Advertisement

B.Y.Vijayendra: ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಜೆಪಿ ಭದ್ರಕೋಟೆ

07:31 PM Jun 22, 2024 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್​​​ಗೆ  ತಕ್ಕ ಪಾಠ ಕಲಿಸಿದ್ದಾರೆ. ರಾಜ್ಯದಲ್ಲಿ 145ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಬಹುಮತ ಪಡೆದಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಭದ್ರಕೋಟೆ ನಮ್ಮ ಕರ್ನಾಟಕ ಎಂಬುದನ್ನು ಜನರು ಲೋಕಸಭಾ ಚುನಾವಣೆಯಲ್ಲಿ ಸಾಬೀತುಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ  ಹೇಳಿದರು.

Advertisement

ರಾಜ್ಯದಿಂದ ಆಯ್ಕೆಯಾದ ನೂತನ ಬಿಜೆಪಿ ಹಾಗೂ ಜೆಡಿಎಸ್ ಸಂಸದರು, ಕೇಂದ್ರ ಸಚಿವರಿಗೆ ಅರಮನೆ ಮೈದಾನದಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ಮುಂದಿನ ದಿನಗಳು ಹೋರಾಟದ ದಿನಗಳು. ಅಧಿವೇಶನದ ಬಳಿಕ ರಾಜ್ಯವ್ಯಾಪಿ ಪ್ರವಾಸ ಮಾಡಿ ಸಂಘಟನೆಗೆ ಶಕ್ತಿ ತುಂಬುತ್ತೇವೆ. ಬಿಜೆಪಿ ಜೆಡಿಎಸ್ ಒಂದಾಗಿ ಆಡಳಿತ ಪಕ್ಷ ಕಾಂಗ್ರೆಸ್‌ ಸೊಕ್ಕು ಮುರಿಯುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷದ ಆಮಿಷದ ನಡುವೆಯೂ ಜನ ಬಿಜೆಪಿ ಜೆಡಿಎಸ್​ಗೆ ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಗೂಬೆ ಕೂರಿಸುತ್ತಿದ್ದರೂ ಅದನ್ನು ಧಿಕ್ಕರಿಸಿ ಜನ ಆಶೀರ್ವಾದ ಮಾಡಿದ್ದಾರೆ. 9 ಕ್ಷೇತ್ರಗಳಲ್ಲಿ ಗೆದ್ದು ಕಾಂಗ್ರೆಸ್ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಸಚಿವರು ಇರುವ ಕ್ಷೇತ್ರಗಳಲ್ಲಿ ಕೂಡ ಎನ್​ಡಿಎ ಲೀಡ್ ಪಡೆದುಕೊಂಡಿದೆ ಎಂದು ತಿಳಿಸಿದರು.

ಸಂಸದರು ಹೆಚ್ಚು ಶ್ರಮ ಹಾಕಿ: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ದುರಾಡಳಿತದ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. ಕಾಂಗ್ರೆಸ್ ದುರಾಡಳಿತದಿಂದ ಕರ್ನಾಟಕ ಎಲ್ಲ ವಿಧಗಳಲ್ಲೂ ಹಿಂದೆ ಸರಿದಿದೆ. ಬೋರ್ಡ್ ಅಧ್ಯಕ್ಷರು ಅನುದಾನಕ್ಕೆ ಕಾಯುತ್ತಿರುವ ರೀತಿ ಸಿಎಂ ವರ್ತಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್​, ತಾಲೂಕು ಪಂಚಾಯತ್​ ಚುನಾವಣೆಗಳು ಬರುತ್ತವೆ. ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬುವ ಚುನಾವಣೆಯಲ್ಲಿ ಸಂಸದರು ಹೆಚ್ಚು ಶ್ರಮ ಹಾಕಬೇಕು ಎಂದು ಸೂಚನೆ ನೀಡಿದರು.

ಸಮಾರಂಭದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವರಾದ ಪ್ರಲ್ಹಾದ್​ ಜೋಶಿ, ಶೋಭಾ ಕರಂದ್ಲಾಜೆ, ಎಚ್​ಡಿ ಕುಮಾರಸ್ವಾಮಿ, ವಿ ಸೋಮಣ್ಣ ಲೋಕಸಭಾ ಚುನಾವಣಾ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಭಾಗಿಯಾಗಿದ್ದರು.

Advertisement

ಬಿಜೆಪಿ ಮತ್ತು ಜೆಡಿಎಸ್​ನ ಎಲ್ಲ ಸಂಸದರು, ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next