ಲಂಡನ್: ಗಿನಿ ದೇಶದ ಕೊನಾಕ್ರೆ ನಿಲ್ದಾಣದಿಂದ ಹೊರಟ ಟರ್ಕಿಶ್ ಏರ್‌ಲೈನ್ಸ್‌ನ ವಿಮಾನ, ಒಬ್ಬ ಹೆಚ್ಚುವರಿ ಪ್ರಯಾಣಿಕರೊಂದಿಗೆ ಬುರ್ಕಿನಾ ಫಾಸೋ ದೇಶದ ವಿಮಾನ ನಿಲ್ದಾಣದಲಿ ಲ್ಯಾಂಡ್ ಆಗಿದೆ! ಕಾರಣ, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಫಿ ದಿಯಬೇ ಎಂಬ ಮಹಿಳೆ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.
ವಿಮಾನ ಕೊನಾಕ್ರೆಯಿಂದ ಹೊರಟು, 42 ಸಾವಿರ ಅಡಿ ಎತ್ತದಲ್ಲಿ ಸಾಗುತ್ತಿರುವಾಗ ದಿಯಬೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರ ನೆರವಿಗೆ ಬಂದ ಗಗನ ಸಖೀಯರು ಹಾಗೂ ವಿಮಾನದ ಸಿಬ್ಬಂದಿ, ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಸ್ಥಳದಲ್ಲೇ ಮಗುವಿಗೆ ಕಾಡಿಜು ಎಂದು ಹೆಸರಿಡಲಾಗಿದ್ದು, ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆ ತಾಯಿ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಸುರಕ್ಷಿತವಾಗಿದ್ದಾರೆ.
ಹೆರಿಗಯೇನೋ ಸುರಕ್ಷಿತವಾಗಿ ಆಗಿದೆ. ಆದರೆ ಈಗ ಮಗುವಿನ ಜನ್ಮ ಸ್ಥಳ ಹಾಗೂ ರಾಷ್ಟ್ರೀಯತೆ ಕುರಿತಂತೆ ವ್ಯಾಪಕ ಚರ್ಚೆ ನಡೆಯುತ್ತಿದೆ. ನ್ಯಾಯವಾಗಿ ಮಗು ತನ್ನ ತಾಯಿಯ ರಾಷ್ಟ್ರೀಯತೆಯನ್ನು ಪಡೆಯಬೇಕು. ಆದರೆ ಮಗು ಜನಿಸಿದಾಗ ವಿಮಾನ ಯಾವ ದೇಶದ ಮೇಲೆ ಹಾರುತ್ತಿತ್ತೋ ಆ ದೇಶದ ರಾಷ್ಟ್ರೀಯತೆಯನ್ನು ಮಗು ಪಡೆಯಲಿದೆ ಎಂದು ಕೆಲವರು ವಾದಿಸಿದ್ದಾರೆ.