ತುಮಕೂರು: ಶಿರಾ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ, ಇಂದಿಗೂ ಗುಡಿಸಲಿನಲ್ಲಿ ಜನ ವಾಸವಾಗುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಆಡಳಿತದಲ್ಲಿ ಶಿರಾ ಕ್ಷೇತ್ರದ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಇದನ್ನು ಮತದಾರರಿಗೆ ಮನವರಿಕೆ ಮಾಡಿ ಅಭಿವೃದ್ಧಿಯ ಚಿಂತನೆ ಆಧಾರದಲ್ಲಿ ಮತಗಳಿಸಲು ಕೆ.ಆರ್.ಪೇಟೆ ಮಾದರಿಯಲ್ಲಿಯೇ ಚುನಾವಣೆ ನಡೆಸುತ್ತಿದ್ದೇವೆ. ಕೊಟ್ಟ ಮಾತನ್ನು ಈಡೇರಿಸುವ ಗುಣ ಇರುವ ಬಿ.ಎಸ್. ಯಡಿಯೂರಪ್ಪ ಶಿರಾ ಜನರಿಗೆ ಮಾತು ಕೊಟ್ಟಂತೆ ಮದಲೂರು ಕೆರೆಗೆ ನೀರು ಹರಿಸುತ್ತಾರೆ, ಇಲ್ಲಿಯ ಮತದಾರರಿಗೆ ಅದರ ಅರಿವಿದೆ. ಆದ್ದರಿಂದ ಶಿರಾದಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಗುತ್ತದೆ – ಇದು ಶಿರಾ ಕ್ಷೇತ್ರದ ಉಪ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
- ಶಿರಾ ವಿಧಾನ ಸಭೆ ಉಪಕದನವನ್ನು ಗೆಲ್ಲಲು ಯಾವ ತಂತ್ರ ಅನುಸರಿಸಿದ್ದೀರಿ, ಕೆ.ಆರ್.ಪೇಟೆ ತರಹದಲ್ಲಿ ಇಲ್ಲಿಯೂ ಗೆಲ್ಲುತ್ತೀರಾ ?
ಕೆ.ಆರ್.ಪೇಟೆ ಯಲ್ಲಿ ನಾವು ಗೆಲ್ಲುತ್ತೇವೆ ಎಂದರೆ ಅಂದು ವಿಪಕ್ಷಗಳು ಟೀಕೆ ಮಾಡಿದರು, ಆದರೆ ಅಲ್ಲಿಯ ಮತದಾರರು ಬಿಜೆಪಿ ಗೆಲ್ಲಿಸಿದರು. ನುಡಿದಂತೆ ಅಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ, ಶಿರಾ ಕ್ಷೇತ್ರಕ್ಕೆ ಎದುರಾಗಿರುವ ಉಪಚುನಾವಣೆಯಲ್ಲಿ ನಾವು ಪ್ರಸ್ತಾಪಿಸಿರುವ ಕೆ.ಆರ್.ಪೇಟೆ ಮಾದರಿ ಚುನಾವಣೆಯ ಬಗ್ಗೆ ಬಹಳ ಚರ್ಚೆಗಳಾಗುತ್ತಿವೆ. ಕೆ.ಆರ್.ಪೇಟೆ ಉಪ ಚುನಾವಣೆ ಸಂದರ್ಭದಲ್ಲಿ ನಾವು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅಭಿವೃದ್ಧಿ ಯೋಜನೆಗಳನ್ನು ಈಡೇರಿಸುತ್ತಾ ಬಂದಿದ್ದೇವೆ. ಏತ ನೀರಾವರಿ ಯೋಜನೆಗೆ 250 ಕೋಟಿ ಅನುದಾನ, ಮತ್ತೂಂದು ನೀರಾವರಿ ಯೋಜನೆಗೆ 200 ಕೋಟಿ, ರಸ್ತೆಕಾಮಗಾರಿ, ಕಾಲುವೆ ದುರಸ್ತಿಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಿ ಕ್ಷೇತ್ರದ ಶಾಸಕ, ಸಚಿವ ನಾರಾಯಣಗೌಡ ಅಭಿವೃದ್ಧಿ ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಅಭಿವೃದ್ಧಿ ವಂಚಿತರಾಗಿರುವ ಶಿರಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೊಳಿಸಬೇಕೆಂಬುದೇ ನಮ್ಮ ಗುರಿಯಾಗಿದೆ.
