Advertisement

ಸರ್ಕಾರಗಳ ಕಾಳಜಿಯಿಂದ ಮರಳಿ ತಾಯ್ನಾಡಿಗೆ; ಸ್ವಗ್ರಾಮ ತಲುಪಿದ ನಾಗೇಶ್- ರಾಕೇಶ್

05:59 PM Mar 09, 2022 | Team Udayavani |

ತೆಲಸಂಗ: ಪೋಲೆಂಡ್‌ ಗಡಿಯಿಂದ ತೆಲಸಂಗ ಗ್ರಾಮದ ನಮ್ಮ ಮನೆವರೆಗೆ ಒಂದು ನಯಾ ಪೈಸೆ ನಮ್ಮಿಂದ ಪಡೆಯದೆ ತಲುಪಿಸಿದ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಕೃತಜ್ಞನಾಗಿದ್ದು, ತಾಯಿ ಭಾರತಾಂಬೆಗೆ ಮೊದಲು ವಂದಿಸುತ್ತೇವೆ ಎಂದು ಉಕ್ರೇನ್‌ನಿಂದ ಗ್ರಾಮಕ್ಕೆ ಆಗಮಿಸಿದ ವೈದ್ಯಕಿಯ ವಿದ್ಯಾರ್ಥಿ ಸಹೋದರರಾದ ನಾಗೇಶ ಪೂಜಾರಿ ಮತ್ತು ರಾಕೇಶ ಪೂಜಾರಿ ನುಡಿದರು.

Advertisement

ಸೋಮವಾರ ತಡರಾತ್ರಿ ಸ್ವಗ್ರಾಮಕ್ಕೆ ಆಗಮಿಸಿದ ಪೂಜಾರಿ ಸಹೋದರರನ್ನು ಗ್ರಾಮಸ್ಥರು ಸ್ವಾಗತಿಸಿದ ಸಂದರ್ಭದಲ್ಲಿ ಅವರು ಮಾತನಾಡಿ, ಇವತ್ತು ಯುದ್ಧಭೂಮಿಯಿಂದ ಬದುಕಿ ತಾಯ್ನಾಡಿಗೆ ಕಾಲಿಡುತ್ತಿದ್ದೇವೆ ಎಂದರೆ ಅದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾಳಜಿಯೇ ಕಾರಣ. ಯುದ್ಧ ನಡೆಯುತ್ತದೆ ಎಂದು ಗೊತ್ತಾದಾಗಲೇ ನಾವು ನಾವು ಭಾರತಕ್ಕೆ ಬರುತ್ತಿದ್ದೆವು. ಆದರೆ ಅಲ್ಲಿಯ ಕಾಲೇಜುಗಳು ಹಾಜರಾತಿ ಕಡಿಮೆಯಾದರೆ ಫೇಲ್‌ ಮಾಡುತ್ತೇವೆಂದು ಹೇಳಿ ನಮ್ಮನ್ನು ಭಾರತಕ್ಕೆ ಹೋಗಲು ಬಿಡಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಖಾರ್ಕಿವ್‌ ಮತ್ತು ಕೀವ್‌ ಪ್ರದೇಶದಿಂದ ಹೊರಬರುವುದು ಕಷ್ಟವಾಯಿತು. ಬಾಂಬ್‌
ಶಬ್ದ ಕೇಳಿದಾಗಲೆಲ್ಲ ಭಾರಿ ಭಯವಾಗುತ್ತಿತ್ತು.

