ಚಿಕ್ಕಮಗಳೂರು: ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾದಲ್ಲಿ ಈ ಹಿಂದೆ ವಿಧಿಸಲಾಗಿದ್ದ ನಿರ್ಬಂಧಗಳು ತೆರವುಗೊಂಡಿವೆ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. 2006ರಲ್ಲಿ ನ್ಯಾಯಾಲಯ ಯಥಾಸ್ಥಿತಿ ಕಾಪಾಡುವಂತೆ ನೀಡಿದ ಆದೇಶದಲ್ಲಿ ತಿಳಿಸಲಾಗಿತ್ತು. 2018ರ ಮಾರ್ಚ್ 30 ರಂದು ನಿವೃತ್ತ ನ್ಯಾಯಾಧೀಶ ನಾಗಮೋಹನದಾಸ್ ವರದಿ ನೀಡಿತ್ತು. ಈ ವರದಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು ಎಂದರು.
ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಗಿರಿ ಸ್ವಾಮಿ ದರ್ಗಾ ವಿಷಯಕ್ಕೆ ಸಂಬಂಧಿಸಿದಂತೆ 2015ರಲ್ಲಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳುವ ತನಕ ಯಥಾಸ್ಥಿತಿ ಕಾಪಾಡುವಂತೆ ಏಕಸದಸ್ಯ ಪೀಠ ಆದೇಶ ನೀಡಿತ್ತು. ನ್ಯಾ| ನಾಗಮೋಹನ್ ದಾಸ್ ನೀಡಿದ ವರದಿ ಪರಿಗಣಿಸದಿರಲು ತೀರ್ಮಾನಿಸಲಾಗಿತ್ತು. 2022ರಲ್ಲಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳುವಂತೆ ನ್ಯಾಯಾಲಯ ಸರ್ಕಾರಕ್ಕೆ ಆದೇಶಿಸಿತ್ತು ಎಂದು ತಿಳಿಸಿದರು.
ಸರ್ಕಾರ ಸಚಿವ ಸಂಪುಟ ಉಪಸಮಿತಿ ರಚಿಸಿದ್ದು, ಆ ಸಮಿತಿ ಕೈಗೊಂಡ ತೀರ್ಮಾನವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಸರ್ಕಾರ ತೀರ್ಮಾನ ಕೈಗೊಂಡ ಮೇಲೆ ವಿಧಿಸಿದ್ದ ನಿರ್ಬಂಧಗಳು ತೆರವುಗೊಂಡಿವೆ ಎಂದು ಹೇಳಿದರು.
ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಗಿರಿ ಸ್ವಾಮಿ ದರ್ಗಾಕ್ಕೆ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಇಬ್ಬರು ಅರ್ಚಕರನ್ನು ನೇಮಿಸಿದೆ. ಕಾಯಂ ಅರ್ಚಕರ ನೇಮಕಕ್ಕೆ ಸಮಯವಕಾಶ ಬೇಕಾಗಿರುವುದರಿಂದ ನ್ಯಾಯಾಲಯದ ಆದೇಶದಂತೆ ಪ್ರತಿನಿತ್ಯ ಬರುವ ಭಕ್ತರಿಗೆ ತೀರ್ಥಪ್ರಸಾದ ನೀಡವ ಕಾರ್ಯವನ್ನು ಇಬ್ಬರು ಅರ್ಚಕರು ನೆರವೇರಿಸುವರು ಎಂದು ಸ್ಪಷ್ಟಪಡಿಸಿದರು.
ಅರ್ಚಕರು ಮತ್ತು ಮುಜಾವರ್ ನಡುವೆ ನಡೆಯುತ್ತಿರುವ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎರಡು ಧರ್ಮದವರಿಗೂ ಸಮಾನ ಅವಕಾಶಗಳಿವೆ. ಕಾನೂನು ಬಾಹಿರವಾಗಿ ನಡೆದುಕೊಂಡರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ಧಾರ್ಮಿಕ ಪರಿಷತ್ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಿದೆ. ಇಬ್ಬರು ಮಹಿಳೆಯರೂ ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ಸಮಿತಿ ತಪ್ಪು ತೀರ್ಮಾನ ಕೈಗೊಂಡರೆ ಅದನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಗಮನಕ್ಕೆ ತರಲಾಗುವುದು ಎಂದರು.