Advertisement

ಅನುದಿನದ ಸ್ಮರಣೆಯಲ್ಲಿ ಬಾಬಾಸಾಹೇಬ್‌ ಅಂಬೇಡ್ಕರ್‌

08:45 AM Apr 14, 2021 | Team Udayavani |

“ಮನುಷ್ಯ ಚಿರಂಜೀವಿ ಆಗಲಾರ. ಆದರೆ ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತದೆ. ಒಂದು ಗಿಡಕ್ಕೆ ನೀರು ಎಷ್ಟು ಅವಶ್ಯಕವೋ ಹಾಗೆಯೇ ಒಂದು ಚಿಂತನೆ ಪ್ರಸರಣವಾಗುವುದು ಅಷ್ಟೇ ಅಗತ. ಇಲ್ಲವಾದರೆ ಎರಡು ಸಾಯುತ್ತವೆ’ ಇದು ಡಾ|ಬಿ.ಆರ್‌. ಅಂಬೇಡ್ಕರ್‌ ಅವರ ಮಾತು.

Advertisement

ಎಪ್ರಿಲ್‌ 14ರಂದು ಭಾರತ, ವಿಶ್ವದೆಲ್ಲೆಡೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಜನ್ಮದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದರಲ್ಲೂ ಇತ್ತೋ ಚಿನ ದಿನಗಳಲ್ಲಿ ಭೀಮ್‌ ರಾವ್‌ ಅವರ ಜನ್ಮ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಡಾ| ಬಿ. ಆರ್‌. ಅಂಬೇಡ್ಕರ್‌ ಕೇವಲ ಒಂದು ಜನಾಂಗದ, ಸಮುದಾಯದ ನಾಯಕರಲ್ಲ. ಅವರೊಬ್ಬ ದಮನಿತ ವರ್ಗಗಳ, ಶೋಷಿತರ ಹಾಗೂ ಸ್ತ್ರೀಕುಲದ ಪಾಲಿಗೆ ಆದರ್ಶ ಚೇತನರಾಗಿದ್ದಾರೆ.

“ನಾವು ನಮ್ಮ ಸ್ವಂತ ಬಲದಿಂದ ನಿಲ್ಲಬೇಕು ಮತ್ತು ನಮ್ಮ ಹಕ್ಕುಗಳಿಗಾಗಿ ಸಾಧ್ಯವಾದಷ್ಟು ಉತ್ತಮರಾಗಿ ಹೋರಾಡಬೇಕು.’
ಬಾಬಾಸಾಹೇಬರ ಈ ಚಿಂತನೆ ವ್ಯಕ್ತಿಯ ಸ್ವಾವಲಂಬಿ ಜೀವನ ಮತ್ತು ಶಿಕ್ಷಣ ಪಡೆದವನು ಸಾಮಾಜಿಕ ಕರ್ತವ್ಯವನ್ನು ಅರಿತು, ಸಂಘಟಿತನಾಗಿ ಪ್ರಬುದ್ಧತೆಯನ್ನು ಪಡೆದು, ತನ್ನ ಹಕ್ಕನ್ನು ಕೇಳಿ ಪಡೆಯುವ ವನಾಗಬೇಕು ಎಂಬ ಸಂದೇಶವನ್ನು ನೀಡುತ್ತದೆ.

