Advertisement

ಕೈಗಾರಿಕೆಗಳ ನಡುವಿರುವ ಕಳವಾರಿಗೆ ಬೇಕು ಹಲವು ಸೌಲಭ್ಯ

11:20 AM Aug 01, 2022 | Team Udayavani |

ಕಳವಾರು: ಬಾಳ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಬರುವ ಕಳವಾರಿನಲ್ಲಿ ವಿಶೇಷ ಆರ್ಥಿಕ ವಲಯ ಬಂದ ಬಳಿಕ ಭೂ ಸ್ವಾಧೀನಗೊಂಡು ಜನರು ಗುಳೇ ಹೋಗುವುದು ಅನಿವಾರ್ಯವಾಯಿತು. ಪ್ರಸ್ತುತ ಉಳಿದಿರುವ ಜನಸಂಖ್ಯೆ ಅತೀ ಕಡಿಮೆಯಿದ್ದು, ಸಮರ್ಪಕ ಮೂಲಸೌಕರ್ಯವೂ ಇಲ್ಲದೆ ಜನ ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

ಎಂಆರ್‌ಪಿಎಲ್‌, ಎಚ್‌ಪಿಸಿಎಲ್‌, ಬಿಎಎಸ್‌ಎಫ್‌ ಸಹಿತ ಬೃಹತ್‌ ಕಂಪೆನಿಗಳು ಕಳವಾರಿನಲ್ಲಿ ನೆಲೆಯೂರಿವೆ. ಸ್ಥಳೀಯವಾಗಿ ಇಲ್ಲಿನ ಬೃಹತ್‌ ಕಂಪೆನಿಗಳಲ್ಲಿ ಹಲವರಿಗೆ ಉದ್ಯೋಗವೂ ಲಭಿಸಿದೆ. ಸಣ್ಣ ಗ್ರಾಮವಾದ ಕಾರಣ ಒಳರಸ್ತೆಗಳನ್ನು ಪಂಚಾಯತ್‌ ಸುಸ್ಥಿತಿಯಲ್ಲಿರಿಸಿದೆ. ಎಲ್‌ಇಡಿ ಬೀದಿ ದೀಪದ ವ್ಯವಸ್ಥೆ, ದೊಡ್ಡದಾದ ಸಮುದಾಯ ಭವನ ತಲೆ ಎತ್ತುತ್ತಿದೆ. ಇದಕ್ಕೆ ಸುತ್ತಮುತ್ತಲಿನ ಕಂಪೆನಿಗಳ, ಎಂಎಸ್‌ಇಝಡ್‌ ಅನುದಾನ ದೊರಕಿದೆ. ರಸ್ತೆ ಕಾಂಕ್ರೀಟ್‌ ಮಾಡಲಾಗಿದೆ.

ತ್ಯಾಜ್ಯ ನಿರ್ವಹಣೆಗೆ ರಾಮಕೃಷ್ಣ ಮಿಷನ್‌ ಹಾಗೂ ಪಂಚಾಯತ್‌ ಜಂಟಿಯಾಗಿ ಕಸ ವಿಲೇವಾರಿ ಮಾಡುವ ಒಪ್ಪಂದವಾಗಿದೆ.

ಊರಿಗೊಂದು ಶಾಲೆ

ಕಳವಾರಿನಲ್ಲಿ ಪ್ರಸ್ತುತ ಒಂದು ಪ್ರಾಥಮಿಕ ಕನ್ನಡ ಶಾಲೆಯಿದೆ. ಹೆಚ್ಚು ವಿದ್ಯಾರ್ಥಿಗಳು ಇಲ್ಲ. ಬಜಪೆ ಮತ್ತು ಸುರತ್ಕಲ್‌ ಪರಿಸರದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳೂ ಇರುವುದರಿಂದ ಕೆಲವು ಮಕ್ಕಳು ಅತ್ತ ಹೋಗುತ್ತಿದ್ದಾರೆ. ಹೈಸ್ಕೂಲ್‌ ಬೇಕೆಂಬ ಬೇಡಿಕೆ ಇದ್ದರೂ ಅದು ಈಡೇರುವ ಲಕ್ಷಣ ಕಾಣಿಸುತ್ತಿಲ್ಲ.

