Advertisement

ಬಬಲೇಶ್ವರ ತಾಲೂಕು ಪ್ರಥಮ ಅಕ್ಷರ ಜಾತ್ರೆ

05:14 PM Jan 24, 2020 | Naveen |

ವಿಜಯಪುರ: ಜಿಲ್ಲೆಯಲ್ಲಿ ನೂತನವಾಗಿ ಅಸಿತ್ವಕ್ಕೆ ಬಂದಿರುವ ಬಬಲೇಶ್ವರ ತಾಲೂಕು ಕನ್ನಡ ಸಾಹಿತ್ಯದ ಮೊದಲ ಸಮ್ಮೇಳನ ಜ.30ರಂದು ಬಬಲೇಶ್ವರ ನಗರದಲ್ಲಿ ನಡೆಯಲಿದೆ. ಸ್ಥಳೀಯರಾದ ಭಾರತಿ ಪಾಟೀಲ ಸರ್ವಾಧ್ಯಕ್ಷತೆಯಲ್ಲಿ ಜರುಗಲಿರುವ ಸಮ್ಮೇಳನಕ್ಕೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಸಾಪ ಬಬಲೇಶ್ವರ ತಾಲೂಕು ಅಧ್ಯಕ್ಷ ಮಹದೇವ ರೆಬಿನಾಳ ಹೇಳಿದರು.

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ವಿವರ ನೀಡಿದ ಅವರು, ಬಬಲೇಶ್ವರ ಗ್ರಾಮದ ಶಾಂತವೀರ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿರುವ ಅಕ್ಷರ ಜಾತ್ರೆಯ ಸಕಲ ಸಿದ್ಧತೆ ಅಂತಿಮ ಹಂತದಲ್ಲಿವೆ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಬಲೇಶ್ವರ ತಾಲೂಕು ಹಾಗೂ ಕನ್ನಡ ಸಾಹಿತ್ಯದ ಮೊದಲ ಸಮ್ಮೇಳನ ಹಲವು ಮಹತ್ವಗಳನ್ನು ಹೊಂದಿದೆ ಎಂದರು.

ಮಕ್ಕಳ ಸಾಹಿತ್ಯದ ಮೂಲಕ ನಾಡಿಗೆ ಕೀರ್ತಿ ತಂದಿರುವ ಬಬಲೇಶ್ವರದ ದಿ| ಶಂ.ಗು. ಬಿರಾದಾರ ಅವರ ಹೆಸರು ವೇದಿಕೆ ಇರಿಸಲಾಗಿದ್ದು, ದಾಸೋಹ ಮನೆಗೆ ನೀಲಮ್ಮಗೌಡತಿ ಬಿರಾದಾರ, ಪುಸ್ತಕ ಮಳಿಗೆಗಳಿಗೆ ಕಾಶೀಬಾಯಿ ದೇಸಾಯಿ ಜೈನಾಪೂರ ವಿವಿಧ ಮಹಾದ್ವಾರಗಳಿಗೆ ಕಾಖಂಡಕಿ ಮಹಿಪತಿದಾಸರು, ಕೆ.ಎನ್‌. ಸಾಳುಂಕೆ, ಕಾಲಜ್ಞಾನಿ ಚಿಕ್ಕಪ್ಪಯ್ಯ, ನಿಡೋಣಿ ಶಿವಪಾರ್ವತಿ, ಉಪ್ಪಲಗಿರಿ ಸಂಗಮನಾಥ, ಅಂಬಲಿ ಚೆನ್ನಬಸಪ್ಪ, ತಿಗಣಿಬಿದರಿ ಲಾಲ್‌ಸಾಹೇಬ ಹೀಗೆ ಅನೇಕ ಮಹಾನ್‌ ಚೇತನರ ಹೆಸರನ್ನು ಇರಿಸಲಾಗಿದೆ.

ಜ.30ರಂದು ಬೆಳಗ್ಗೆ ವಿಜಯಪುರ ತಾಪಂ ಅಧ್ಯಕ್ಷ ಕಾಳಪ್ಪ ಬೆಳ್ಳುಂಡಗಿ ರಾಷ್ಟ್ರಧ್ವಜಾರೋಹಣ, ಬಬಲೇಶ್ವರ ಇಒ ಬಸವಂತರಾಯಗೌಡ ಬಿರಾದಾರ ನಾಡಧ್ವಜ
ಹಾಗೂ ಪ್ರೊ | ರೆಬಿನಾಳ ಕಸಾಪ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಬಲೇಶ್ವರದ ಸಿದ್ದೇಶ್ವರ ದೇವಾಲಯದಿಂದ ಸಮ್ಮೇಳನದ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆಗೆ ಜಿಪಂ ಸದಸ್ಯ ಉಮೇಶ ಕೋಳಕೂರ ಚಾಲನೆ ನೀಡಲಿದ್ದಾರೆ.

ಬೆಳಿಗ್ಗೆ 10ಕ್ಕೆ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಸಮ್ಮೇಳನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಬಬಲೇಶ್ವರ ಬೃಹನ್ಮಠದ ಡಾ| ಮಹಾದೇವ ಶಿವಾಚಾರ್ಯರು, ಸಿದ್ಧಲಿಂಗೇಶ್ವರ ಸ್ವಾಮಿಗಳು, ಅಭಿನವ ಮುರುಘೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ರಮೇಶ ಜಿಗಜಿಣಗಿ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಪ್ರೊ | ರೆಬಿನಾಳ ವಿವರಿಸಿದರು. ಕಸಾಪ ತಾಲೂಕು ಕಾರ್ಯದರ್ಶಿ ಪ್ರೊ | ಮಲ್ಲಿಕಾರ್ಜುನ ಅವಟಿ, ಸಾಹಿತಿ ಮುರುಗೇಶ ಸಂಗಮ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next