ಬೆಂಗಳೂರು: ಮಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರುವಿನ ಹತ್ಯೆ ಪ್ರಕರಣಕ್ಕೆ ಸಾಕಷ್ಟು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರು ರಾಜಿನಾಮೆಯೊಂದೇ ಎಲ್ಲದಕ್ಕೂ ಪರಿಹಾರವಲ್ಲ.
ಯುವ ಮೋರ್ಚಾ ಕಾರ್ಯಕರ್ತರು ಸಂಯಮದಿಂದ ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕಿದೆ, ನಿಮ್ಮ ನೋವಿನ ಕಿಚ್ಚು ಪಾತಕಿಗಳನ್ನು ಸುಡಬೇಕೇ ಹೊರತು ನೀವೇ ಕಟ್ಟಿಬೆಳೆಸಿದ ಸಂಘಟನೆಯನ್ನಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿಜಯೇಂದ್ರ, ಹತ್ಯೆಕೋರ ರಕ್ಕಸರ ಜಾಲವನ್ನು ಬೇರು ಸಹಿತ ಕಿತ್ತೂಗೆಯುವಂತಾಗಲು ಸರ್ಕಾರದ ಮೇಲೆ ಸಾಧ್ಯವಿರುವ ಎಲ್ಲ ಒತ್ತಡಗಳನ್ನು ನಳಿನ್ ಕುಮಾರ್ ಕಟೀಲ್ ಅವರು ಹೇರಿದ್ದಾರೆ. ಇದಕ್ಕೆ ಪರಿಪೂರ್ಣವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿಶೇಷ ಜಾಗೃತ ದಳ ರಚಿಸಿದ್ದಾರೆ, ಜತೆಗೇ ಎನ್‌ಐಎ ತನಿಖೆಗೂ ಒಪ್ಪಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ನಮ್ಮ ಒಗ್ಗಟ್ಟಿನಲ್ಲಿ ಅಪಸ್ವರದ ಮಾತು, ನಡವಳಿಕೆಗಳು ಇದನ್ನೇ ಬಯಸುತ್ತಿರುವ ವಿರೋಧಿ ಶಕ್ತಿಗಳ ಅಸ್ತ್ರವಾಗಬಾರದು ಎಂಬ ಎಚ್ಚರ ವಹಿಸುವಂತೆ ನಿಮ್ಮಲ್ಲಿ ಕಳಕಳಿಯ ಮನವಿ ಮಾಡುವೆ ಎಂದು ಮನವಿ ಮಾಡಿದ್ದಾರೆ.