ಹೊಸದಿಲ್ಲಿ : ಎಸ್ ಎಸ್ ರಾಜಮೌಳಿ ಅವರ ಬಾಹುಬಲಿ 2 : ದಿ ಕನ್‌ಕ್ಲೂಶನ್ ಚಿತ್ರ ಜಾಗತಿಕ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುತ್ತಿದೆ; ಬಿಡುಗಡೆಗೊಂಡ ಹತ್ತೇ ದಿನಗಳ ಒಳಗೆ 1,000 ಕೋಟಿ ರೂ. ಗಳಿಸಿ ಇನ್ನಷ್ಟು ಹೊಸ ದಾಖಲೆಗಳನ್ನು ಮಾಡುವತ್ತ ಮುನ್ನುಗ್ಗುತ್ತಿರುವ ಭಾರತಿಯ ಚಿತ್ರರಂಗದ ಮಹೋನ್ನತ ಚಿತ್ರರತ್ನವೆಂಬ ಹೆಗ್ಗಳಿಕೆಗೆ ಬಾಹುಬಲಿ ಪಾತ್ರವಾಗಿರುವುದು ಈಗ ಎಲ್ಲರಿಗೂ ತಿಳಿದಿರುವ ಸಂಗತಿ.
ಬಾಹುಬಲಿ ಚಿತ್ರದ ತೆರೆಯ ಹಿಂದಿನ ಸೂಪರ್ ಹೀರೊ ರಾಜಮೌಳಿ ಮತ್ತು ತೆರೆಯ ಮೇಲಿನ ಸೂಪರ್ ಹೀರೋ ಪ್ರಭಾಸ್ ಎನ್ನುವುದು ಈಗ ಜಗಜ್ಜಾಹೀರಾಗಿದೆ. ಚಿತ್ರದಲ್ಲಿ ಪ್ರಭಾಸ್ ನೀಡಿರುವ ಅಭಿನಯ ಅಪ್ರತಿಮವಾದದ್ದು. ಎಲ್ಲ ಭಾಷೆಗಳ ಚಿತ್ರಪ್ರೇಮಿಗಳು ಬಾಹುಬಲಿಯನ್ನು ಮೆಚ್ಚಿಕೊಂಡಷ್ಟೇ ನಟ ಪ್ರಭಾಸ್ ಅವರನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ; ಅವರ ನಟನಾ ವೈಖರಿಯನ್ನು ಕಂಡು ಮಂತ್ರಮುಗ್ಧರಾಗಿದ್ದಾರೆ.
ರಾಜಮೌಳಿ ಅವರ ಪ್ರಕಾರ ಪ್ರಭಾಸ್ ಒಬ್ಬ ಅಪ್ರತಿಮ, ದಢ ಸಂಕಲ್ಪದ, ನಿಗರ್ವಿ ಕಲಾವಿದ. ಬಾಹುಬಲಿ ಚಿತ್ರಕ್ಕಾಗಿ ತಮ್ಮ ತಾರಾ ಬದುಕಿನ ಐದು ಅತ್ಯಮೂಲ್ಯ ವರ್ಷಗಳನ್ನು ಸಂಪೂರ್ಣವಾಗಿ ಧಾರೆ ಎರೆದಿದ್ದಾರೆ.
ಈ ಐದು ವರ್ಷಗಳಲ್ಲಿ ಪ್ರಭಾಸ್ ತಮ್ಮ ಪಾಲಿಗೆ ಬಂದ ಯಾವುದೇ ಇತರ ಅವಕಾಶಗಳನ್ನು ಸ್ವೀಕರಿಸಿಲ್ಲ; ಮಾತ್ರವಲ್ಲದೆ ಸುಮಾರು 18 ಕೋಟಿ ರೂ.ಗಳ ಕಮರ್ಶಿಯಲ್ ಎಂಡೋರ್‌ಸ್‌ಮೆಂಟ್ ಅವಕಾಶಗಳನ್ನು ಕೂಡ ಬಿಟ್ಟು ಕೊಟ್ಟಿದ್ದಾರೆ. ಯಾವ ಕಾರಣಕ್ಕೂ ತನ್ನ ಮನಸ್ಸು ಬೇರೆಡೆಗೆ ಹರಿಯದೇ ಸಂಪೂರ್ಣವಾಗಿ ಬಾಹುಬಲಿ ನಿರ್ಮಾಣಕ್ಕೆ ಮುಡಿಪಾಗಿರಬೇಕು, ಅದರಲ್ಲೇ ಮನಸ್ಸು ಸಂಪೂರ್ಣವಾಗಿ ಕೇಂದ್ರೀಕೃತವಾಗಿರಬೇಕು ಎಂಬುದು ಪ್ರಭಾಸ್ ಸಂಕಲ್ಪವಾಗಿತ್ತು.
ಎಷ್ಟೋ ವೇಳೆ ಪ್ರಭಾಸ್ ಕೈಯಲ್ಲಿ ಖರ್ಚಿಗೆ ದುಡ್ಡು ಕೂಡ ಇರುತ್ತಿರಲಿಲ್ಲ. ಆದರೂ ಅವರು ತಮ್ಮ ಆ ಸ್ಥಿತಿಯನ್ನು ಯಾರಲ್ಲೂ ಹೇಳಿಕೊಳಲಿಲ್ಲ. ಮೇಲಾಗಿ ತಮ್ಮ ಮ್ಯಾನೇಜರ್‌ಗೆ ಪ್ರಭಾಸ್, ಬಾಹುಬಲಿ ಮುಗಿಯುವ ತನಕ ಬೇರೆ ಯಾವುದೇ ಅಸೈನ್‌ಮೆಂಟ್, ಎಂಡೋರ್‌ಸ್‌ಮೆಂಟ್‌ಗಳನ್ನು ತೆಗೆದುಕೊಳ್ಳಕೂಡದು ಎಂದು ಪದೇ ಪದೇ ಹೇಳುತ್ತಿದ್ದರು.
ಬಾಹುಬಲಿ ತಂಡದ ಬಹುತೇಕ ಕಲಾವಿದರು ಹೆಚ್ಚುವರಿ ಹಣ ಸಂಪಾದಿಸುವ ಬೇರೆ ಬೇರೆ ಅಸೈನ್‌ಮೆಂಟ್‌ಗಳನ್ನು ಆಫರ್‌ಗಳನ್ನು ಪಡೆಯುತ್ತಿದ್ದರು; ಆದರೆ ಪ್ರಭಾಸ್ ತನ್ನ ಕಾಲಬುಡಕ್ಕೆ ಹರಿದುಬಂದ ಅಂತಹ ಯಾವುದೇ ಅವಕಾಶಗಳನ್ನು ಸ್ವೀಕರಿಸಲಿಲ್ಲ; ಪ್ರಭಾಸ್ ಅವರಂತಹ ಕಟಿಬದ್ಧ ಕಲಾವಿದರು ಅತ್ಯರೂಪ !
ಇಂದು ಬಾಹುಬಲಿ ಅಸಾಧಾರಣ ಯಶಸ್ಸಿನ ಫಲವಾಗಿ ಪ್ರಭಾಸ್‌ಗೆ ಹಲವಾರು ಬಾಲಿವುಡ್ ಅವಕಾಶಗಳು ಹರಿದು ಬರುತ್ತಿವೆ. ಪ್ರಭಾಸ್ ಸದ್ಯದಲ್ಲೇ ಬಾಲಿವುಡ್ ಸೂಪರ್ ಹೀರೋ ಆಗಬಹುದು ಎನ್ನುತ್ತಾರೆ ರಾಜಮೌಳಿ.