ನವದೆಹಲಿ: ಪ್ರಸಿದ್ಧ ಬಾಬಾ ಕಾ ಡಾಬಾದ ಮಾಲೀಕ ಕಾಂತಾ ಪ್ರಸಾದ್ (80ವರ್ಷ) ಅವರು ಗುರುವಾರ(ಜೂನ್ 17) ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಐತಿಹಾಸಿಕ ಟೆಸ್ಟ್ ಫೈನಲ್ ಗೆ ವರುಣನ ಕಾಟ; ನಿಗದಿತ ಸಮಯಕ್ಕೆ ಆರಂಭವಾಗಲ್ಲ ಪಂದ್ಯ
ಕಾಂತಾ ಪ್ರಸಾದ್ ಅವರು ದೆಹಲಿಯ ರಸ್ತೆ ಸಮೀಪ ಸಣ್ಣ ಕ್ಯಾಂಟೀನ್ ಇಟ್ಟುಕೊಂಡಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ವ್ಯಾಪಾರ ಇಲ್ಲದೇ ಕಂಗಾಲಾಗಿದ್ದ ವೃದ್ಧ ದಂಪತಿಯ ಬಗ್ಗೆ ಯ್ಯೂಟೂಬರ್ ಗೌರವ್ ವಾಸನ್ ವಿಡಿಯೋ ಮಾಡಿದ್ದ ನಂತರ ಕಳೆದ ವರ್ಷ ಜನಪ್ರಿಯರಾಗಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ.
ವರದಿಗಳ ಪ್ರಕಾರ, ಕಾಂತಾ ಪ್ರಸಾದ್ ಅವರು ಗುರುವಾರ ರಾತ್ರಿ ಮದ್ಯದ ಜತೆ ಹೆಚ್ಚಿನ ಪ್ರಮಾಣದ ನಿದ್ದೆ ಮಾತ್ರೆಯನ್ನು ಸೇವಿಸಿದ್ದು, ಅಸ್ವಸ್ಥಗೊಂಡ ಪ್ರಸಾದ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಂತಾ ಪ್ರಸಾದ್ ಅವರ ಪತ್ನಿ ನೀಡಿರುವ ಮಾಹಿತಿ ಪ್ರಕಾರ, ದಂಪತಿ ಈಗಲೂ ಅಪಾರ ಪ್ರಮಾಣದ ಸಾಲದ ಸುಳಿಯಲ್ಲಿ ಸಿಲುಕಿರುವುದಾಗಿ ತಿಳಿಸಿದ್ದರು.
ಬಾಬಾ ಕಾ ಡಾಬಾ ದಂಪತಿ ವಿಡಿಯೋ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆದ ನಂತರ ವೈರಲ್ ಆಗಿತ್ತು. ಬಳಿಕ ಕಾಂತಾ ಪ್ರಸಾದ್ ಅವರು ನವದೆಹಲಿಯಲ್ಲಿ ಕಳೆದ ವರ್ಷ ತಿಂಗಳಿಗೆ ಒಂದು ಲಕ್ಷ ರೂಪಾಯಿ ಬಾಡಿಗೆಯ ರೆಸ್ಟೋರೆಂಟ್ ಅನ್ನು ತೆರೆದಿದ್ದರು. ಆದರೆ ಅವರಿಗೆ ತಿಂಗಳಿಗೆ ದುಡಿಯಲು ಸಾಧ್ಯವಾಗಿದ್ದು ಕೇವಲ 30ಸಾವಿರ ರೂಪಾಯಿ ಮಾತ್ರ ಎಂದು ವರದಿ ತಿಳಿಸಿದೆ.
ಬಾಬಾ ಕಾ ಡಾಬಾ ವಿಡಿಯೋ ಮಾಡಿದ್ದ ಗೌರವ್ ವಾಸನ್ ಜನರಿಂದ ಹಣ ಪಡೆಯುತ್ತಿದ್ದಾರೆ. ಅವರು ತನ್ನ ಸ್ನೇಹಿತರ ಬ್ಯಾಂಕ್ ಅಕೌಂಟ್ ಮಾಹಿತಿ ನೀಡಿ ಜನರಿಂದ ಹಣ ಸಂಗ್ರಹಿಸಿದ್ದಾರೆ ಎಂದು ಬಾಬಾ ಕಾ ಡಾಬಾ ಮಾಲಕ ಕಾಂತ ಪ್ರಸಾದ್ ಪೊಲೀಸರಿಗೆ ಈ ಹಿಂದೆ ದೂರು ನೀಡಿದ್ದರು.