ಕೊನೆ ಕೊನೆಗೆ ನೀರು ಆಹಾರದ ಕೊರತೆ ಆಗತೊಡಗಿತ್ತು. ನಾವಿಬ್ಬರೇ ಇದ್ದರೆ ಹೇಗಾದರೂ ಆಗುತ್ತಿತ್ತು. ವಿದ್ಯಾರ್ಥಿನಿಯರು ಸೇರಿ 20 ಜನರನ್ನು ಜೊತೆ ಕರೆತರುವ ಜವಾಬ್ದಾರಿ ನನ್ನ ಮೇಲಿತ್ತು. ಯುದ್ಧ ಭೂಮಿ ಆಗಿದ್ದರಿಂದ ಕೆಲ ಸಂದರ್ಭದಲ್ಲಿ ತೊಂದರೆ ಆಗಿದ್ದು ನಿಜ. ಆದರೆ ನಮ್ಮ ಮನೆಯಿಂದ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮಾಹಿತಿ, ಅಲ್ಲಿಂದ ರಾಯಭಾರಿ ಕಚೇರಿಗೆ ತಲುಪಿ, ಕ್ಷಣಕ್ಷಣಕ್ಕೂ ನಮ್ಮನ್ನು ಕೇಂದ್ರ ಸರಕಾರ ಸಂಪರ್ಕಿಸುತ್ತಿತ್ತು.

ತೇಜಸ್ವಿ ಸೂರ್ಯ ಹಾಗೂ ಪ್ರತಾಪಸಿಂಹ ನಿರಂತರ ಸಂಪರ್ಕದಲ್ಲಿದ್ದರು. ನಾವು ಒಂದು ಕರೆ ಮಾಡಿದರೆ ಐದಾರು ಕರೆಗಳು ರಾಯಭಾರಿ ಕಚೇರಿಯಿಂದ ಬರುತ್ತಿದ್ದವು. ನನ್ನ ತಂದೆ-ತಾಯಿ, ನಮ್ಮೂರಿನ ಗ್ರಾಮಸ್ಥರ ಪ್ರಾರ್ಥನೆ, ಸರಕಾರದ ಕಾಳಜಿಯಿಂದ ನಾವಿಂದು ಜೀವಂತವಾಗಿ ಮನೆ ತಲುಪಿದ್ದೇವೆ ಎಂದು ಉಕ್ರೇನ್‌ದಿಂದ ಗ್ರಾಮ ತಲಪುವವರೆಗಿನ ಕಥೆ ಬಿಚ್ಚಿಟ್ಟರು.

ಬಂಕರ್‌ನಲ್ಲಿ ನಾಲ್ಕು ದಿನ: ಯುದ್ಧ ಆರಂಭವಾಗುತ್ತಿದ್ದಂತೆ ನಮ್ಮ ಕೊಠಡಿ ಬಿಟ್ಟು ಬಂಕರ್‌ಗಳಲ್ಲಿ ಜೀವ ಕೈಯ್ಯಲ್ಲಿ ಹಿಡಿದು ಕಾಲ ಕಳೆಯಬೇಕಾಯಿತು. ನಮ್ಮ ಬಳಿ ರೇಶನ್‌ ಇದ್ದಿದ್ದರಿಂದ ಪೊಲೀಸರೂ ಹೊರಹೋಗಲು 2ಗಂಟೆ ಸಮಯ ನೀಡಿದಾಗಲೆಲ್ಲ ಕೊಠಡಿಗಳಿಗೆ ತೆರಳಿ ಊಟ ತಯಾರಿಸಿಕೊಂಡು ಬರುತ್ತಿದ್ದೆವು. 4 ದಿನದ ನಂತರ ನೀರು, ಆಹಾರದ ಕೊರತೆ ಕಂಡು ಬರುತ್ತಿದ್ದಂತೆ ನಿಮ್ಮ ರಾಷ್ಟ್ರಧ್ವಜ ಹಿಡಿದುಕೊಂಡು ತೆರಳುವವರು ಸ್ವಂತ ಜವಾಬ್ದಾರಿಯಿಂದ ತೆರಳಬಹುದೆಂಬ ಸಂದೇಶ ಬಂತು. ಕಾಲೇಜುಗಳು ಅನುಮತಿ ನೀಡಿದವು.

Advertisement

ಭಾರತೀಯ ರಾಯಭಾರಿ ಕಚೇರಿಯವರ ಸಂಪರ್ಕ ಮಾಡಿಕೊಂಡು ಅಲ್ಲಿಂದ ತೆರಳುವ ವ್ಯವಸ್ಥೆ ಮಾಡಿಕೊಂಡೆವು. ಭಾರತಕ್ಕೆ ತೆರಳುವುದರ ಬಗ್ಗೆ ಇಲ್ಲಸಲ್ಲದ ಗಾಳಿಸುದ್ದಿಗಳು ಬರುತ್ತಿದ್ದವು.

