Advertisement

ಬಾಬರಿ ಧ್ವಂಸ: ಕ್ರಿಮಿನಲ್‌ ಸಂಚು ವಿಚಾರಣೆ ಎದುರಿಸಲು ಸಿದ್ಧ

03:45 AM Apr 07, 2017 | Team Udayavani |

ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಸಿದ್ಧವಿರುವುದಾಗಿ ಬಿಜೆಪಿ ಹಿರಿಯ ನಾಯಕರಾದ ಎಲ್‌.ಕೆ. ಆಡ್ವಾಣಿ, ಮುರಳಿ ಮನೋಹರ್‌ ಜೋಷಿ ಹಾಗೂ ಇತರರು ಹೇಳಿದ್ದಾರೆ.

Advertisement

ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ಇವರ ವಿರುದ್ಧದ ಕ್ರಿಮಿನಲ್‌ ಸಂಚು ಆರೋಪಗಳ ಕುರಿತು ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಬೇಕೆಂದು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಆಗ್ರಹಿಸಿದ್ದು, ವಿಚಾರಣೆ ನಡೆಸಬೇಕೆ, ಬೇಡವೇ ಎಂಬ ಕುರಿತ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿತು. ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, “ಪ್ರಕರಣವನ್ನು ದಿನಂಪ್ರತಿ ವಿಚಾರಣೆ ನಡೆಸಲು ನಾವು ಸಿದ್ಧರಿದ್ದೇವೆ,’ ಎಂದೂ ಹೇಳಿತು.

ಆರೋಪಿಗಳಾದ ಆಡ್ವಾಣಿ, ಜೋಷಿ, ಉಮಾಭಾರತಿ ಸೇರಿದಂತೆ ಬಿಜೆಪಿ ನಾಯಕರ ಪರ ಹಾಜರಾದ ಹಿರಿಯ ನ್ಯಾಯವಾದಿ ಕೆ.ಕೆ. ವೇಣುಗೋಪಾಲ್‌, “ಆರೋಪಿಗಳ ವಿರುದ್ಧದ ಸಾಕ್ಷ್ಯಗಳನ್ನು ಸಿಬಿಐ ರಾಯ್‌ಬರೇಲಿ ನ್ಯಾಯಾಲಯಕ್ಕೆ ಒಪ್ಪಿಸಿದ್ದೇ ಆದಲ್ಲಿ, ಕ್ರಿಮಿನಲ್‌ ಸಂಚು ಆರೋಪದ ವಿಚಾರಣೆ ಎದುರಿಸಲು ನನ್ನ ಕಕ್ಷಿದಾರರು ಸಿದ್ಧರಿದ್ದಾರೆ,’ ಎಂದರು. ಬಿಜೆಪಿ ನಾಯಕರ ವಿರುದ್ಧದ ಕ್ರಿಮಿನಲ್‌ ಸಂಚು ಆರೋಪವನ್ನು ರಾಯ್‌ಬರೇಲಿ ನ್ಯಾಯಾಲಯ ತಳ್ಳಿಹಾಕಿತ್ತು. ನಂತರ 2010ರಲ್ಲಿ ಈ ನಿರ್ಧಾರವನ್ನು ಅಲಹಾಬಾದ್‌ ಹೈಕೋರ್ಟು ಎತ್ತಿಹಿಡಿದಿತ್ತು.

ಪ್ರಕರಣ ಲಕ್ನೋಗೆ ವರ್ಗಾವಣೆ?: ಗುರುವಾರ ಪ್ರಕರಣದ ದೈನಂದಿನ ವಿಚಾರಣೆಗೆ ಒಪ್ಪಿರುವ ಸುಪ್ರೀಂ ಕೋರ್ಟ್‌, ವಿಚಾರಣೆಯನ್ನು ಲಕ್ನೋ ನ್ಯಾಯಾಲಯಕ್ಕೆ ವರ್ಗಾಯಿಸುವ ಸುಳಿವನ್ನೂ ನೀಡಿದೆ. “17 ವರ್ಷಗಳಿಂದಲೂ ಈ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ನ್ಯಾಯದ ಹಿತಾಸಕ್ತಿಯಿಂದ ದೈನಂದಿನ ವಿಚಾರಣೆ ನಡೆಸಿ, 2 ವರ್ಷಗಳೊಳಗೆ ವಿಚಾರಣೆ ಪೂರ್ಣಗೊಳಿಸುವುದು ಒಳಿತು. ಜತೆಗೆ, ಈ ವಿವಿಐಪಿ ಆರೋಪಿಗಳ ವಿರುದ್ಧದ ಪ್ರಕರಣವನ್ನು ರಾಯ್‌ಬರೇಲಿಯಿಂದ ಲಕ್ನೋಗೆ ವರ್ಗಾಯಿಸುವುದೇ ಎಂಬ ಕುರಿತು ಸದ್ಯದಲ್ಲೇ ಪ್ರಕಟಿಸಲಾಗುವುದು,’ ಎಂದು ಕೋರ್ಟ್‌ ಹೇಳಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನ್ಯಾ. ವೇಣುಗೋಪಾಲ್‌, “ಸಂವಿಧಾನದ 142ನೇ ವಿಧಿಯ ವಿಶೇಷಾಧಿಕಾರವನ್ನು ಬಳಸಿಕೊಂಡು ಪ್ರಕರಣವನ್ನು ವರ್ಗಾಯಿಸುವ ಮೂಲಕ ವ್ಯಕ್ತಿಗಳ ಮೂಲಭೂತ ಹಕ್ಕನ್ನು ನ್ಯಾಯಾಲಯ ಕಸಿದುಕೊಳ್ಳಬಾರದು,’ ಎಂದರು.