- ಜೆಡಿಎಸ್ ಜೊತೆ ಬಿಜೆಪಿ ಒಳ ಒಪ್ಪಂದ ಇದೆ ಎಂದು ಕಾಂಗ್ರೆಸ್ ಪಕ್ಷದವರು ಹೇಳುತ್ತಿದ್ದಾರೆ, ಜೆಡಿಎಸ್ ಜೊತೆ ಹೊಂದಾಣಿಕೆ ಇದೆಯೇ ?
ನಾವು ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ, ಇಲ್ಲಿ ಏನು ನಡೆಯುತ್ತದೆ, ಏನು ನಡೆಯುವುದಿಲ್ಲ ಎನ್ನುವುದು ಮತದಾರರು ನೋಡಿ ತೀರ್ಮಾನ ಮಾಡುತ್ತಾರೆ. ನಾವು ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವೈಫಲ್ಯಗಳ ಆಧಾರದಲ್ಲಿ ಮತಕೇಳುತ್ತಿದ್ದೇವೆ, ಇನ್ನು ಆ ಪಕ್ಷ ಜೊತೆ ಹೊಂದಾಣಿಕೆ ಹೇಗೆ ಸಾಧ್ಯ, ಕೈ ನಾಯಕರ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾಂಗ್ರೆಸ್-ಜೆಡಿಎಸ್ ಎಲ್ಲರೂ ಈ ಚುನಾವಣೆಯನ್ನು ಗಂಭೀರವಾಗಿತೆಗೆದುಕೊಂಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅಂತಹ ಒಪ್ಪಂದಗಳಿದ್ದರೆ ಅವರೇಕೆ ಪ್ರಚಾರಕ್ಕೆ ಧುಮುಕುತ್ತಿದ್ದರು. ಅಷ್ಟಕ್ಕೂ ಬಿಜೆಪಿಗೆ ಒಳ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ.
- ಕೆ.ಆರ್.ಪೇಟೆ ಮಾದರಿಯಲ್ಲಿ ಶಿರಾ ಗೆಲ್ಲಲು ವಿಜಯೇಂದ್ರ ಇಲ್ಲಿ ಠಿಕಾಣಿ ಹೂಡಿದ್ದಾರೆ. ಕ್ಷೇತ್ರವನ್ನು ಗೆಲ್ಲಿಸುತ್ತಾರೆ ಎಂದು ಹೇಳುತ್ತಿದ್ದಾರೆ ನಿಮ್ಮ ಅಭಿಮಾನಿಗಳು?
ಇಲ್ಲಿ ನಾನೊಬ್ಬನೇ ಮುಖ್ಯವಲ್ಲ, ಎಲ್ಲರೂ ಸೇರಿ ಅಗ್ನಿಪರೀಕ್ಷೆ ಎದುರಿಸುತ್ತಿದ್ದೇವೆ, ಇದು ನಾನೊಬ್ಬನೇ ಎದುರಿಸುವಂತಹ ಚುನಾವಣೆಯಲ್ಲ. ನಮ್ಮ ಅಭ್ಯರ್ಥಿ ಡಾ.ಸಿ.ಎಂ ರಾಜೇಶ್ ಗೌಡ ಪರವಾಗಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಂಸದರಾದ ಜಿ.ಎಸ್. ಬಸವರಾಜು, ನಾರಾಯಣಸ್ವಾಮಿ, ಎಂಎಲ್ಸಿ ರವಿಕುಮಾರ್, ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ, ಹಾಲಿ, ಮಾಜಿ ಶಾಸಕರು ಸೇರಿದಂತೆ ರಾಜ್ಯದ ಬಿಜೆಪಿ ಮುಖಂಡರು ನಮ್ಮ ಕಾರ್ಯಕರ್ತರು, ಅಭ್ಯರ್ಥಿ ಆಕಾಂಕ್ಷಿಗಳಾಗಿದ್ದ ಬಿ.ಕೆ.ಮಂಜುನಾಥ್, ಎಸ್.ಆರ್. ಗೌಡ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು ಈ ಚುನಾವಣೆಯನ್ನು ಅಗ್ನಿಪರೀಕ್ಷೆ ರೂಪದಲ್ಲಿ ಎದುರಿಸುತ್ತಿದ್ದೇವೆ ಎಂದರು.
- ಸರ್ಕಾರ ಗುಡಿಸಲು ಮುಕ್ತ ಆಗಬೇಕು ಎಂದು ಹೇಳುತ್ತಿದೆ, ಆದರೆ ಶಿರಾ ಕ್ಷೇತ್ರ ದಲ್ಲಿ ಹೆಚ್ಚು ಗುಡಿಸಲು ಮನೆಗಳು ಇವೆ. ಇದಕ್ಕೆ ನಿಮ್ಮ ಯೋಜನೆ ಏನು ?
