ಪಾಟ್ನ:ಕೋವಿಡ್ 19 ತಡೆಗಟ್ಟಲು ಲಾಕ್ ಡೌನ್ ಜಾರಿಗೊಳಿಸಿದ್ದ ಬಳಿಕ ವಿವಿಧೆಡೆ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರ ಒಂದೊಂದೆ ಕರುಣಾಜನಕ ಘಟನೆಗಳು ವರದಿಯಾಗುತ್ತಿದ್ದು, ಬಿಹಾರದ ರೈಲ್ವೆ ನಿಲ್ದಾಣದಲ್ಲಿ ಸಾವನ್ನಪ್ಪಿರುವ ತಾಯಿಯನ್ನು ಮಗುವೊಂದು ಎಬ್ಬಿಸಲು ಪ್ರಯತ್ನಪಡುತ್ತಿರುವ ವಿಡಿಯೋ ಕ್ಲಿಪ್ಲಿಂಗ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿರುವುದಾಗಿ ವರದಿ ತಿಳಿಸಿದೆ.
ಸಾವನ್ನಪ್ಪಿರುವ ತಾಯಿಯ ಶವದ ಮೇಲೆ ಹಾಕಿರುವ ವಸ್ತ್ರವನ್ನು ಮಗು ಎಳೆದು ಹಾಕಿದ್ದು, ತಾಯಿ ಅಲುಗಾಡದೇ ಮಲಗಿದ್ದಳು. ಯಾಕೆಂದರೆ ಆಕೆ ಸಾವನ್ನಪ್ಪಿರುವುದು ಮಗುವಿಗೆ ತಿಳಿದಿಲ್ಲ! ಅತಿಯಾದ ಬಿಸಿಲ ಬೇಗೆ, ಹಸಿವು ಹಾಗೂ ಬಾಯಾರಿಕೆಯಿಂದ ಆಕೆ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಈ ವಿಡಿಯೋ ತುಣುಕು ಬಿಹಾರದ ಮುಝಾಫರ್ ಪುರ್ ರೈಲ್ವೆ ನಿಲ್ದಾಣದ್ದಾಗಿದೆ. ಸೋಮವಾರ ವಿಶೇಷ ಶ್ರಮಿಕ್ ರೈಲಿನಲ್ಲಿ 23 ವರ್ಷದ ಮಹಿಳೆ ಆಗಮಿಸಿದ್ದಳು ಎಂದು ವರದಿ ತಿಳಿಸಿದೆ.
ಈ ಸಂದರ್ಭದಲ್ಲಿ ಊಟೋಪಚಾರಾ ಇಲ್ಲದೆ, ಅತೀಯಾದ ಬಿಸಿಲಿನಿಂದಾಗಿ ಎರಡು ವರ್ಷದ ಮಗುವೊಂದು ಸಾವನ್ನಪ್ಪಿದೆ. ಈ ಮಗುವಿನ ಕುಟುಂಬದ ಸದಸ್ಯರು ಭಾನುವಾರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಆಹಾರ ಮತ್ತು ನೀರಿನ ಕೊರತೆಯಿಂದಾಗಿ ಮಹಿಳೆ ನಿಶ್ಯಕ್ತಿಗೆ ಒಳಗಾಗಿದ್ದಳು ಎಂದು ಆಕೆಯ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಭಾನುವಾರ ಗುಜರಾತ್ ನಿಂದ ರೈಲಿನಲ್ಲಿ ಹೊರಟು ಸೋಮವಾರ ಮುಝಾಫರ್ ಪುರ್ ಗೆ ಆಗಮಿಸಿದ್ದ ವೇಳೆ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದಳು. ನಂತರ ಆಕೆಯ ಶವವನ್ನು ನಿಲ್ದಾಣದಲ್ಲಿ ಇಟ್ಟು ಬಟ್ಟೆಯಿಂದ ಮುಚ್ಚಲಾಗಿತ್ತು. ಈ ಸಮಯದಲ್ಲಿ ಪುಟ್ಟ ಮಗು ಆಕೆಯ ಬಳಿ ಆಟವಾಡಿಕೊಂಡು ಬಟ್ಟೆಯನ್ನು ಎಳೆದು ಎಬ್ಬಿಸಲು ಪ್ರಯತ್ನಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ ಎಂದು ವರದಿ ವಿವರಿಸಿದೆ.