Advertisement

ಉಪ ಆರೋಗ್ಯ ಕೇಂದ್ರ

ಮುಖ್ಯವಾಗಿ ಈ ಊರಿಗೆ ಬೇಕಾಗಿರುವುದು ಪ್ರಾಥಮಿಕ ಆರೋಗ್ಯ ಉಪ ಕೇಂದ್ರ. ಸುತ್ತಲೂ ಕೈಗಾರಿಕೆಗಳು, ಅದರ ಶಬ್ದ, ವಾಯು, ದ್ರವ ಮಾಲಿನ್ಯದಿಂದಾಗಿ ಆಗಾಗ್ಗೆ ವೈದ್ಯಕೀಯ ತಪಾಸಣೆ ಅಗತ್ಯವಾಗಿರುತ್ತದೆ. ಪ್ರಸ್ತುತ ಇಲ್ಲಿನವರ ಆರೋಗ್ಯ ವಿಚಾರಣೆಗೆ ವೈದ್ಯರೊಬ್ಬರು ವಾರದಲ್ಲಿ ಕೆಲವು ದಿನ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಉಪ ಕೇಂದ್ರವಿದ್ದರೆ ವೈದ್ಯರು ನಿರಂತರ ಲಭ್ಯರಿರುತ್ತಾರೆ. ಉತ್ತಮ ಚಿಕಿತ್ಸೆಯೂ ಲಭಿಸಲು ಸಾಧ್ಯ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಜಲಸಿರಿಯ ನಿರೀಕ್ಷೆ

ಪ್ರಸ್ತುತ ಮರವೂರು ಡ್ಯಾಮ್‌ನಿಂದ ನೀರು ಸರಬರಾಜು ಇದ್ದು, ಜಲಸಿರಿಯ ಯೋಜನೆ 2022-23ರಲ್ಲಿ ಪಂಚಾಯತ್‌ಗೆ ಲಭ್ಯವಾಗಲಿದೆ. ಅನಂತರ ಮನೆ ಮನೆಗೂ 24 ತಾಸು ನೀರು ಲಭಿಸುವುದೆಂಬ ಭರವಸೆ ಈಡೇರುವ ನಿರೀಕ್ಷೆಯಲ್ಲಿದ್ದಾರೆ.

ಪ್ರಮುಖ ದೇಗುಲ

ಬೆಂಕಿನಾಥೇಶ್ವರ ದೇವಸ್ಥಾನ ಇಲ್ಲಿನ ಗ್ರಾಮ ದೇವಸ್ಥಾನವಾಗಿದ್ದು ಕಳವಾರಿನಲ್ಲಿದೆ. ವರ್ಷಾವಧಿ ಜಾತ್ರೆ, ಶಿವರಾತ್ರಿ ಹೀಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರಗುತ್ತವೆ. ಬೆಂಕಿನಾಥೇಶ್ವರ ಯಕ್ಷಗಾನ ಮಂಡಳಿಯೂ ಇದ್ದು ಕಲಾ ಸೇವೆಯಲ್ಲಿಯೂ ಕ್ಷೇತ್ರ ಮುಂಚೂಣಿಯಲ್ಲಿದೆ.

