ಹರಿದ್ವಾರ: ವಿದೇಶಿ ಉತ್ಪನ್ನಗಳಿಗೆ ಸೆಡ್ಡು ಹೊಡೆದು ಆಯುರ್ವೇದ ಔಷದ, ಆಹಾರ ಉತ್ಪನ್ನ, ಸೌಂದರ್ಯ ವರ್ಧಕ ಮತ್ತು ಇತರ ಉತ್ಪನ್ನಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಪಾರಮ್ಯ ಮೆರೆದಿರುವ ಯೋಗ ಗುರು ಬಾಬಾ ರಾಮ್‌ದೇವ್ ಮಾಲಿಕತ್ವದ ಪತಂಜಲಿ ಕಂಪೆನಿ ಸದ್ಯ ವಸ್ತ್ರೋದ್ಯಮಿಗಳಿಗೂ ನಡುಕ ಹುಟ್ಟಿಸಿದೆ.
ಮಹಿಳೆಯರು, ಪುರುಷರು ಮತ್ತು ಮಕ್ಕಳಿಗಾಗಿ ಎಲ್ಲಾ ವಿಧದ ಸ್ವದೇಶಿ ಬ್ರ್ಯಾಂಡೆಡ್ ಬಟ್ಟೆಗಳನ್ನು ಮುಂದಿನ ಎಪ್ರಿಲ್ ಒಳಗೆ ಮಾರುಕಟ್ಟೆಗೆ ತರಲು ಪತಂಜಲಿ ಮುಂದಾಗಿದೆ ಎಂದು ವರದಿಯಾಗಿದೆ.
ದೇಶಾದ್ಯಂತ 250 ಚಿಲ್ಲರೆ ಮಳಿಗೆ ಗಳಲ್ಲಿ ಬಟ್ಟೆಗಳನ್ನು ಮಾರಾಟ ಮಾಡುವ ಮೂಲಕವರ್ಷದ ಒಳಗೆ 5 ಸಾವಿರಕೋಟಿ ರೂಪಾಯಿ ವ್ಯವಹಾರ ನಡೆಸುವ ಗುರಿ ಸಂಸ್ಥೆಯದ್ದಾಗಿದೆ. ಬಿಗ್ ಬಜಾರ್‌ನಂತಹ ಮಳಿಗೆಗಳಲ್ಲಿಯೂ ಬಟ್ಟೆಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಪತಂಜಲಿ ಸಂಸ್ಥೆಯ ವಕ್ತಾರ ಎಸ್.ಕೆ.ತಿಜಾರವಾಲಾ ತಿಳಿಸಿರುವುದಾಗಿ ಮಿಂಟ್ ವರದಿ ಮಾಡಿದೆ.
ಪತಂಜಲಿ ಸಂಪ್ರದಾಯಿಕ ಉಡುಗೆಗಳಾದ ಕುರ್ತಾ, ಪೈಜಾಮಾದೊಂದಿಗೆ ವಿದೇಶಿ ಜೀನ್ಸ್ ಉಡುಗೆಗಳನ್ನೂ ಪತಂಜಲಿ ಮಾರಾಟ ಮಾಡಲು ಮುಂದಾಗಿದೆ. ಕಳೆದ ವರ್ಷ ಇಂಧೋರ್‌ನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬಾಬಾ ರಾಮ್‌ದೇವ್ ಅವರು ಜೀನ್ಸ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.
ದೇಶಾದ್ಯಂತ 12,000 ಹಂಚಿಕೆದಾರರ ಮೂಲಕ ಉತ್ಪನ್ನಗಳನ್ನು ದುಪ್ಪಟ್ಟು ಮಾರಾಟ ಮಾಡುವ ಗುರಿ ಹೊಂದಿರುವ ಪತಂಜಲಿ 20 ಸಾವಿರಕೋಟಿ ರೂಪಾಯಿ ವ್ಯವಹಾರದ ನಿರೀಕ್ಷೆಹೊಂದಿದೆ.
ಮಾರ್ಚ್ 31 , 2017 ರ ಹಣಕಾಸು ವರ್ಷದಲ್ಲಿ ಹರಿದ್ವಾರ ಮೂಲದ ಪತಂಜಲಿ ಸಂಸ್ಥೆ ಬರೋಬ್ಬರಿ 10,561 ಕೋಟಿ ರೂಪಾಯಿ ವ್ಯವಹಾರ ನಡೆಸಿದೆ.