ಉಕ್ರೇನ್‌ ಪ್ರಜೆಗಳಿಗೆ ಮೊದಲ ಆದ್ಯತೆ:
ಟ್ರೆನ್‌ದಲ್ಲಿ ಪ್ರಯಾಣ ಮಾಡಲು ಉಕ್ರೆನ್‌ ಪ್ರಜೆಗಳಿಗೆ ಮೊದಲ ಆದ್ಯತೆ ಇತ್ತು. ಖಾರ್ಕಿವ್‌ ತೊರೆಯುತ್ತಿದ್ದ ಜನಸಂಖ್ಯೆ ಹೆಚ್ಚಿದ್ದರಿಂದ ಟ್ರೇನ್‌ ಹತ್ತುವುದು ದುಸ್ತರವಾಯಿತು. ನಮ್ಮಲ್ಲಿಯ ಕೆಲ ಜನರಿಗೆ ಟ್ರೇನ್‌ ಹತ್ತಲು ಅವಕಾಶ ಸಿಕ್ಕಿತು. ಇನ್ನು ಕೆಲವರನ್ನು ಪೊಲೀಸರು ತಡೆದರು. ಉಳಿದ 5 ಜನ ತಲಾ ನೂರು ಡಾಲರ್‌ ಲಂಚ ನೀಡಿ ಟ್ರೇನ್‌ ಹತ್ತಿದೆವು. ಖಾರ್ಕಿವ್‌ದಿಂದ ಕೀವ್‌ ಗೆ ಬಂದು ಅಲ್ಲಿಂದ ಲೀವಿವ್‌ಗೆ ತಲುಪಿ ಟ್ಯಾಕ್ಸಿ ಮಾಡಿಕೊಂಡು ಪೋಲೆಂಡ್‌ ತಲುಪಿದೆವು.

ಉಕ್ರೇನ್‌ ಪ್ರಜೆಗಳು-ಪೊಲೀಸರ ಆಕ್ರೋಶ:
ಕಾರ್ಖಿವ್‌ದಿಂದ ಪೋಲೆಂಡ್‌ ತಲುಪುವ ಪ್ರಯಾಣದ ನಡುವೆ ಆದ ಅನುಭವ ಭಯಾನಕವಾಗಿತ್ತು. ನಿಮ್ಮ ಭಾರತ ಉಕ್ರೇನ್‌ಗೆ ಸಪೋರ್ಟ್‌ ಮಾಡಿಲ್ಲ. ನಾವೇಕೆ ನಿಮಗೆ ಸಹಾಯ ಮಾಡಬೇಕೆಂದು ಉಕ್ರೇನ್‌ ಪ್ರಜೆಗಳು ಮತ್ತು ಪೊಲೀಸರು ಭಾರತಿಯರನ್ನು ಬೈದು ಸಹಾಯಕ್ಕೆ ತಿರಸ್ಕರಿಸಿದ್ದೂ ಇದೆ. ಉಕ್ರೇನ್‌ ತೊರೆದು ಬರುತ್ತಿದ್ದವರ ಸಂಖ್ಯೆ ಹೆಚ್ಚಿದ್ದರಿಂದ ಗಡಿಯಲ್ಲಿ ನೀರನ್ನೂ ಕುಡಿಯದೆ ಸರದಿಯಲ್ಲಿ ದಿನಗಟ್ಟಲೆ ಕಾಯುವುದು ಅನಿವಾರ್ಯವಾಯಿತು.

