ಮದುವೆಯಾಗಿದೆಯಾ? ಓಹ್ ಬ್ಯಾಚುಲರಾ? ಇಲ್ಲ, ಇಲ್ಲ ನಾವು ಬ್ಯಾಚುಲರ್‌ಗೆ ಮನೆಕೊಡಲ್ಲ’, “ಸರ್, ಮನೆ ಕೊಡದೆ ಇದ್ರೆ ಪರವಾಗಿಲ್ಲ. ಮನೆಯ ಮೇಲಿರುವ ಚಿಕ್ಕ ರೂಮ್ ಇದೆಯಲ್ಲ ಅದನ್ನಾದರೂ ಕೊಡ್ರಿ’ ಅಂದ್ರೆ “ಹೋಗ್ರಿ ಹೋಗ್ರಿ ಬ್ಯಾಚುಲರ್‌ಗೆ ರೂಮ್ ಕೊಟ್ರೆ ಅಷ್ಟೇ ನಮ್ಮ ಕಥೆ’ ಅಂತ ಕೇಳಿಸುವಂತೆಯೇ ಅಂದು ಬಿಡುತ್ತಾರೆ. ಆಗ ನಾವೊಬ್ಬ ಉಗ್ರಗಾಮಿಯಾ? ಜೈಲಿನಿಂದ ತಪ್ಪಿಸಿಕೊಂಡ ಅಪರಾಧಿಯಾ? ಕಳ್ಳತನ ಮಾಡಿ ಓಡಿ ಬಂದವರ ಅನಿಸಿಬಿಡುತ್ತದೆ.
ಓದೋಕೆ, ಸಿಕ್ಕ ಸಣ್ಣಪುಟ್ಟ ಕೆಲಸ ಮಾಡೋಕೆ, ದೊಡ್ಡ ಸರ್ಕಾರಿ ಕೆಲಸವೇ ಸಿಕ್ಕು ಒಂಟಿಯಾಗಿ ನಗರಕ್ಕೆ ಬಂದಿಳಿದರೆ, ನಮ್ಮ ಬಳಿ ಅದೆಷ್ಟೊ ದುಡ್ಡಿದ್ದರೂ “ಸರ್, ಸ್ವಲ್ಪ ಜಾಸ್ತಿನೇ ಬಾಡಿಗೆ ಕೊಡ್ತೀವಿ’ ಅಂದ್ರೆ ಮುಲಾಜಿಲ್ಲದೆ ಕತ್ತು ಅಲ್ಲಾಡಿಸಿ ಆಚೆ ಕಳುಹಿಸಿ ಬಿಡುತ್ತಾರೆ.
ನಮ್ಮಂಥ ಬ್ಯಾಚುಲರ್‌ಗಳ ಬಹುತೇಕ ಬಗೆಹರಿಯದ ಸಮಸ್ಯೆಯಿದು. ಜಗತ್ತು ಎಷ್ಟೇ ಬದಲಾದರೂ ಮನೆಯ ಓನರ್‌ಗಳು ಬ್ಯಾಚುಲರ್‌ಗಳ ಮೇಲಿನ ಮನಸ್ಥಿತಿ ಮಾತ್ರ ಬದಲಾಗಿಲ್ಲ.
“ಬ್ಯಾಚುಲರ್‌ಗಳು ಶುದ್ಧ ಉಡಾಳರು ಸರ್, ಕ್ಲೀನ್ ಅನ್ನೋದೆ ಇಲ್ಲ. ಅದು ಹಾಳಾಗಿ ಹೋಗ್ಲಿ, ಮನೆಯಲ್ಲಿ ಹೆಣ್ಮಕ್ಳು ಬೇರೆ ಇದಾರೆ ಆಮೇಲೆ ನಮ್ಮ ಗತಿಯೇನು?’ ಅವರ ಸ್ಪಷ್ಟ ಸಮಜಾಯಿಷಿ. ಅವರ ವರಸೆ ಏನೆಂದರೆ, ಮನೆಯ ಬಾಡಿಗೆಗೆ ಹಗಲು ರಾತ್ರಿ ತಳ್ಳುವ, ಕೆಲಸವನ್ನೊ, ಓದು ಮುಂದುವರಿಸುವ ಬದಲು ಅವರವರ ಮಗಳನ್ನು ಲೈನ್ ಹೊಡೆಯಲು ಬಂದವರಂತೆ ಅಭಿಪ್ರಾಯ ತಾಳಿರುತ್ತಾರೆ. ಬ್ಯಾಚುಲರ್‌ಗಳಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿರಬಹುದು. ಆದರೆ, ಅದಕ್ಕಿಂತ ಹೆಚ್ಚಿನವರು ಆದಷ್ಟು ಒಂದೊಳ್ಳೆ ಶಿಸ್ತಿನ ಜೀವನ ಮಾಡುತ್ತಾರೆ. ಸಂಸಾರಿಗಳಿಗಿಂತ ಸಭ್ಯವಾಗಿಯೇ ನಡೆದುಕೊಳ್ಳುತ್ತಾರೆ. ಕೇವಲ ಒಂದೆರಡು ಉದಾಹರಣೆಗಳು ಬ್ಯಾಚುಲರ್‌ಗಳು ಹೀಗೆಯೇ ಅಂತ ನಿರ್ಧರಿಸಲಾರವು. ಆದರೆ ಬ್ಯಾಚುಲರ್ ಬಗ್ಗೆ ಒಂದು ವಿಚಿತ್ರ ಪೂರ್ವಾಗ್ರಹವೊಂದು ಮನಸ್ಸಿನಲ್ಲಿ ಕೂತಿದೆ. ಎಲ್ಲರೂ ಒಮ್ಮೆ ತಮ್ಮ ಲೈಫ್ ಬ್ಯಾಚುಲರ್ ಆಗಿ ಬಾಳಿದ ದಿನಗಳನ್ನು ಮರೆತವರಂತೆ ವರ್ತಿಸುತ್ತಾರೆ.
