Advertisement
ಬೇಬಿ ಕಾರ್ನ್ ನಿಂದ ಏನು ತಯಾರಿಸಿದರೂ ರುಚಿಯೇ ಅದರಲ್ಲೂ ಬೇಬಿ ಕಾರ್ನ್ ಮಂಚೂರಿಯನ್ ಎಲ್ಲರ ಬಾಯಿಯಲ್ಲಿ ನೀರೂರಿಸುತ್ತದೆ. ಹಾಗಾದರೆ ಇನ್ನೇಕೆ ತಡ ಸ್ವಾದಿಷ್ಟಕರವಾದ “ಬೇಬಿ ಕಾರ್ನ್ ಮಂಚೂರಿಯನ್” ಮನೆಯಲ್ಲೇ ಮಾಡಿ ಸ್ವಾದಿಷ್ಟವಾಗಿ ಸವಿಯಿರಿ..
ಬೇಬಿ ಕಾರ್ನ್- 250ಗ್ರಾಂ, ಕಾನ್‌ಫ್ಲೋರ್- 4 ಚಮಚ, ಮೈದಾ- 3 ಚಮಚ, ಪೆಪ್ಪರ್ ಪುಡಿ- 1 ಚಮಚ, ಈರುಳ್ಳಿ- 3 ಸಣ್ಣಗೆ ಹೆಚ್ಚಿದ್ದು, ಅಚ್ಚ ಖಾರದ ಪುಡಿ-1 ಚಮಚ, ಬೆಳ್ಳುಳ್ಳಿ-1 ಚಮಚ ಸಣ್ಣಗೆ ಹೆಚ್ಚಿದ್ದು, ಶುಂಠಿ-1 ಚಮಚ ಸಣ್ಣಗೆ ಹೆಚ್ಚಿದ್ದು, ಹಸಿಮೆಣಸು-2, ಕ್ಯಾಪ್ಸಿಕಂ-1, ಕೊತ್ತಂಬರಿ ಸೊಪ್ಪು ಸ್ವಲ್ಪ, ಟೊಮೆಟೋ ಸಾಸ್-3 ಚಮಚ,ಚಿಲ್ಲಿ ಸಾಸ್-2 ಚಮಚ, ಸೋಯಾ ಸಾಸ್-2 ಚಮಚ, ವಿನೆಗರ್-1 ಚಮಚ, ಎಣ್ಣೆ-ಕರಿಯಲು, ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ
ಮೊದಲು ಬೇಬಿ ಕಾರ್ನ್ ನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ. ನಂತರ ಅದನ್ನು ನಿಮಗೆ ಬೇಕಾಗುವ ರೀತಿಯಲ್ಲಿ ಕಟ್ ಮಾಡಿಕೊಳ್ಳಿರಿ. ತದನಂತರ ಒಂದು ಪಾತ್ರೆಗೆ ಕಾನ್‌ಫ್ಲೋರ್, ಮೈದಾ, ಅಚ್ಚ ಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ನೀರನ್ನು ಸೇರಿಸಿ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿ ಇಟ್ಟುಕೊಳ್ಳಿ (ಈ ಹಿಟ್ಟು ಅತಿ ದಪ್ಪವೂ ಇರಬಾರದು ತೆಳ್ಳಗೂ ಇರಬಾರದು). ಇದಕ್ಕೆ ಕಟ್ ಮಾಡಿಟ್ಟ ಬೇಬಿ ಕಾರ್ನ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ. ತದನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ, ಕಾದ ಮೇಲೆ ಮಿಶ್ರಣ ಮಾಡಿಟ್ಟ ಬೇಬಿ ಕಾರ್ನ್ ಹಾಕಿ ಹೊಂಬಣ್ಣ(ಕಂದು ಬಣ್ಣ) ಬರುವವರೆಗೂ ಕಾಯಿಸಿರಿ. ನಂತರ ಇನ್ನೊಂದು ಬಾಣಲೆಗೆ 3 ಚಮಚ ಎಣ್ಣೆ ಬಿಸಿ ಮಾಡಿ ಅದಕ್ಕೆ ಶುಂಠಿ, ಬೆಳ್ಳುಳ್ಳಿ ಹಾಕಿ ಹುರಿಯಿರಿ, ಆಮೇಲೆ ಈರುಳ್ಳಿ, ಹಸಿಮೆಣಸು, ಕ್ಯಾಪ್ಸಿಕಂ ಸೇರಿಸಿ ದೊಡ್ಡ ಉರಿಯಲ್ಲಿ ಅರ್ಧ ನಿಮಿಷಗಳವರೆಗೆ ಹುರಿಯಿರಿ. ನಂತರ ಟೊಮೆಟೋ ಸಾಸ್, ಚಿಲ್ಲಿ ಸಾಸ್, ಸೋಯಾ ಸಾಸ್, ವಿನೆಗರ್, ಪೆಪ್ಪರ್ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ ಅದಕ್ಕೆ ಕಾಯಿಸಿಟ್ಟ ಬೇಬಿ ಕಾನ್ ನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿರಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬಿಸಿ-ಬಿಸಿಯಾದ ಸ್ವಾದಿಷ್ಟಕರವಾದ ಬೇಬಿ ಕಾರ್ನ್ ಮಂಚೂರಿಯನ್ ಸವಿಯಿರಿ.