ಇಸ್ಲಮಾಬಾದ್: ಪಾಕಿಸ್ಥಾನ ಕ್ರಿಕೆಟ್ ನ ಏಕದಿನ ತಂಡದ ನಾಯಕನಾಗಿ ಬಾಬರ್ ಅಜಮ್ ಆಯ್ಕೆಯಾಗಿದ್ದಾರೆ. ಇದುವರೆಗೆ ಟಿ20 ತಂಡದ ಜವಾಬ್ದಾರಿ ಹೊತ್ತಿದ್ದ ಬಾಬರ್ ಅಜಮ್ ಈಗ ಏಕದಿನ ತಂಡವನ್ನೂ ಮುನ್ನಡೆಸಲಿದ್ದಾರೆ.
2023ರ ಏಕದಿನ ವಿಶ್ವಕಪ್ ಅನ್ನು ಗುರಿಯಾಗಿರಿಸಿಕೊಂಡು ಬಾಬರ್ ಅಜಮ್ ಗೆ ನಾಯಕತ್ವ ವಹಿಸಲಾಗಿದೆ ಎಂದು ಮುಖ್ಯ ಕೋಚ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷರೂ ಆಗಿರುವ ಮಿಸ್ಭಾ ಉಲ್ ಹಕ್ ಹೇಳಿದ್ದಾರೆ.
ಪಾಕಿಸ್ಥಾನ ಏಕದಿನ ತಂಡವನ್ನು ಇದುವರೆಗೆ ಸರ್ಫರಾಜ್ ಅಹಮದ್ ಮುನ್ನಡೆಸುತ್ತಿದ್ದರು. ಸದ್ಯ ಕಳಪೆ ಆಟದಿಂದ ಸರ್ಫರಾಜ್ ರನ್ನು ತಂಡದಿಂದ ಕೈಬಿಡಲಾಗಿದೆ.
ದೀರ್ಘ ಸಮಯದವರೆಗೆ ತಂಡವನ್ನು ಮುನ್ನಡೆಸುವ ದೃಷ್ಟಿಯಿಂದ ನಾವು ಬಾಬರ್ ಅಜಮ್ ರನ್ನು ಆಯ್ಕೆ ಮಾಡಿದ್ದೇವೆ. ಆತ ಈಗಾಗಲೇ ಟಿ20 ತಂಡವನ್ನು ಮುನ್ನಡೆಸುತ್ತಿದ್ದು, ಉತ್ತಮ ಆಟಗಾರನೂ ಆಗಿದ್ದಾನೆ ಎಂದು ಮಿಸ್ಬಾ ಹೇಳಿದ್ದಾರೆ.
2020-21 ಗುತ್ತಿಗೆಯಲ್ಲಿ ನಸೀಂ ಶಾ ಮತ್ತು ಇಫ್ತಿಖಾರ್ ಅಹಮದ್ ರನ್ನು ಆಯ್ಕೆ ಮಾಡಲಾಗಿದೆ. ಆದರೆ ಮೊಹಮ್ಮದ್ ಆಮಿರ್ ಮತ್ತು ವಾಹಬ್ ರಿಯಾಜ್ ರನ್ನು ಗುತ್ತಿಗೆಯಿಂದ ಹೊರಗಿಡಲಾಗಿದೆ. ಟೆಸ್ಟ್ ತಂಡಕ್ಕೆ ಅಜರ್ ಅಲಿಯನ್ನೇ ನಾಯಕನನ್ನಾಗಿ ಮುಂದುವರಿಸಲಾಗಿದೆ.