ನವದೆಹಲಿ:28ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದ್ದು ಸೆಪ್ಟೆಂಬರ್ 30ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ಸಿಬಿಐ ವಿಶೇಷ ಕೋರ್ಟ್ ಬುಧವಾರ (ಸೆಪ್ಟೆಂಬರ್ 16, 2020) ತಿಳಿಸಿದ್ದು, ಈ ಸಂದರ್ಭದಲ್ಲಿ ಎಲ್ಲಾ ಆರೋಪಿಗಳು ಕೋರ್ಟ್ ನಲ್ಲಿ ಹಾಜರಿರಬೇಕೆಂದು ಸೂಚಿಸಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ, ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ ಸೇರಿದಂತೆ 32 ಮಂದಿ ಆರೋಪಿಗಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಸಂಚಿನ ಪ್ರಕರಣದ ಕುರಿತು ಅಂತಿಮ ತೀರ್ಪು ಪ್ರಕಟಿಸುವ ದಿನಾಂಕವನ್ನು ಲಕ್ನೋದ ಸಿಬಿಐ ವಿಶೇಷ ಕೋರ್ಟ್ ನ ಜಡ್ಜ್ ಸುರೇಂದ್ರ ಕುಮಾರ್ ಯಾದವ್ ಬುಧವಾರ ನಿಗದಿಪಡಿಸಿ ಆದೇಶ ನೀಡಿದ್ದಾರೆ. ಇದಕ್ಕೂ ಮುನ್ನ ಎಲ್ಲಾ 32 ಆರೋಪಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಕೋರ್ಟ್ ಪೂರ್ಣಗೊಳಿಸಿತ್ತು.
ಬದಲಾದ SBI ATM ನಿಯಮ; 10 ಸಾವಿರಕ್ಕಿಂತ ಮೇಲ್ಪಟ್ಟ ವ್ಯವಹಾರಕ್ಕೆ ಮೊಬೈಲ್ OTP ಕಡ್ಡಾಯ
32 ಆರೋಪಿಗಳ ಪೈಕಿ 25 (ಎಲ್ ಕೆ ಆಡ್ವಾಣಿ, ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ) ಆರೋಪಿಗಳ ಪರ ವಕೀಲರಾದ ಕೆಕೆ ಮಿಶ್ರಾ ಅವರು ಅಂತಿಮ ತೀರ್ಪಿನ ದಿನಾಂಕ ನಿಗದಿಯಾಗಿರುವುದನ್ನು ಖಚಿತಪಡಿಸಿದ್ದಾರೆ.
ಈ ಮೊದಲು ಆಗಸ್ಟ್ 31ರಂದು ಬಾಬ್ರಿ ಧ್ವಂಸ ಪ್ರಕರಣದ ತೀರ್ಪನ್ನು ಪ್ರಕಟಿಸುವ ಬಗ್ಗೆ ಅಂತಿಮ ಗಡುವು ನೀಡಲಾಗಿತ್ತು. ಬಳಿಕ ಸುಪ್ರೀಂಕೋರ್ಟ್ ಆ ಅವಧಿಯನ್ನು ಒಂದು ತಿಂಗಳ ಕಾಲ ಮುಂದೂಡಲು ಅನುಮತಿ ನೀಡಿದ್ದು, ಸೆಪ್ಟೆಂಬರ್ 30ರಂದು ತೀರ್ಪು ಹೊರಬೀಳಲಿದೆ.
ದೇಶದಲ್ಲಿಯೇ ಕೋಮುದಳ್ಳುರಿ ಹಾಗೂ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗಿದ್ದ ಸೂಕ್ಷ್ಮ ಪ್ರಕರಣದ ವಿಚಾರಣೆಯನ್ನು ಶೀಘ್ರವೇ ಮುಕ್ತಾಯಗೊಳಿಸಬೇಕೆಂದು ಸುಪ್ರೀಂಕೋರ್ಟ್ ಹಲವಾರು ಬಾರಿ ಅಂತಿಮ ಗಡುವು ನೀಡಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ.
ಐಸಿಸ್ ಹೆಚ್ಚು ಸಕ್ರಿಯ: ಲೋಕಸಭೆಯಲ್ಲಿ ಕರ್ನಾಟಕದ ಬಗ್ಗೆ ನೀಡಿದ ಮಾಹಿತಿಯಲ್ಲೇನಿದೆ?
1992ರ ಡಿಸೆಂಬರ್ 6ರಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ವಿವಾದಿತ ರಾಜ ಜನ್ಮಭೂಮಿ ಪ್ರದೇಶದಲ್ಲಿದ್ದ ಬಾಬ್ರಿ ಮಸೀದಿಯನ್ನು ಕರಸೇವಕರು ಧ್ವಂಸಗೊಳಿಸಿದ್ದರು. ಇದರಿಂದ ದೇಶಾದ್ಯಂತ ಕೋಮು ದಳ್ಳುರಿ ಹೊತ್ತಿಕೊಂಡಿತ್ತು. ನಂತರ ಮುಂಬೈ ಬಾಂಬ್ ಸ್ಫೋಟ, ಗೋಧ್ರಾ ಘಟನೆ, ಗುಜರಾತ್ ಗಲಭೆ ನಡೆದಿತ್ತು.
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಉತ್ತೇಜನ (ಸೆಕ್ಷನ್ 153ಎ), ರಾಷ್ಟ್ರೀಯ ಏಕತೆ ಮೇಲೆ ಪರಿಣಾಮದ ಹೇಳಿಕೆ (ಸೆಕ್ಷನ್ 153 ಬಿ), ಸಾರ್ವಜನಿಕ ಕಿಡಿಗೇಡಿತನ (ಸೆಕ್ಷನ್ 505) ಸೇರಿದಂತೆ ಭಾರತೀಯ ಅಪರಾಧ ದಂಡ ಸಂಹಿತೆಯಡಿ ವಿವಿಧ ಆರೋಪ ಹೊರಿಸಲಾಗಿತ್ತು. ಆರೋಪಿತ ಬಿಜೆಪಿ ನಾಯಕರ ವಿರುದ್ಧ ಐಪಿಸಿ ಸೆಕ್ಷನ್ 120ರ ಅಡಿ ಕ್ರಿಮಿನಲ್ ಪಿತೂರಿಯ ಹೆಚ್ಚುವರಿ ಆರೋಪ ಹೊರಿಸಬೇಕೆಂದು 2017ರಲ್ಲಿ ಸುಪ್ರೀಂಕೋರ್ಟ್ ಆದೇಶಿಸಿತ್ತು.
ಜುಲೈ ತಿಂಗಳಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಬಿಐ ವಿಶೇಷ ನ್ಯಾಯಾಲಯದ ವಿಚಾರಣೆಯಲ್ಲಿ ಎಲ್ ಕೆ ಅಡ್ವಾಣಿ (92ವರ್ಷ) ಅವರಿಗೆ ನೂರು ಪ್ರಶ್ನೆಗಳನ್ನು ಕೇಳಲಾಗಿತ್ತು. 4.5 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಅಡ್ವಾಣಿ ಅವರು ತಮ್ಮ ವಿರುದ್ಧ ಹೊರಿಸಲಾದ ಆರೋಪವನ್ನು ನಿರಾಕರಿಸಿದ್ದರು.