ಬಾಬಾ ಸಾಹೇಬರ ಜೀವನ ಮತ್ತು ಆದರ್ಶಗಳು ಸರ್ವಕಾಲಕ್ಕೂ ಸ್ಮರಣೀಯವಾದದ್ದು. ಶೈಕ್ಷಣಿಕ, ಸಾಮಾಜಿಕ ರಾಜಕೀಯ, ಆರ್ಥಿಕ, ಧಾರ್ಮಿಕ, ವೈಜ್ಞಾನಿಕ, ವೈಚಾರಿಕ ಚಿಂತನೆಗಳನ್ನು ಆಳವಾಗಿ ಅಭ್ಯಾಸಿಸ ಹೊರಟರೆ ಬಾಬಾ ಸಾಹೇಬರ ವಿಶ್ವಜ್ಞಾನ ಮತ್ತು ದೂರದೃಷ್ಟಿಯನ್ನು ಅರಿತುಕೊಂಡರೆ ಮಾತ್ರ ಅಂಬೇಡ್ಕರ್‌ ಅವರ ಚಿಂತನೆಗಳು ಅರ್ಥವಾಗಲು ಸಾಧ್ಯ. ಜಾತಿ ಮತ್ತು ಮೀಸಲಾತಿ ಎಂಬ ಪೊರೆಯನ್ನು ಕಳಚಿ ಅವರ ಚಿಂತನೆಗಳನ್ನು ಸಾಮಾಜಿಕ ನೆಲೆಯಲ್ಲಿ ಹಾಗೂ ಜ್ಞಾನ ದೃಷ್ಟಿಯಲ್ಲಿ ನೋಡಿದಾಗ ಮಾತ್ರ ಡಾ| ಅಂಬೇಡ್ಕರ್‌ ಎಂದರೆ ಯಾರು? ಯಾಕೆ ಅವರನ್ನು ಸ್ಮರಿಸಬೇಕು? ಎಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ.
ಮೀಸಲಾತಿಯು ಎಲ್ಲ ವರ್ಗಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಹಂಚಿಹೋಗಿದ್ದರೂ ಕೂಡ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿದ್ದು ಎಂಬ ಆರೋಪವು ಹೇಗಿದೆಯೆಂದರೆ ನಮ್ಮ ಆತ್ಮಸಾಕ್ಷಿಯ ಕೊರಳನ್ನು ಬಿಗಿದು ಉಸಿರಾಡು, ಮಾತಾಡು ಎಂಬಂಥ ಸಂದಿಗ್ಧ ಸ್ಥಿತಿಗೆ ತಂದಿರಿಸಿದೆ.ಅಂಬೇಡ್ಕರ್‌ ಕೇವಲ ಒಂದು ಜನಾಂಗದ ನಾಯಕನಾಗದೇ ಸಮಸ್ತ ಭಾರತೀಯರಿಗಾಗಿ ಸಮಾನತೆ, ಸ್ವಾತಂತ್ರ್ಯ ಸಹೋ ದರತೆಯ ತತ್ತ್ವದಡಿಯಲ್ಲಿ ನೀಡಿದ ಸಂವಿಧಾನವೇ ಜೀವಂತ ಉದಾಹರಣೆಯಾಗಿದೆ. ಸಂಶಯವಿದ್ದರೆ ಸಂವಿಧಾನವನ್ನು ಸಂಪೂರ್ಣವಾಗಿ ಓದಿ ಅರಿತುಕೊಳ್ಳೋಣ.

“ಬದುಕು ಸುದೀರ್ಘ‌ವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು’
ಬಾಬಾಸಾಹೇಬರ ಈ ಸಂದೇಶವು ವ್ಯಕ್ತಿಯ ಸಾರ್ಥಕ ಜೀವನದ ಮಟ್ಟದ ಬಗ್ಗೆ ತಿಳಿಸುತ್ತದೆ. ಶೋಷಿತನೊಬ್ಬ ಅವಕಾಶ ವಂಚಿತನಾಗಿ ಮುಂದೆ ಶಿಕ್ಷಣದ ಅವಕಾಶಗಳನ್ನು ಸೃಷ್ಟಿಸಿಕೊಂಡು. ವಿಧಿ ಹಣೆಬರಹ ಎಂದು ದೂರದೇ, ಸಮಾಜದ ಸವಾಲುಗಳನ್ನು, ಅಸಮಾನತೆ, ಸಾಮಾಜಿಕ ಸಮಸ್ಯೆ, ಅವಮಾನ ಅನುಮಾನಗಳಿಗೆ ಶೈಕ್ಷಣಿಕ ಸಾಧನೆಯ ಮೂಲಕ ಉತ್ತರ ನೀಡಿ; ಶೋಷಿತರ ಸುಖ- ಶಾಂತಿಯ ಬದುಕಿಗಾಗಿ ತನ್ನಾಕೆಯನ್ನು, ಮಕ್ಕಳನ್ನು ಕಳೆದುಕೊಂಡ ತ್ಯಾಗ, ನಿಸ್ವಾರ್ಥ ಸೇವೆ ಬಹುದೊಡ್ಡದು.

Advertisement

ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಅವಿರತ ವಾಗಿ ದುಡಿದು ದಣಿದರೂ; ಶಿಕ್ಷಣ ಸಮಾನತೆಯ ಸಂವಿಧಾನ ಮತ್ತು ಎಲ್ಲರಿಗೂ ಮತದಾನದ ಮಹತ್ವ ಅವಕಾಶಗಳನ್ನು ನೀಡುವಲ್ಲಿ ಶ್ರಮಿಸಿದ ಮಹಾತ್ಮ ಡಾ| ಬಿ.ಆರ್‌. ಅಂಬೇಡ್ಕರ್‌. ಬಾಬಾಸಾಹೇಬರ ಜೀವನವೇ ಒಂದು ಆದರ್ಶ ಪಾಠ. ಇಲ್ಲಿ ತಿಳಿದಷ್ಟು ನೋವುಗಳಿವೆ, ಬಗೆದಷ್ಟು ನೈಜ್ಯ ಸತ್ಯಗಳಿವೆ. ಏಕೆಂದರೆ “ಇತಿಹಾಸವನ್ನು ಮರೆತವನು ಇತಿಹಾಸವನ್ನು ಸೃಷ್ಟಿಸಲಾರ’ ಎಂಬ ಸತ್ಯವೇ ಸರ್ವಕಾಲಕ್ಕೂ ಶ್ರೇಷ್ಠವಾಗಿದೆ.

