ಸುಳ್ಯ: ಭಸ್ಮಡ್ಕದ ಪಯಸ್ವಿನಿ ನದಿ ಬಳಿಯಿಂದ ಸೋಮವಾರ ಸಂಜೆ ಕರೆದೊಯ್ಯಲಾದ ಹಿಂಡನ್ನಗಲಿದ ಆನೆಮರಿ ತಡರಾತ್ರಿ 3 ಗಂಟೆಯ ವೇಳೆಗೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಶಿಬಿರ ತಲುಪಿತು.
ಗುಂಪಿನಿಂದ ಬೇರ್ಪಟ್ಟು ಭಸ್ಮಡ್ಕದ ಪಯಸ್ವಿನಿ ನದಿ ಬಳಿ ತೋಟ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆನೆಮರಿ ಯನ್ನು ಸೋಮವಾರ ಸಂಜೆ 5.30ಕ್ಕೆ ಪಿಕ್‌ಅಪ್ ವಾಹನದಲ್ಲಿ ಕರೆದೊಯ್ಯಲಾಗಿತ್ತು. ಸುಳ್ಯದಿಂದ ಹೊರಟು ಗುರುವಾಯನಕೆರೆ – ಆಗುಂಬೆ ರಸ್ತೆಯ ಮೂಲಕ ಸಕ್ರೆಬೈಲು ಸೇರಿತು.
ಅಧಿಕಾರಿಗಳು ಮಂಗಳವಾರ ಮಧ್ಯಾಹ್ನದ ತನಕ ಅಲ್ಲಿದ್ದು, ಬಳಿಕ ಸುಳ್ಯಕ್ಕೆ ಮರಳಿದ್ದಾರೆ.
ಚಿಕಿತ್ಸೆ ಮುಂದುವರಿಕೆ: ಆನೆ ಶಿಬಿರದಲ್ಲಿ ತಜ್ಞ ಡಾ| ವಿನಯ್ ಮರಿ ಯಾನೆಗೆ ಚಿಕಿತ್ಸೆ ಮುಂದು ವರಿಸಿದ್ದಾರೆ. ಇನ್ನೆರಡು ದಿನದಲ್ಲಿ ಮರಿಯಾನೆ ಪೂರ್ಣ ಪ್ರಮಾಣದಲ್ಲಿ ಚೇರಿಸಿಕೊಳ್ಳುವ ನಿರೀಕ್ಷೆಯನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ಅನಂತರ ಉಳಿದ ಆನೆಗಳ ಜತೆಗೆ ಬಿಡಲಾಗುತ್ತದೆ. ಮರಿಯಾನೆ ಇನ್ನು ಸಕ್ರೆಬೈಲು ಆನೆ ಶಿಬಿರದಲ್ಲೇ ಇರುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇಲಾಖಾಧಿಕಾರಿಗಳಲ್ಲಿ ಒಪ್ಪಿಗೆ ಪಡೆದು ಆನೆ ಮರಿಯನ್ನು ಸಕ್ರೆಬೈಲು ಆನೆ ಶಿಬಿರಕ್ಕೆ ಹಸ್ತಾಂತರಿಸಲಾಗಿದೆ. ಸೋಮವಾರ ತಡರಾತ್ರಿ 2.30ರಿಂದ 3 ಗಂಟೆಯ ಒಳಗೆ ಅಲ್ಲಿಗೆ ತಲುಪಿದ್ದೇವೆ. ಅಲ್ಲಿ 26 ಆನೆಗಳಿದ್ದು, ಮರಿಯಾನೆಯನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ.
– ಮಂಜುನಾಥ್ ಎನ್.,ವಲಯ ಅರಣ್ಯಧಿಕಾರಿ, ಸುಳ್ಯ