ಧಾರವಾಡ: ರೈತ ಸಮುದಾಯಕ್ಕೆ ಮಾರಕ ನಡೆ ಕೈಗೊಂಡಿರುವ ಆಡಳಿತಾರೂಢ ಬಿಜೆಪಿ ಸರಕಾರದ ಕುತಂತ್ರದ ಬಗ್ಗೆ ರೈತರು ಜಾಗೃತರಾಗುವ ಅವಶ್ಯಕತೆ ಇದೆ ಎಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಹೇಳಿದರು.
ನಗರದಲ್ಲಿ ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್. ನೀರಲಕೇರಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಟ್ರಾÂಕ್ಟರ್ ರ್ಯಾಲಿ ಬಳಿಕ ಕಾಯಕನಗರ ಬಳಿ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ರೈತರು ಕೂಡ ರಾಜಕೀಯ ಪಕ್ಷಗಳ ಮುಖಂಡರ ಬೂಟಾಟಿಕೆಯ ಮಾತುಗಳನ್ನು ನಂಬದೇ ಸದಾ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸರಕಾರದ ಕೃಷಿ ಸಂಬಂ ಧಿತ ಮೂರು ಕಾನೂನುಗಳು ರೈತರ ಹಿತಕ್ಕೆ ಪೂರಕವಾಗಿಲ್ಲ. ತಮಗೆ ಆರ್ಥಿಕ ನೆರವು ನೀಡುವ ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಕೊಡಿಸಲು ಕೇಂದ್ರದಲ್ಲಿನ ಬಿಜೆಪಿ ಸರಕಾರ ಮುಂದಾಗಿದೆ. ಈ ದಿಸೆಯಲ್ಲಿ ಈಗಾಗಲೇ ಖಾಸಗಿಯವರಿಗೆ ಸರಕಾರಿ ಸ್ವಾಮ್ಯದ ಆಸ್ತಿ ನಿರ್ವಹಿಸಲು ನೀಡಲಾಗುತ್ತಿದೆ ಎಂದರು.
ಇದನ್ನೂ ಓದಿ:ಕಾಂಗ್ರೇಸ್ ನಾಯಕರ ವಿರುದ್ಧ ಮಾತನಾಡಿದವರನ್ನೇ ಸಿಎಂ ಟಾರ್ಗೆಟ್ ಮಾಡುತ್ತಿದ್ದಾರೆ : ಯತ್ನಾಳ್
ಕೃಷಿಯಲ್ಲಿ ಬಂಡವಾಳಶಾಹಿಗಳು ಪ್ರವೇಶಿಸಲು ಅವಕಾಶ ನೀಡುವ ಮೂಲಕ ಅನ್ನದಾತರನ್ನು ಸಂಪೂರ್ಣ ನಾಶ ಮಾಡಲು ಹೊರಟಿದೆ. ಕೇಂದ್ರ ಸರಕಾರದ ಮತ್ತು ರಾಜ್ಯ ಸರ್ಕಾರದ ಇಂತಹ ಕಪಟ ಕಾರ್ಯಕ್ರಮಗಳು ರೈತರ ಅರಿವಿಗೆ ಬಂದ ಪರಿಣಾಮಹೋರಾಟಗಳು ಆರಂಭವಾಗಿವೆ. ಸರಕಾರ ರೈತ ವಿರೋ ಧಿ ಧೋರಣೆಯಿಂದ ಹಿಂದಕ್ಕೆ ಸರಿಯದಿದ್ದರೆ ಇನ್ನೂ ತೀವ್ರತರ ವಿರೋಧಎದುರಿಸಬೇಕಾಗುತ್ತದೆ. ಈ ವಿಷಯದಲ್ಲಿ ಸರಕಾರ ಎಚ್ಚರ ವಹಿಸದಿದ್ದರೆ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಸೋಮಗುದ್ದು ರಂಗಸ್ವಾಮಿ, ಸಿದ್ಧನಗೌಡ ಪಾಟೀಲ, ಮಾಜಿ ಸಂಸದ ಪ್ರೊ| ಐ.ಜಿ. ಸನದಿ, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಮುಖಂಡರಾದ ಜಿ.ಎನ್. ಗಣೇಶದೇವಿ, ಶಿವಾನಂದ ಹೊಳೆಹಡಗಲಿ, ಗಂಗಾಧರ ಪಾಟೀಲ ಕುಲಕರ್ಣಿ, ಶಂಕರ ಹಲಗತ್ತಿ, ಮಹಾಂತೇಶ ರಾವುತ, ಶಾಕೀರ ಸನದಿ, ಅಪ್ಪೇಶ ದಳವಾಯಿ, ಚನಬಸಪ್ಪ ಮಸೂತಿ, ಸುರೇಶಬಾಬು ತಳವಾರ ಸೇರಿದಂತೆ ರೈತ ಮುಖಂಡರು ಪಾಲ್ಗೊಂಡಿದ್ದರು.