ಶಿರಾ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ಗುಡಿಸಲುಗಳಲ್ಲೇ ಇನ್ನೂ ಅನೇಕ ಮಂದಿ ಬಡವರು ವಾಸಿಸುತ್ತಿದ್ದು ಅದನ್ನು ನಾನು ಗಮನಿಸಿದ್ದೇನೆ, ಈ ಕ್ಷೇತ್ರವನ್ನು ಗುಡಿಸಲು ಮುಕ್ತ ಮಾಡಬೇಕು, ಗುಡಿಸಲು ಮುಕ್ತ ಕರ್ನಾಟಕ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಕಲ್ಪವಾಗಿದ್ದು, ಇದಕ್ಕೆ ನಮ್ಮ ವಸತಿ ಸಚಿವರಾದ ವಿ.ಸೋಮಣ್ಣ ಹೆಚ್ಚು ಆಸಕ್ತಿ ವಹಿಸಿ ಮನೆಗಳನ್ನು ನೀಡುತ್ತಿದ್ದಾರೆ. ಜೊತೆಗೆ ಎಲ್ಲರ ಬಹುದಿನದ ಕನಸು ಮದಲೂರು ಕೆರೆಗೆ ನೀರು ಹರಿಸುವ ಯೋಜನೆ, ರಸ್ತೆ, ಮೂಲ ಸೌಕರ್ಯಗಳಲ್ಲಿ ಕ್ಷೇತ್ರ ಹಿನ್ನೆಡೆ ಅನುಭವಿಸಿದೆ. ಕೃಷಿ ವಿವಿ ಸ್ಥಾಪನೆಯಾಗುವ ಅವಕಾಶವಿದ್ದರೂ ಕಾರ್ಯಗತವಾಗಿಲ್ಲ. ನೀರಾವರಿ ಯೋಜನೆ ಜಾರಿ ಸೇರಿದಂತೆ ಶಿರಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ರಾಜೇಶ್‌ಗೌಡರನ್ನು ಮತದಾರರು ಬೆಂಬಲಿಸಬೇಕಿದೆ.
- ಶಿರಾದಲ್ಲಿ ಗೊಲ್ಲ ಸಮುದಾಯ ಹೆಚ್ಚಾಗಿದೆ, ಅವರಿಗೆ ಯಾವರೀತಿಯ ಸೌಲಭ್ಯ ಕಲ್ಪಿಸುತ್ತೀರಿ ?
ಕಾಡು ಗೊಲ್ಲ ಅಭಿವೃದ್ಧಿ ನಿಗಮ ಮಾಡಲಾಗಿದೆ ಜೊತೆಗೆ ಆ ಸಮುದಾಯವನ್ನು ಆರ್ಥಿಕವಾಗಿ ಮೇಲೆತ್ತಲು ಸರ್ಕಾರ ಯೋಜನೆ ರೂಪಿಸುತ್ತದೆ. ಬರೀ ಗೊಲ್ಲ ಸಮುದಾಯ ಒಂದೇ ಅಲ್ಲ ಸಮಾಜದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ಎಲ್ಲಾ ಸಮುದಾಯಗಳನ್ನು ಮೇಲೆತ್ತಬೇಕು ಎನ್ನುವುದು ಮುಖ್ಯಮಂತ್ರಿಯವರ ಆಶಯ.
- ಈ ಚುನಾವಣೆಯಲ್ಲಿ ಮದಲೂರು ಕೆರೆ ನೀರು ಹರಿಸುವುದೇ ಚುನಾವಣಾ ಅಸ್ತ್ರವಾಗಿದೆ. ಕೆರೆಗೆ ನೀರು ಬರುತ್ತದೆಯೇ?
ನುಡಿದಂತೆ ನಡೆಯುವ ಶಕ್ತಿ ಛಲ ಇರುವುದು ಯಡಿಯೂರಪ್ಪ ಅವರಿಗೆ ಕೋವಿಡ್, ನೆರೆ, ಬರ, ನಡುವೆ ಆರ್ಥಿಕ ಸಂಕಷ್ಟ ಇರಬಹುದು, ಚುನಾವಣೆ ಮುಂಚೆಯೇ ಮದಲೂರು ಕೆರೆಗೆ ನೀರು ಹರಿಸುವ ಚಿಂತನೆ ನಡೆದಿದೆ.
- ಈ ಚುನಾವಣೆಯಲ್ಲಿ ತಾವು ಅಧಿಕಾರ ಬಲ ಹಣದ ಬಲದಿಂದ ಗೆಲ್ಲಲು ಹೊರಟಿದ್ದೀರಿ ಎಂದು ಕಾಂಗ್ರೆಸ್, ಜೆಡಿಎಸ್ ಆರೋಪ ವಿದೆ ?