ಸಾರಿಗೆ ವ್ಯವಸ್ಥೆ

ಈ ಪುಟ್ಟ ಊರಿನಲ್ಲಿರುವ ಸವಲತ್ತುಗಳು ತೀರಾ ಕಡಿಮೆ. ಹೆಚ್ಚಿನ ಎಲ್ಲದಕ್ಕೂ ಹೊರ ಊರಿಗೆ ಹೋಗಬೇಕು. ಆದರೆ ಅದಕ್ಕೆ ತಕ್ಕಂತೆ ಸಾರ್ವಜನಿಕ ಬಸ್‌ ವ್ಯವಸ್ಥೆ ಇಲ್ಲ. ನಿರ್ದಿಷ್ಟ ಸಮಯದಲ್ಲಿ ಮಾತ್ರ ಬಸ್‌ ಸಂಚಾರ ಇದೆ. ಇದನ್ನು ಹೆಚ್ಚಿಸಬೇಕು. ಬೆಳಗ್ಗೆ ಮತ್ತು ಸಂಜೆಯ ಅವಧಿಯಲ್ಲಿನ ಬಸ್‌ ವ್ಯವಸ್ಥೆ ಸಾಲದು ಎನ್ನುತ್ತಾರೆ ಸ್ಥಳೀಯರು.

ಮಾಲಿನ್ಯದಿಂದ ಆರೋಗ್ಯ ಸಮಸ್ಯೆ: ನಮ್ಮ ಪಂಚಾಯತ್‌ಗೆ ಹೆಚ್ಚಿನ ಉತ್ಪತ್ತಿಯಿಲ್ಲ. ಬೃಹತ್‌ ಕಂಪೆನಿಗಳಿದ್ದರೂ ಹೆಚ್ಚಿನ ತೆರಿಗೆ ವಿಧಿಸಿದರೆ ನೀಡಲು ಯೋಚಿಸುತ್ತಾರೆ. ನಮ್ಮ ಊರಿನಲ್ಲಿ ಮಾಲಿನ್ಯ ಆಗುತ್ತಿದೆ. ಜನರಿಗೆ ಆರೋಗ್ಯ ಸಮಸ್ಯೆ ಎದುರಾದರೆ ಒಂದು ಉತ್ತಮ ಸರಕಾರಿ ಆಸ್ಪತ್ರೆ ಬೇಕಿದೆ. ಜನರ ಕಷ್ಟ ಸುಖಗಳಿಗೆ ನಮ್ಮಿಂದ ಭೂಮಿ ಪಡೆದ ಕಂಪೆನಿಗಳು ಸ್ಪಂದಿಸಿದರೆ ನಮ್ಮ ಗ್ರಾಮಕ್ಕೆ ಅನುಕೂಲ ಆಗುತ್ತದೆ. – ಹುಲಿಗಮ್ಮ, ಪಂಚಾಯತ್‌ ಅಧ್ಯಕ್ಷರು ಬಾಳ

ಉಪ ಆರೋಗ್ಯ ಕೇಂದ್ರದ ಅಗತ್ಯ: ಕಳವಾರಿನ ಸುತ್ತಮುತ್ತ ಬೃಹತ್‌ ಕೈಗಾರಿಕೆಗಳು ಇರುವುದರಿಂದ ಆರೋಗ್ಯ ಸಮಸ್ಯೆ ಗ್ರಾಮಸ್ಥರಿಗೆ ಆಗಾಗ ಕಂಡು ಬರುತ್ತಿದ್ದು, ಉಪ ಆರೋಗ್ಯ ಕೇಂದ್ರವೊಂದರ ಅಗತ್ಯವಿದೆ. ಶಾಶ್ವತ ವೈದ್ಯರ ನೇಮಕವೂ ನಡೆಯಬೇಕು. ಇದರ ಜತೆಗೆ ಗ್ರಾಮದ ಸಭೆ ಹಾಗೂ ಇತರ ಕಾರ್ಯ ಚಟುವಟಿಕೆಗೆ ಸಮುದಾಯ ಭವನ ನಿರ್ಮಾಣವಾಗುತ್ತಿದ್ದರೂ ಶೀಘ್ರ ಮುಗಿದರೆ ಅನುಕೂಲ. –ಗಣೇಶ್‌, ಕಳವಾರು.

-ಲಕ್ಷ್ಮೀ ನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next