸ್ಪತ್ರೆಯ ಒಳಗೆ ಮತ್ತು ಆಸ್ಪತ್ರೆಯ ಹೊರಗೂ ಸಾರ್ವಜನಿಕರಿಗೆ ಸುಲಭವಾಗಿ ಲಸಿಕೆ ಸಿಗುವಂತಾಗಬೇಕು.
ಈ ಪ್ರಕ್ರಿಯೆ ಎಷ್ಟು ಸರಳವಾಗಿರಬೇಕೆಂದರೆ, ಯಾರು ಬೇಕಾದರೂ ಒಂದು ಕ್ಲಿನಿಕ್, ಆಸ್ಪತ್ರೆ ಅಥವಾ ಡಾಕ್ಟರ್ ಬಳಿ ತೆರಳಿ ವ್ಯಾಕ್ಸಿನೇಶನ್‌ಗೆ ವಿನಂತಿಸುವಂತಿರಬೇಕು. ಇಂಥ ವ್ಯವಸ್ಥೆ ಸೃಷ್ಟಿಯಾದರೆ ಚಿಕ್ಕ ಅವಧಿಯಲ್ಲೇ ಬೃಹತ್ ಸಂಖ್ಯೆಯ ಜನರಿಗೆ ಲಸಿಕೆ ಸಿಗುವಂತಾಗುತ್ತದೆ.
ಇನ್ನು 18ನೇ ವಯಸ್ಸಿಗೂ ಮೇಲ್ಪಟ್ಟ ಪ್ರೌಢರೆಲ್ಲರಿಗೂ ಲಸಿಕೆ ನೀಡುವುದು ಬಹಳ ಮುಖ್ಯವಾದದ್ದು. ಏಕೆಂದರೆ ಈ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಿನ ಯುವಜನರು ಸಣ್ಣಪ್ರಮಾಣದ ಸೋಂಕಿಗೆ ಒಳಗಾಗುತ್ತಿರುವುದನ್ನು ನೋಡಿದ್ದೇವೆ. ಆದರೆ ಇವರೆಲ್ಲ ವೃದ್ಧರಿಗೆ ಮತ್ತು ಇತರ ರೋಗಗಳಿಂದ ಬಳಲುತ್ತಿರುವವರಿಗೆ ಕೋವಿಡ್ ಸೋಂಕು ತಗುಲಿಸುವ ಸಾಧ್ಯತೆ ಅಧಿಕ.ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣಿಸಿಕೊಂಡಿರುವುದರಿಂದ ಸಹಜವಾಗಿಯೇ ಆರೋಗ್ಯ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಬೀಳಲಿದೆ. ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್‌ಗಳ ಲಭ್ಯತೆಗೂ ಪೆಟ್ಟು ಬೀಳಲಿದೆ. ಈ ಕಾರಣಕ್ಕಾಗಿಯೇ ಸಾಧ್ಯವಾದಷ್ಟೂ ಹೆಚ್ಚಿನ ರೋಗಿಗಳನ್ನು ಮನೆಗಳಲ್ಲಿ, ಡೇ ಕೇರ್‌ಗಳಲ್ಲಿ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಇದ್ದು ವಿಶ್ರಾಂತಿ ಪಡೆಯುವಂತೆ ನೋಡಿಕೊಳ್ಳಬೇಕು ಮತ್ತು ಹೆಚ್ಚು ಅನಾರೋಗ್ಯ ಪೀಡಿತರಿಗೆ ಮಾತ್ರ ಆಸ್ಪತ್ರೆಯಲ್ಲಿ ಕೋವಿಡ್ ಬೆಡ್‌ಗಳನ್ನು ಸೀಮಿತಗೊಳಿಸಬೇಕು. ಆಸ್ಪತ್ರೆಯ ಅಮೂಲ್ಯ ಬೆಡ್‌ಗಳು ಅತ್ಯಂತ ಅಗತ್ಯವಿರುವವರಿಗೆ ಮಾತ್ರ ಲಭ್ಯವಾಗುವಂತಾಗಬೇಕು.