ಗಡಿ ದಾಟಿದೆವು: ಪೋಲೆಂಡ್‌ ಗಡಿಯಲ್ಲಿನ ಭಾರತೀಯರ ವ್ಯವಸ್ಥೆಯನ್ನು ಕಂಡೆವು. ಭಾರತ ತಲುಪುವುದು ನಿಶ್ಚಿತವೆನಿಸಿದಾಗ ನಿಟ್ಟುಸಿರು ಬಿಟ್ಟೆವು. ಊಟ, ಉಳಿದುಕೊಳ್ಳುವ ವ್ಯವಸ್ಥೆ, ಸಂಪರ್ಕ ಇದೆಲ್ಲವು ಚೆನ್ನಾಗಿ ಇದ್ದಿದ್ದರಿಂದ ಪೋಲೆಂಡ್‌ ಗಡಿವರೆಗೆ ಮಾತ್ರ ತೊಂದರೆ ಹಾಗೂ ದುಡ್ಡು ಖರ್ಚಾಯಿತು. ಅಲ್ಲಿಂದ ಸುರಕ್ಷಿತವಾಗಿ ಬಂದು ತಲುಪಿದೆವು.

ಕುಶಲೋಪರಿ ವಿಚಾರಿಸಿದ ಜನ
ಸೋಮವಾರ ರಾತ್ರಿ ನಾಗೇಶ ಮತ್ತು ರಾಕೇಶ ಪೂಜಾರಿ ಸಹೋದರರು ಮನೆಗೆ ಬರುತ್ತಿದ್ದಂತೆ ಅವರ ತಾಯಿ ಮಲ್ಲಮ್ಮ ಆರತಿ ಬೆಳಗಿ ಬರಮಾಡಿಕೊಂಡರು. ರಾತ್ರಿಯಿಂದ ಮಂಗಳವಾರ ಇಡೀ ದಿನ ಸ್ನೇಹಿತರು, ಗ್ರಾಮ ಪಂಚಾಯತ್‌ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮದ ಹಿರಿಯರು, ನೆಂಟರು ಪೂಜಾರಿ ಅವರ ಮನೆಗೆ ಭೇಟಿ ನೀಡಿ, ಸತ್ಕರಿಸಿ ಕುಶಲೋಪರಿ ವಿಚಾರಿಸಿದರು.

ನಮ್ಮನ್ನು ಗಡಿವರೆಗೆ ತಂತ ಟ್ಯಾಕ್ಷಿ ಡ್ರೈವರ್‌ಗಳು ಹೆದರಿ ನಡುಗುತ್ತಿದ್ದರು. ನೂರು ಮೀಟರ್‌ ಅಂತರದಲ್ಲಿಯೇ ನಮ್ಮನ್ನು ಇಳಿಸಿ ಹೋದರು. ಇಂತಹದರಲ್ಲಿ ಉಕ್ರೇನ್‌ನ ಖಾರ್ಕಿವ್‌ ಪ್ರದೇಶದಲ್ಲಿ ಭಾರತದ ವಿಮಾನ ಬರಲು ಹೇಗೆ ಸಾಧ್ಯ? ಅದು ಮದುವೆ ಮಂಟಪ ಅಲ್ಲ, ಯುದ್ಧಭೂಮಿ. ಇದನ್ನು ಅರ್ಥಮಾಡಿಕೊಂಡಿದ್ದರೆ ಭಾರತದ ಗಟ್ಸ್‌ ಬಗ್ಗೆ ಕೆಲವರು ಮಾತನಾಡುತ್ತಿರಲಿಲ್ಲ. ಇಂದು ಸಾವಿರಾರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಭಾರತ ತಲಪುತ್ತಿದ್ದಾರೆ, ಅಂದರೆ ಅದು ಭಾರತದ ತಾಕತ್ತು. ಅರ್ಧಕ್ಕೆ ನಿಂತ ವಿದ್ಯಾಭ್ಯಾಸ ಪೂರ್ಣಗೊಳಿಸಲು ರಾಜ್ಯದಲ್ಲಿಯೇ ಅವಕಾಶ ಮಾಡಿಕೊಡಬೇಕೆಂದು ಸರಕಾರಕ್ಕೆ ವಿನಂತಿಸುತ್ತೇವೆ.
ನಾಗೇಶ ಪೂಜಾರಿ. ವೈದ್ಯಕೀಯ ವಿದ್ಯಾರ್ಥಿ.

Advertisement

Udayavani is now on Telegram. Click here to join our channel and stay updated with the latest news.

Next