ಕುಂದಾಪುರ: ನಮಗೆ ಡಾಕ್ಟರ್ ಕೊಟ್ಟದ್ದು ಜ. 3ರ ತಾರೀಖು, ನಾವು ಹಾಗೆಯೇ ಅಂದುಕೊಂಡಿದ್ವಿ. ಆದರೆ ಡಿ. 31ರ ರಾತ್ರಿ ನೋವು ಕಾಣಿಸಿಕೊಂಡು ರಾತ್ರಿ 1.38ಕ್ಕೆ ಸಹಜ ಹೆರಿಗೆಯಲ್ಲಿ ಗಂಡು ಮಗುವಿನ ಜನನವಾಯಿತು. ಆಗ ನಮ್ಮ ಖುಷಿಗೆ ಪಾರವೇ ಇಲ್ಲ. ಹೀಗೆ ಹೊಸ ವರ್ಷಕ್ಕೆ ಮಗುವಿನ ಜನನದ ಸಂತಸ ಹಂಚಿಕೊಂಡಿದ್ದು ಭಟ್ಕಳದ ಮೂಲದ ಶಾರದಾ (25). ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಹೆರಿಗೆಯಾಗಿದೆ. 2019ರ ವರ್ಷಾಚರಣೆ ವೇಳೆ ಕುಂದಾಪುರದ ಆಸ್ಪತ್ರೆಗಳ ಪೈಕಿ ಜನಿಸಿದ ಮೊದಲ ಮಗು ಶಾರದಾ-ರಾಜೇಶ್ ದಂಪತಿದ್ದು. ಉಳಿದಂತೆ ಬೆಳಗ್ಗೆ 5, 7 ಹಾಗೂ 10.48 ಗಂಟೆಗೆ ಜನನವಾಗಿದೆ. ಶಾರದಾ ಅವರಿಗೆ ಡಾ| ಕೆ. ಭವಾನಿ ರಾವ್ ಹೆರಿಗೆ ಮಾಡಿಸಿದ್ದಾರೆ. ಭಟ್ಕಳದ ಬಂದರಿನವರಾದ ಶಾರದಾ ಅವರು ಸೋಡಿಗದ್ದೆಯ ರಾಜೇಶ್ ಅವರನ್ನು ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರು.
ಸಹಜ ಹೆರಿಗೆ
ರಾತ್ರಿ 1.38ರ ವೇಳೆಗೆ ಸಹಜ ಹೆರಿಗೆಯಾಗಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆ.
–
ಡಾ| ಕೆ. ಭವಾನಿ ರಾವ್, ವೈದ್ಯೆ
ಖುಷಿಯಾಗಿದೆ
ಹೆಸರು ಯಾವುದು ಇಡುವುದು ಎಂದು ಇನ್ನೂ ಯೋಚಿಸಿಲ್ಲ. ಆದರೆ ಹೊಸವರ್ಷಕ್ಕೆ ಜನನವಾಗಿದೆ ಎಂಬ ಖುಷಿಯಂತೂ ಇದ್ದೇ ಇದೆ.
-ಶಾರದಾ, ಮಗುವಿನ ತಾಯಿ