ಈ ಹಿಂದೆ ನಾವು ಸಾಂಕ್ರಾಮಿಕದಿಂದ ಕಲಿತ ಪಾಠವೆಂದರೆ, ಕೋವಿಡ್ ರೋಗಿಗಳ ಆರೈಕೆಯನ್ನು ಮಾಡುವ ವೇಳೆ ಇತರೆ ರೋಗಿಗಳ ಆರೈಕೆಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಿತ್ತು ಎನ್ನುವುದು. ಅನೇಕ ರೋಗಿಗಳು ಕೋವಿಡ್ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಆರೈಕೆ ದೊರೆಯದೇ ಮೃತಪಟ್ಟ ಘಟನೆಗಳೂ ವರದಿಯಾದವು. ಕೋವಿಡ್ ರೋಗಿಗಳ ಜೀವ ಉಳಿಸಲು ಮುಂದಾಗಿ, ಇದೇ ವೇಳೆಯಲ್ಲೇ ಕೋವಿಡೇತರ ರೋಗಿಗಳನ್ನು ನಾವು ಬಲಿಕೊಡುತ್ತಿದ್ದೇವೆ ಎನ್ನುವುದು ಅತ್ಯಂತ ನೋವಿನ ವಿಷಯ. ಎಲ್ಲ ಜೀವಗಳೂ ಮೌಲ್ಯಯುತವಾದವು. ಈ ಕಾರಣಕ್ಕಾಗಿಯೇ ಕೋವಿಡೇತರ ರೋಗಿಗಳು ಯಾವುದೇ ಕಾರಣಕ್ಕೂ ನರಳುವಂತಾಗಬಾರದು ಎಂದು ನಾವು ಎಚ್ಚರಿಕೆ ವಹಿಸಬೇಕಿದೆ. ಈ ಹಿಂದಿನ ಅನುಭವದ ಆಧಾರದ ಮೇಲೆ ನಾವು ಅರಿತಿರುವುದೇನೆಂದರೆ ಯಾವಾಗ ಸರಕಾರ ಖಾಸಗಿ ವಲಯ ಮತ್ತು ಜನರು ಜತೆಯಾಗಿ ಈ ಹೋರಾಟದಲ್ಲಿ ಭಾಗಿಯಾಗುತ್ತಾರೋ ಆಗ ಮಾತ್ರ ಸಾಂಕ್ರಾಮಿಕವು ನಿಯಂ ತ್ರಣಕ್ಕೆ ಬರಬಲ್ಲದು. ಬಲಿಷ್ಠ ಆರೋಗ್ಯ ಕ್ರಮಗಳಿಲ್ಲದೇ ಮತ್ತು ಸಾರ್ವಜನಿಕ ಬೆಂಬಲವಿಲ್ಲದೇ ಯಾವುದೇ ಸಾಂಕ್ರಾಮಿಕವನ್ನೂ ತಡೆಯುವುದಕ್ಕೆ ಸಾಧ್ಯವಿಲ್ಲ.
ಸಾರ್ವಜನಿಕರಿಗೆ ನನ್ನ ವಿನಂತಿಯೇನೆಂದರೆ ದಯವಿಟ್ಟುr ಕೋವಿಡ್ ತಡೆಗೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ, ವ್ಯಾಕ್ಸಿನೇಶನ್ ತೆಗೆದುಕೊಳ್ಳಿ. ಅಲ್ಲದೇ ಕೋವಿಡ್‌ನ ಎರಡನೆಯ ಅಲೆ ನಮ್ಮ ವ್ಯವಸ್ಥೆಯ ಮೇಲೆ ಅತಿಯಾದ ಭಾರ ಹೇರಿ, ಸರಕಾರವು ಮತ್ತೂಂದು ಲಾಕ್‌ಡೌನ್ ಮಾಡಬೇಕಾದ ಪರಿಸ್ಥಿತಿಗೆ ಬರುವ ಮುನ್ನವೇ ನಾವೆಲ್ಲರೂ ಜತೆಯಾಗಿ ಕೆಲಸಮಾಡಿ, ಈ ಸಾಂಕ್ರಾಮಿಕವನ್ನು ನಿಯಂತ್ರಿ ಸೋಣ. ಇನ್ನೊಂದು ಲಾಕ್‌ಡೌನ್ ಏನಾದರೂ ಜಾರಿ ಯಾದರೆ, ಅದು ದೇಶದ ಪಾಲಿಗೆ ದೊಡ್ಡ ದುರಂತವಾಗಲಿದೆ, ಬಹುಶಃ ಅದು ನಮ್ಮನ್ನು ಶಿಲಾಯುಗದತ್ತ ತಳ್ಳುವಂತಾಗಬಹುದು. ಹಾಗೇನಾದರೂ ಆದರೆ ಆ ದುರಂತದಿಂದ ನಾವೆಂದೂ ಚೇತರಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಈ ಕಾರಣಕ್ಕಾಗಿ,ಏನಕೇನ ನಾವೆಲ್ಲರೂ ಆ ಪರಿಸ್ಥಿತಿ ಬರದಂತೆ ಜತೆಯಾಗಿ ಮುಂದಡಿ ಇಡಬೇಕಿದೆ. – ಡಾ| ಸುದರ್ಶನ ಬಲ್ಲಾಳ, ಮುಖ್ಯಸ್ಥರು ಮಣಿಪಾಲ ಆಸ್ಪತ್ರೆಗಳು