ನೇರವಾಗಿ ಹೇಳಬೇಕು ಎಂದರೆ ಮತ ಎಣಿಕೆ ಮುಂಚೆಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಸೋಲು ಒಪ್ಪಿಕೊಂಡಿವೆ. ಹಣದ ಶಕ್ತಿ, ಅಧಿಕಾರ ಬಳಸಿಕೊಂಡು ಅದರ ಆಧಾರದ ಮೇಲೆ ಚುನಾವಣೆ ಗೆಲ್ಲುತ್ತಾರೆ ಎಂದರೆ ಅದು ಮೂರ್ಖ ತನದ ಮಾತು, ನಾವು ಹಣ ಅಧಿಕಾರದಿಂದ ಈ ಚುನಾವಣೆ ಗೆಲ್ಲಲ್ಲ. ಅಭಿವೃದ್ಧಿ ಆಧಾರದ ಮೇಲೆ ಗೆಲ್ಲುತ್ತೇವೆ.
- ತಾವು ಯಾವಾಗ ಚುನಾವಣಾ ರಾಜಕೀಯಕ್ಕೆ ಧುಮುಕುತ್ತೀರಾ..?
ಪಕ್ಷದ ಯುವಮೋರ್ಚಾ ರಾಜ್ಯ ಪ್ರಧಾನಕಾರ್ಯದರ್ಶಿಯಾಗಿದ್ದ ನನ್ನನ್ನು ಗುರುತಿಸಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಸ್ಥಾನ ನೀಡಿದೆ. ಕೆ.ಆರ್. ಪೇಟೆ ಸೇರಿ ಹಲವು ಉಪಚುನಾವಣೆ, ಲೋಕಸಭೆ ಚುನಾವಣೆ ಜವಾಬ್ದಾರಿ ನಿರ್ವಹಿಸಿದ್ದು, ಸಕ್ರಿಯ ರಾಜಕಾರಣದಲ್ಲಿರುವೆ. ಚುನಾವಣಾ ರಾಜಕೀಯಕ್ಕೆ ಯಾವಾಗ ಧುಮುಕಬೇಕೆಂದು ಪಕ್ಷ ತೀರ್ಮಾನಿಸಲಿದೆ.
- ಶಿರಾ ಕ್ಷೇತ್ರದಲ್ಲಿ ಮತಸೆಳೆಯಲು ಕೋಮು ಭಾವನೆಯನ್ನು ಬಿಜೆಪಿಯವರು ಪ್ರಚೋಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪ ಮಾಡುತ್ತಿದ್ದಾರೆ ?
ಕಾಂಗ್ರೆಸ್ ಪಕ್ಷದವರು ಬೇರೆ ಲೋಕದಲ್ಲಿ ಇದ್ದಾರೆ. ಯಾರು ಕೋಮು ಪ್ರಚೋದನೆ ಮಾಡುತ್ತಾರೆ ಎಂದು ಮತದಾರರಿಗೆ ಗೊತ್ತು, ಕೋಮು ಪ್ರಚೋದನೆ ಮಾಡಿ ಮತಕೇಳುವ ಅಗತ್ಯ ಬಿಜೆಪಿಗೆ ಇಲ್ಲ, ಮೊನ್ನೆ ಡಿ.ಜಿ.ಹಳ್ಳಿ,ಕೆ.ಜಿ.ಹಳ್ಳಿ ಘಟನೆ ಏನು ಒಬ್ಬ ಕಾಂಗ್ರೆಸ್ ಪಕ್ಷದ ಶಾಸಕರನ್ನೇ ಕೊಲೆ ಮಾಡಲು ಯತ್ನ ನಡೆದರೂ ಓಟಿನ ಆಸೆಯಿಂದ ಕನಿಷ್ಠ ಅವರ ನೋವಿಗೆ ಸ್ಪಂದಿಸುವ ಗುಣ ತೋರಲಿಲ್ಲ. ಒಂದು ರಾಷ್ಟ್ರೀಯ ಪಕ್ಷ ವಾದ ಕಾಂಗ್ರೆಸ್ ಮುಖಂಡರು ಈವರೆಗೆ ಮಾಡಿರುವುದು ಏನು ಒಂದು ಸಮಾಜದ ಕಣ್ಣಿಗೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ ಹಚ್ಚುವುದನ್ನು ನೋಡಿ ಜನ ಬೇಸತ್ತಿದ್ದಾರೆ ಅದಕ್ಕೆ ಜನ ಉತ್ತರ ಕೊಡುತ್ತಾರೆ.
ಚಿ.ನಿ.ಪುರುಷೋತ್ತಮ್