ಬ್ಯಾಚುಲರ್‌ಗಳ ಈ ವಿಷಯಕ್ಕೆ ಬಂದಾಗ ಗೃಹಸ್ಥರ ಬಗ್ಗೆ ಪ್ರಸ್ತಾಪಿಸಲೇಬೇಕು. ಗೃಹಸ್ಥರಾದವರಿಗೆ ಮನೆ ನೀಡಿದ ಮಾತ್ರಕ್ಕೆ ಯಾವುದೇ ಸಮಸ್ಯೆ ಖಂಡಿತ ಇಲ್ಲವೆ? ಆದರೆ ಅವರು ಗೃಹಸ್ಥರು ಅನ್ನುವ ಕಾರಣಕ್ಕೆ ಮುಚ್ಚಿಹೋಗುತ್ತವೆ. ಬ್ಯಾಚುಲರ್‌ಗಳಲ್ಲಿ ಒಂದು ಬದ್ಧತೆ ಇರುತ್ತದೆ. ಆ ಬದಲು ಸಂಸಾರಿಗಳಲ್ಲಿ ಎಲ್ಲಿದೆ? ಆದರೂ ಬ್ಯಾಚುಲರ್‌ಗಳಿಗೆ ಮನೆ ಅಥವಾ ರೂಮ್ ಸಿಗುವುದೆ ದುರ್ಲಭ!
ಇನ್ನು ಕೆಲವರಂತೂ ಬ್ಯಾಚುಲರ್‌ಗಳಿಗೆ ಇಷ್ಟಿಷ್ಟೇ ಬೆಂಕಿ ಪೆಟ್ಟಿಗೆಯಂತಹ ರೂಮ್‌ಗಳನ್ನು ಕಟ್ಟಿ, ಲೈಟು, ನೀರು ಎಲ್ಲವನ್ನೂ ತಮ್ಮ ಹಿಡಿತದಲ್ಲಿಟ್ಟುಕೊಂಡು ಇಷ್ಟಿಷ್ಟೇ ಹಂಚುತ್ತಾರೆ. ಒಬ್ಬರು ಮತ್ತು ಜಾಸ್ತಿಯೆಂದರೆ ಇಬ್ಬರೂ ಮಲಗುವಷ್ಟು ಜಾಗದ ರೂಮ್‌ಗಳು. ಅಲ್ಲಿಯೇ ಬ್ಯಾಚುಲರ್‌ಗಳ ಅಡುಗೆ, ಊಟ, ಓದು, ನಿ¨ªೆ ವಗೈರೆ. ಕೆಲವೊಮ್ಮೆ ಹಾಸ್ಟೆಲ್‌ಗಳು ಸಹಾಯಕ್ಕೆ ಬರುತ್ತವೆಯಾದರೂ ದುಡ್ಡು ಕೀಳಲು ನಿಂತಿರುತ್ತವೆ. ಕಾಲ ಎಷ್ಟೇ ಬದಲಾದರೂ ಬ್ಯಾಚುಲರ್‌ಗಳ ಈ “ಮನೆ’ಯ ಸಮಸ್ಯೆ ಹಾಗೆಯೇ ಇದೆ. ಯಾರಿಗೆಳ್ಳೋಣ ನಮ್ಮ ಪ್ರಾಬ್ಲಿಮ್!
ಸದಾಶಿವ ಸೊರಟೂರು