ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ ಗೌರಿಗದ್ದೆ ದತ್ತ ಆಶ್ರಮದ ವಿನಯ್ ಗುರೂಜಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಪ್ರಾಣಿಗಳನ್ನು ದತ್ತು ಪಡೆದರು.
ಚಾಮರಾಜೇಂದ್ರ ಮೃಗಾಲಯ ವತಿಯಿಂದ ಗುರುವಾರ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮ ಮತ್ತು ಮೃಗಾಲಯ ಸಿಬ್ಬಂದಿ ವರ್ಗದವರಿಗೆ ಆಹಾರ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮೃಗಾಲಯದ ಒಂದು ಹುಲಿ, ಎರಡು ಚಿರತೆ ಮತ್ತು ಒಂದು ಹಾವನ್ನು ಮೂರು ಲಕ್ಷದ ಐದು ಸಾವಿರ ರೂ. ಚೆಕ್ ನೀಡಿ ದತ್ತು ಪಡೆದುಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಒಬ್ಬ ಆಧುನಿಕ ಕೃಷ್ಣ. ಕೃಷ್ಣ ಆತ್ಮ ಮತ್ತು ಧರ್ಮದ ಉದ್ಧಾರಕ್ಕಾಗಿ ಶೋಷಣೆಗೆ ಒಳಗಾದವರ ಪರವಾಗಿ ನಿಂತು ಭಗವದ್ಗೀತೆ ನೀಡಿದ್ದ. ಕಲಿಯುಗದಲ್ಲಿ ದೀನ ದಲಿತರಿಗೆ, ಶೋಷಿತರ ಉದ್ಧಾರಕ್ಕಾಗಿ ಅಂಬೇಡ್ಕರ್ ಅವರು ಸಂವಿಧಾನ ಎಂಬ ಆತ್ಮರಕ್ಷಣೆ ಗೀತೆಯನ್ನ ಕೊಟ್ಟಿದ್ದಾರೆ. ಅಂಬೇಡ್ಕರ್ ಜೀವನ ಚರಿತ್ರೆ ರಾಮಾಯಣ, ಮಹಾಭಾರತಕ್ಕೂ ಕಮ್ಮಿ ಇಲ್ಲ. ಶೋಷಿತರ ಧ್ವನಿಯಾಗಿರುವ ಅವರ ಜಯಂತಿ ಯನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿರುವುದು ಶ್ಲಾಘನೀಯ ಎಂದರು.
ಮೃಗಾಲಯದಲ್ಲಿ ಇಂದು ಪ್ರಾಣಿ ದತ್ತು ಪಡೆಯುವ ಮೂಲಕ ಅಂಬೇಡ್ಕರ್ ಜಯಂತಿ ಆಚರಣೆ ಮಾಡ್ತಿದ್ದೇವೆ. ಈಗಿನ ಕಾಲಘಟ್ಟದಲ್ಲಿ ಪ್ರಾಣಿ-ಪಕ್ಷಿಗಳೂ ಕೂಡಾ ಶೋಷಣೆಗೆ ಒಳಗಾಗುತ್ತಿವೆ. ಕಾಡನ್ನು ಕಡಿದು ನಾಡು ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಾಣಿಗಳ ಉಳಿವಿಗಾಗಿ ಗಮನಹರಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಾಣಿ ದತ್ತು ಸ್ವೀಕರಿಸುವ ಮೂಲಕ ಅರ್ಥಪೂರ್ಣವಾಗಿ ಅಂಬೇಡ್ಕರ್ ಜಯಂತಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಸದಸ್ಯರಾದ ಜ್ಯೋತಿ ರೇಚಣ್ಣ, ಗೋಕುಲ್ ಗೋವರ್ಧನ್, ಮುಡಾ ಸದಸ್ಯೆ ಲಕ್ಷ್ಮೀದೇವಿ, ಮೃಗಾಲಯ ಕಾರ್ಯನಿರ್ವಹಕ ನಿರ್ದೇಶಕ ಅಜಿತ್ ಕುಲಕರ್ಣಿ ಇದ್ದರು.