Advertisement
ಈ ಮಧ್ಯೆ, ಅರಣ್ಯ ನಿಯಮ ಉಲ್ಲಂಘನೆ ಆರೋಪಗಳಿವೆ ಎನ್ನಲಾದ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿರುವ ಬಗ್ಗೆಯೂ ಅಪಸ್ವರ ಕೇಳಿಬರಲಾರಂಭಿಸಿರುವುದು ಹಿರಿಯ ನಾಯಕರಿಗೆ ಇರುಸು ಮುರುಸು ಉಂಟು ಮಾಡಿದೆ. ಅನರ್ಹ ಶಾಸಕರಾದ ಎಚ್.ವಿಶ್ವನಾಥ್, ಆರ್. ಶಂಕರ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸ್ಥಾನಮಾನಕ್ಕೆ ಒತ್ತಾಯ ಮುಂದುವರಿಸಿದ್ದಾರೆ.
Related Articles
Advertisement
ಸಚಿವ ಸಿ.ಟಿ. ರವಿ, ನೂತನ ಸಚಿವರಿಗೆ ಖಾತೆ ಬದಲಾವಣೆ ವಿಚಾರದ ಬಗ್ಗೆ ನಾನು ಚರ್ಚಿಸುವುದಿಲ್ಲ. ಈ ಬಗ್ಗೆ ಮಾತನಾಡಿದರೆ ನನ್ನ ಬಗ್ಗೆಯೂ ತಪ್ಪು ಅಭಿಪ್ರಾಯ ಮೂಡುತ್ತದೆ. ಈ ವಿಚಾರದ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸದೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು ಎಂದಷ್ಟೇ ತಿಳಿಸಿದರು.
ಸಚಿವ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿರುವ ಬಗ್ಗೆಯೂ ಅಪಸ್ವರ ಕೇಳಿಬಂದಿದೆ. ಅವರ ವಿರುದ್ಧ ಅರಣ್ಯ ನಿಯಮ ಉಲ್ಲಂಘನೆಯ ಆರೋಪಗಳಿದ್ದು ಅವರನ್ನೇ ಅರಣ್ಯ ಸಚಿವರನ್ನಾಗಿ ಮಾಡಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಮೂಡಲಾರಂಭಿಸಿದೆ. ಆದರೆ ಕೆಲ ಸಚಿವರು ಆನಂದ್ ಸಿಂಗ್ ಪರ ಸಮರ್ಥನೆಗೆ ನಿಂತಿದ್ದಾರೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿ, ಸಚಿವ ಆನಂದ್ ಸಿಂಗ್ ಅವರ ವಿರುದ್ಧ ಆರೋಪಗಳಿರಬಹುದು. ಆದರೆ ಯಾವ ಆರೋಪಗಳು ಸಾಬೀತಾಗಿಲ್ಲ. ಆಯಾ ರಾಜಕೀಯ ಸಂದರ್ಭಕ್ಕೆ ಅನುಗುಣವಾಗಿ ರಾಜಕೀಯ ಹೇಳಿಕೆಗಳಿರುತ್ತವೆ ಎಂದರು.
ಸಚಿವ ಸಿ.ಟಿ. ರವಿ, ಮುಖ್ಯಮಂತ್ರಿಗಳ ನಿರ್ಧಾರದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಸೂಕ್ತವಲ್ಲ. ಆರೋಪ ಹೊತ್ತವರೆಲ್ಲಾ ಆರೋಪಿಗಳಲ್ಲ. ನ್ಯಾಯಾಲಯ ಅಪರಾಧಿ ಎಂದು ತೀರ್ಮಾನಿಸಿದ ಬಳಿಕ ಪಕ್ಷ ಕಠಿಣ ಕ್ರಮ ಕೈಗೊಂಡಿದೆ. ಇದು ಎಲ್ಲ ಸಚಿವರಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಭೇಟಿಯಾದ ಅನರ್ಹರು: ಅನರ್ಹ ಶಾಸಕರಾದ ಎಚ್.ವಿಶ್ವನಾಥ್, ಆರ್.ಶಂಕರ್ ಅವರು ಯಡಿಯೂರಪ್ಪ ಅವರನ್ನು ಡಾಲರ್ ಕಾಲೋನಿ ನಿವಾಸದಲ್ಲಿ ಬುಧವಾರ ಭೇಟಿಯಾಗಿ ಚರ್ಚಿಸಿದರು. ಇದೇ ವೇಳೆ ಸಚಿವ ಸ್ಥಾನ ನೀಡುವಂತೆಯೂ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಭೇಟಿ ಬಳಿಕ ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್, ನಂದಗಢದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಅನುದಾನ ಬಿಡುಗಡೆ ಮಾಡಬೇಕೆಂಬ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದು, ಹಣ ಬಿಡುಗಡೆಗೆ ಒಪ್ಪಿದ್ದಾರೆ. ಸಚಿವ ಸ್ಥಾನಕ್ಕಾಗಿ ಪದೇ ಪದೆ ಮನವಿ ಮಾಡುವುದಿಲ್ಲ. ಸಚಿವ ಸ್ಥಾನ ನೀಡಿದರೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಯಾವ ಶಾಸಕರು ಯಾವ ಖಾತೆಯನ್ನು ನಿಭಾಯಿಸಬಲ್ಲರು ಎಂಬುದು ಮುಖ್ಯಮಂತ್ರಿಗಳಿಗೆ ಗೊತ್ತಿದೆ. ನನ್ನ ಮೇಲೆ ಮೊದಲಿನಿಂದಲೂ ಪ್ರಕರಣಗಳಿವೆ. ಸಣ್ಣ ಪುಟ್ಟ ನಿಯಮ ಉಲ್ಲಂಘನೆ ಸಂಬಂಧ ಪ್ರಕರಣಗಳಿವೆ. ನಮ್ಮದು ಗಣಿ ವ್ಯವಹಾರದ ಕುಟುಂಬವಾಗಿರುವುದರಿಂದ ಪ್ರಕರಣಗಳಿರುವುದು ಸಹಜ.-ಆನಂದ್ ಸಿಂಗ್, ಅರಣ್ಯ ಸಚಿವ