“ನಮ್ಮ ಜೀವನ ಸಾರ್ಥಕವಾಗುವುದು ನಾವು ಎಷ್ಟು ಸುಖ ಸಂತೋಷದಿಂದ ಇದ್ದೇವೆ ಎಂಬುದರಿಂದ ಅಲ್ಲ ನಮ್ಮಿಂದ ಎಷ್ಟು ಜನ ಸುಖ ಶಾಂತಿ ಸಂತೋಷದಿಂದ ಜೀವಿಸುತ್ತಿದ್ದಾರೆ ಎಂಬುದರಿಂದ’ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಜೀವನ, ಶಿಕ್ಷಣ, ಸಂಘಟನೆ ಹೋರಾಟದಿಂದ ಕೂಡಿ ತನ್ನವರಿಗಾಗಿ ಹೋರಾಡಿ ಪಡೆದ ಅವಮಾನಗಳು ಸಾವಿರಾರು. ಆದರೂ ಬಾಬಾಸಾಹೇಬರ ತ್ಯಾಗ ಹೋರಾಟದ ಫ‌ಲವೇ ಶಿಕ್ಷಣ, ಸಮಾನತೆ, ಸ್ವಾತಂತ್ರ್ಯ ಇವುಗಳನ್ನು ಪಡೆದ ದಮನಿತ ಸಮುದಾಯಗಳು ಅವರನ್ನು ಮರೆತು ಸ್ವಾರ್ಥದ ಸಂಘಟನೆ ಕಟ್ಟಿಕೊಂಡು ಇನ್ಯಾರಿಗೋ ಜೈ ಎನ್ನುವ ಬಹುಜನರ ನಡೆ ನುಡಿಗಳು ನಿಜಕ್ಕೂ ಈ ಕಾಲದ ಮಹಾದುರಂತವಾಗಿದೆ.

ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಜೀವನ, ಸಂದೇಶ, ಚಿಂತನೆಗಳನ್ನು ಅರ್ಥ ಪೂರ್ಣವಾಗಿ ಓದಿ ತಿಳಿದರೆ -ತಿಳಿಸಿದರೆ ಹೃದಯದಲ್ಲಿ ನೀವೇ ಜಾಗ ನೀಡುವಿರಿ ಮತ್ತು ಮನಸ್ಸು ತುಂಬಿ “ಜೈ ಭೀಮ್‌’ ಎನ್ನುವಿರಿ. ಶೋಷಿತರ ಪರವಾದ ಧ್ವನಿಯಾಗಿ ಶಿಕ್ಷಣ, ಸಮಾನತೆ, ಸ್ವಾತಂತ್ರ್ಯ ನೀಡಿದ ಮಹಾನ್‌ ವ್ಯಕ್ತಿ ನಮ್ಮೆಲ್ಲರ ಬದುಕಿಗೆ ನಿಜವಾದ ಸ್ಫೂರ್ತಿ ಮತ್ತು ಶಕ್ತಿ.
ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಮಹಾನ್‌ ಚೇತನವಾಗಿ ಹುಟ್ಟಿದ (ಎಪ್ರಿಲ್‌ 14) ಈ ಸುದಿನವು ಅಂದು ಸೋತು ಬೆಂದು -ಬೆದರಿದ ಕೋಟ್ಯಾಂತರ ಜೀವಿಗಳಿಗೆ ಬದುಕಿನ ಆಶಾಕಿರಣವಾಗಿ ಬೊಗಸೆ ತುಂಬ ಅನ್ನ ಆಹಾರ ಕುಡಿದುಂಡು ಬಾಳನ್ನು ಬೆಳಗಿಸಿಕೊಂಡು ಸಶಕ್ತರಾಗಿ ಬಾಬಾ ಸಾಹೇಬರ ಅನುಯಾಯಿಗಳಾಗಿ ಸಂಘಟಿತರಾಗಿ ಬಾಳಿ ಬದುಕುತ್ತಿರುವ ಬಹುಜನರು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರನ್ನು ಅನುದಿನವು ಸ್ಮರಿಸಬೇಕಾಗಿದೆ.

– ಪ್ರದೀಪ್‌ ಡಿ.ಎಂ. ಹಾವಂಜೆ

Advertisement

Udayavani is now on Telegram. Click here to join our channel and stay updated with the latest news.

Next