ಎರಡು ಕಡೆ ಕೇಸು: 1992 ಡಿ.6 ರ ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿ ಎರಡು ಬಗೆಯ ಕೇಸುಗಳು ದಾಖಲಾಗಿವೆ. ಕರಸೇವಕರ ವಿರುದ್ಧದ ಮೊದಲ ಕೇಸಿನ ವಿಚಾರಣೆ ಲಕ್ನೋ ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ, ವಿವಿಐಪಿ ಆರೋಪಿಗಳಿಗೆ ಸಂಬಂಧಿಸಿದ ಕೇಸು ರಾಯ್‌ಬರೇಲಿ ಕೋರ್ಟ್‌ನಲ್ಲಿದೆ. ಈ ಎರಡೂ ಕೇಸುಗಳನ್ನು ಸೇರಿಸಿ, ಜಂಟಿ ವಿಚಾರಣೆ ನಡೆಸುವ ಬಗ್ಗೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಪಿ.ಸಿ.ಘೋಷ್‌ ಹಾಗೂ ನ್ಯಾ.ಆರ್‌.ಎಫ್.ನಾರಿಮನ್‌ ಅಭಿಪ್ರಾಯಪಟ್ಟಿತ್ತು. ಇದಕ್ಕೆ ಬಿಜೆಪಿ ನಾಯಕರ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದರೆ, ಅರ್ಜಿದಾರ ಹಾಜಿ ಮೆಹಬೂಬ್‌ ಪರ ವಕಾಲತ್ತು ಮಾಡುತ್ತಿರುವ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಸ್ವಾಗತಿಸಿದ್ದರು. ಜಂಟಿ ವಿಚಾರಣೆ ನಡೆಸಬೇಕೆಂದರೆ, ಹೊಸದಾಗಿ ಆರೋಪಪಟ್ಟಿ ಸಲ್ಲಿಸುವುದು, ದೋಷ ನಿಗದಿಮಾಡುವುದು ಮುಂತಾದ ಪ್ರಕ್ರಿಯೆಗಳೇನೂ ನಡೆಯುವುದಿಲ್ಲ. ಬದಲಿಗೆ, ಸಾಕ್ಷ್ಯಗಳಿಗೆ ಪಾಟೀ ಸವಾಲು ಹಾಕುವ ಅವಕಾಶ ಸಿಗುತ್ತದೆ ಎಂದಿದ್ದರು ಸಿಬಲ್‌.

Advertisement

ಆಗಿದ್ದೆಲ್ಲ ಆಗಿಹೋಗಿದೆ. ವಿಚಾರಣೆಯನ್ನು ಒಂದು ಕೋರ್ಟಿಂದ ಮತ್ತೂಂದಕ್ಕೆ ವರ್ಗಾಯಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗಿದೆ. ಕೇಸುಗಳು ವರ್ಷಾನುಗಟ್ಟಲೆ ಇತ್ಯರ್ಥವಾಗದೇ ಉಳಿದರೆ, ಅದಕ್ಕೆ ಸಂಬಂಧಪಟ್ಟವರು ನೋವುಣ್ಣುತ್ತಾರೆ. ಹಾಗಾಗಿ, ದೈನಂದಿನ ವಿಚಾರಣೆ ನಡೆಸಿ 2 ವರ್ಷಗಳೊಳಗೆ ಪ್ರಕರಣ ಇತ್ಯರ್ಥಗೊಳಿಸಬೇಕು.
– ಸುಪ್ರೀಂ ಕೋರ್ಟ್‌ ನ್ಯಾಯಪೀಠ

Advertisement

Udayavani is now on Telegram. Click here to join our channel and stay updated with the latest news.

Next