ರೋಹ್‌ತಕ್: ಅತ್ಯಾಚಾರ, ಭ್ರಷ್ಟಾಚಾರ ಸೇರಿದಂತೆ ನಾನಾ ಆರೋಪಗಳ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿ ರೋಹ್‌ತಕ್ ಜೈಲಿನಲ್ಲಿ 15 ದಿನಗಳಿಂದ ಕಂಬಿ ಎಣಿಸುತ್ತಿರುವ ದೇರಾ ಮುಖ್ಯಸ್ಥ ಗುರ್‌ಮೀತ್ ರಾಮ್ ರಹೀಂ ಭೇಟಿಗಾಗಿ ಒಬ್ಬನೇ ಒಬ್ಬ ನರ-ಪಿಳ್ಳೆಯೂ ಹೋಗಿಲ್ಲ. ಅವರ ಕುಟುಂಬ ಸದಸ್ಯರು ಕೂಡ ಮುಖ ನೋಡಿಬರಲೂ ಮುಂದಾಗಿಲ್ಲ! ಈ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿಯೇ ಬುಧವಾರ ಮಾಹಿತಿ ನೀಡಿದ್ದಾರೆ.
ದಿನಬೆಳಗಾದರೆ ಸಾವಿರಾರು ಭಕ್ತ ವೃಂದದ ನಡುವೆ ಸಂಭ್ರಮಿಸಿ, ವಿಲಾಸಿ ಜೀವನ ನಡೆಸುತ್ತಿದ್ದ ಗುರ್‌ಮೀತ್ ರಾಮ್ ರಹೀಂನ ಅಟಾಟೋಪ ದಿನದಿಂದ ದಿನಕ್ಕೆ ಗೊತ್ತಾಗುತ್ತಾ ಹೋದಂತೆ “ಅಬ್ಟಾ’ ಎಂದು ನಿಬ್ಬೆರಗಾಗಿರುವ ಭಕ್ತರೆಲ್ಲರೂ ಪ್ರಕರಣದ ತೀವ್ರತೆಗೇ ಕಂಗಾಲಾಗಿದ್ದಾರೆ.
“ಜೈಲಿಗೆ ಹೋದ ದಿನದಿಂದ ಇದುವರೆಗೆ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿಕ್ಕೂ ಯಾರೂ ಬಂದಿಲ್ಲ. ಕಳೆದ ಕೆಲ ದಿನಗಳಿಂದ ರಾಮ್ ರಹೀಂ ಸಾಕಷ್ಟು ಖನ್ನತೆಗೆ ಒಳಗಾಗಿದ್ದಾರೆ. ಕಳೆದೊಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ದೂರು ಕೂಡ ನೀಡಿದ್ದರಿಂದ ಇಲ್ಲಿನ ಪೋಸ್ಟ್ ಗ್ರ್ಯಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಪಿಜಿಐಎಂಎಸ್) ವೈದ್ಯರ ತಂಡ ಜೈಲಿನಲ್ಲಿಯೇ ಚಿಕಿತ್ಸೆ ನೀಡಿದೆ’ ಎಂದು ಜೈಲು ಮೂಲಗಳು ತಿಳಿಸಿವೆ.
ಬಾಬಾ ಬಂಧನದ ಬಳಿಕ ಅವರ ಮಗ ಜಸ್ಮಿತ್ ಹಾಗೂ ಸಾಕು ಮಗಳು ಹನಿಪ್ರೀತ್ ಸೇರಿದಂತೆ ಪ್ರಮುಖ ಆರೋಪಿಗಳ ಪಟ್ಟಿಯಲ್ಲಿರುವ 10 ಮಂದಿ ತಲೆ ಮರೆಸಿಕೊಂಡಿದ್ದಾರೆ. ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.