Advertisement

ಬಾಬಾಬುಡನ್‌ಗಿರಿ : ಮುಜಾವರ್‌ ನೇಮಕ ಸಮರ್ಥನೆ

06:35 AM Sep 27, 2018 | Team Udayavani |

ಬೆಂಗಳೂರು: ಬಾಬಾಬುಡನ್‌ಗಿರಿಯ ದತ್ತಪೀಠದಲ್ಲಿ ಪೂಜಾವಿಧಿಗಳನ್ನು ನೇರವೇರಿಸಲು “ಮುಜಾವರ್‌’ (ಮುಸ್ಲಿಂ ಅರ್ಚಕ) ನೇಮಕ ಮಾಡಿರುವ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರ, ಈ ಸಂಬಂಧ ಹೊರಡಿಸಿರುವ ಆದೇಶದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಬುಧವಾರ ಹೈಕೋರ್ಟ್‌ಗೆ  ಹೇಳಿದೆ.

Advertisement

ಮುಜಾವರ್‌ಗೆ ಮಾತ್ರ ಪೂಜೆಗೆ ಅವಕಾಶ ನೀಡಿರುವ ಸರ್ಕಾರದ ಆದೇಶವ‌ನ್ನು ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯಪೀಠ ದೇವಸ್ಥಾನ ಸಂವರ್ಧನಾ ಸಮಿತಿಯ ಟ್ರಸ್ಟಿ ನಾಗರಾಜ್‌ ಅರಸ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ. ಬಿ.ವಿ. ನಾಗರತ್ನ ಅವರ ಏಕಸದಸ್ಯ ನ್ಯಾಯಪೀಠಕ್ಕೆ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ದಿನೇಶ್‌ ರಾವ್‌ ಅವರು ಈ ವಿಷಯ ಸ್ಪಷ್ಟಪಡಿಸಿದರು.

ವಿಚಾರಣೆ ವೇಳೆ ” ಈ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ಉಪಸಮಿತಿಯ ವರದಿ ಆಧರಿಸಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌ ಅವರ ನೇತೃತ್ವದ ತಜ್ಞರ ಸಮಿತಿ ಶಿಫಾರಸಿನಂತೆ ಮೌಲ್ವಿ ಸೈಯದ್‌ ಗೌಸ್‌ ಮೊಹಿದ್ದೀನ್‌ ಅವರನ್ನು ದತ್ತಪೀಠದಲ್ಲಿ ಪೂಜಾ ವಿಧಿ ವಿಧಾನ ನೆರೆವೇರಿಸಲು ಮುಜಾವರ್‌ ಆಗಿ ನೇಮಿಸಲಾಗಿದೆ. ಈಗ ಅದರಲ್ಲಿ ಬದಲಾವಣೆ ಮಾಡುವ ಅವಕಾಶವಿಲ್ಲ’ ಎಂದರು.

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು ಹಿಂದೂಗಳಿಗೆ ಪೂಜೆಯ ಹಕ್ಕಿದೆ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ ಎಂದರು. ಹಾಗಿದ್ದಲ್ಲಿ, ಆ ಕುರಿತ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಅ.9ಕ್ಕೆ ಮುಂದೂಡಿತು.

ಈ ಪ್ರಕರಣದಲ್ಲಿ ಕೋಮುಸಾಮರಸ್ಯ ಮತ್ತು ಸೌಹಾರ್ದತೆ ಕಾಪಾಡುವುದು ನ್ಯಾಯಾಲಯದ ಕಾಳಜಿಯಾಗಿದೆ ಎಂದು ಪುನರುತ್ಛರಿಸಿದ ನ್ಯಾಯಪೀಠ, ಹಿಂದೂ-ಮುಸ್ಲಿಂ ಎರಡೂ ಧರ್ಮಗಳ ನಡುವೆ ಸಾಮರಸ್ಯ ಕಾಯ್ದುಕೊಳ್ಳುವಂತಹ ಪರಿಹಾರ ಕಂಡುಕೊಳ್ಳುವಂತೆ ಸರ್ಕಾರ ಮತ್ತು ಅರ್ಜಿದಾರರಿಗೆ ಸಲಹೆ ನೀಡಿತು. ಅದೇ ರೀತಿ ಹಿಂದೂ ದೇವರಿಗೆ ಮುಸ್ಲಿಂ ಮುಜಾವರ್‌ ಪೂಜೆ ಮಾಡುವುದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆ, ಮುಜುಗರ ಆಗಲಿದೆ ಎಂದು ನ್ಯಾಯಪೀಠ ಎಂದೂ ಸಹ ನ್ಯಾಯಪೀಠ ಅಭಿಪ್ರಾಯಪಟ್ಟಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next