Advertisement

ಬಾಬಾ ಸಾಹೇಬ ಅಂಬೇಡ್ಕರ್‌ ಭಾರತದ ಆಸ್ತಿ

08:51 AM May 22, 2019 | Suhan S |

ಚಿಕ್ಕಮಗಳೂರು: ವಿಶಾಲ ದೃಷ್ಟಿಕೋನದೊಂದಿಗೆ ಭಾರತದ ಸಾರ್ವಭೌಮತ್ವದ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುವ ಉದ್ದೇಶದೊಂದಿಗೆ ಸಂವಿಧಾನ ರಚನೆ ಮೂಲಕ ಎಲ್ಲಾ ವರ್ಗದ ಜನರ ಶ್ರೇಯಸ್ಸಿಗಾಗಿ ಹೋರಾಡಿದ ಡಾ| ಬಿ.ಆರ್‌.ಅಂಬೇಡ್ಕರ್‌ ಅವರನ್ನು ದಲಿತ ವರ್ಗಕ್ಕೆ ಸೀಮಿತಗೊಳಿಸುವ ಹುನ್ನಾರ ದೇಶದಲ್ಲಿ ನಡೆಯುತ್ತಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.

Advertisement

ಹಿರೇಮಗಳೂರಿನಲ್ಲಿ ಮುತ್ತಿನಮ್ಮ ದೇವಾಲಯ ಆವರಣದಲ್ಲಿ ಡಾ| ಬಿ.ಆರ್‌.ಅಭಿಮಾನಿಗಳ ಬಳಗ ಆಯೋಜಿಸಿದ್ದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯೊಬ್ಬ ದಲಿತ ಸೂರ್ಯ ಎಂಬ ವಿಚಾರದಲ್ಲಿ ಪಿಎಚ್‌ಡಿ ಮಾಡಿದ್ದಾನೆ. ಅಂದರೆ, ಇದು ಅಂಬೇಡ್ಕರ್‌ ಅವರನ್ನು ದಲಿತರ ನಾಯಕ ಎಂದು ಬಿಂಬಿಸುವ ಹುನ್ನಾರದಿಂದ ಕೂಡಿದೆ. ಇದೇ ರೀತಿಯಲ್ಲಿ ದೇಶದ ವಿವಿಧ ಕಡೆಗಳಲ್ಲಿ ಈ ರೀತಿಯ ಯತ್ನಗಳು ನಡೆದಿವೆ ಎಂದು ಹೇಳಿದರು.

ಅಂಬೇಡ್ಕರ್‌ ದೇಶದ ಸರ್ವ ಜನರ ಏಳ್ಗೆ ಮತ್ತು ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದ್ದಾರೆ. ಅದಕ್ಕೆ ಅನುಗುಣವಾಗಿಯೇ ಸಂವಿಧಾನ ರಚನೆಯಾಗಿದೆ. ಅಂಬೇಡ್ಕರ್‌ ಅಖಂಡ ಭಾರತದ ಸರ್ವರ ಆಸ್ತಿಯಾಗಿದ್ದಾರೆ. ಇಡೀ ಜಗತ್ತು ಅಂಬೇಡ್ಕರ್‌ ಅವರನ್ನು ಕೊಂಡಾಡುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ದಲಿತರ ನಾಯಕ ಎಂದು ಬಿಂಬಿಸುವ ಯತ್ನಗಳು ನಡೆಯುತ್ತಿರುವುದು ದುರಂತವೇ ಸರಿ. ಈ ಬಗ್ಗೆ ಜನರು ಜಾಗೃತರಾಗಬೇಕು ಎಂದರು.

ನಗರಸಭೆ ಮಾಜಿ ಸದಸ್ಯ ಎಚ್.ಜೆ.ಜಾನಯ್ಯ ಮಾತನಾಡಿ, ಅಂಬೇಡ್ಕರ್‌ ಅವರ ತತ್ವ ಸಿದ್ಧಾಂತಗಳನ್ನು ನಾವು ಮೈಗೂಡಿಸಿಕೊಂಡು ಚಾಚೂ ತಪ್ಪದೇ ಅನುಸರಿಸುವ ಮೂಲಕ ಸ್ವಾಭಿಮಾನಿಗಳಾಗಿ ಉದ್ಧಾರವಾಗಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು. ಡಾ| ಬಿ.ಆರ್‌.ಅಂಬೇಡ್ಕರ್‌ ಕುರಿತು ಉಪನ್ಯಾಸ ನೀಡಿದ ಆದಾಯ ತೆರಿಗೆ ಇಲಾಖೆಯ ಡಾ| ಗಿರೀಶ್‌, ಸಂವಿಧಾನ ಈ ದೇಶದ ಪವಿತ್ರ ಗ್ರಂಥವಾಗಿದೆ. ಪ್ರತಿಯೊಬ್ಬರು ಸಂವಿಧಾನವನ್ನು ಓದುವ ಮೂಲಕ ಕರ್ತವ್ಯ ಮತ್ತು ಹಕ್ಕುಗಳನ್ನು ಅರಿತುಕೊಳ್ಳಬೇಕು. ಅಂಬೇಡ್ಕರ್‌ ಜಯಂತಿ ಆಚರಿಸಿದರೆ ಸಾಲದು ಅವರು ತೋರಿದ ಮಾರ್ಗದಲ್ಲಿ ಸಾಗುವ ಮೂಲಕ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ಮಾಡಿದರು.

Advertisement

ಮುಖಂಡ ಎಚ್.ಕೆ.ಕೇಶವಮೂರ್ತಿ ಮಾತನಾಡಿದರು. ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಎಚ್.ಎಸ್‌.ಕುಮಾರಸ್ವಾಮಿ, ಎಚ್.ಸಿ.ಗಂಗಾಧರ್‌, ರಾಜಕುಮಾರ್‌, ಎಚ್.ಎಸ್‌.ಜಗದೀಶ್‌, ಎಚ್.ಟಿ.ವೆಂಕಟೇಶ್‌, ಎಚ್.ಎನ್‌.ಸುರೇಶ್‌, ಎಚ್.ಎಸ್‌.ಮಹಂತೇಶ್‌, ಎಚ್.ಜೆ.ಚಂದ್ರಯ್ಯ ಇನ್ನಿತರರಿದ್ದರು. ಪುಷ್ಪರಾಜ್‌ ಸ್ವಾಗತಿಸಿದರು. ಕೀರ್ತಿ ವಂದಿಸಿದರು. ಚಿರಂತ್‌ ನಿರೂಪಿಸಿದರು.

ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಅಲಂಕೃತ ರಥದಲ್ಲಿ ಅಂಬೇಡ್ಕರ್‌ ಭಾವಚಿತ್ರವನ್ನು ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೊಂಡೊಯ್ಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next