ಮಸ್ಕಿ: ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದರೂ ನೆರೆ-ಹೊರೆ ಕ್ಷೇತ್ರದಲ್ಲೇ ಸದ್ದು-ಗದ್ದಲ ಜೋರಾಗಿದೆ. ವಿಶೇಷವಾಗಿ ಮಸ್ಕಿ ಗಡಿಗೆ ಹೊಂದಿಕೊಂಡ ಪಟ್ಟಣ, ಹಳ್ಳಿಗಳಲ್ಲೇ ರಾಜಕೀಯ ತಂತ್ರ-ಪತ್ರಿತಂತ್ರ ಸೂತ್ರ ಸಿದ್ಧವಾಗುತ್ತಿವೆ!.
ಮಸ್ಕಿ ಉಪಚುನಾವಣೆ ಗೆಲ್ಲಲು ಪಣತೊಟ್ಟು ಉಸ್ತುವಾರಿಗಳಾಗಿ ಆಗಮಿಸಿದ ಕಾಂಗ್ರೆಸ್ ಮತ್ತು ಬಿಜೆಪಿ ವರಿಷ್ಠರ ವಾಸ್ತವ್ಯ ಮತ್ತು ದಿನಚರಿಗಳು ಆರಂಭವೇ ಮಸ್ಕಿ ಗಡಿ ಪ್ರದೇಶದಲ್ಲಾಗುತ್ತಿರುವುದರಿಂದ ಮಸ್ಕಿ ಮಾತ್ರವಲ್ಲದೇ ನೆರೆ-ಹೊರೆ ಕ್ಷೇತ್ರಗಳಲ್ಲೂ ಚುನಾವಣೆ ನಡೆಯುತ್ತಿದೆಯಾ? ಎನ್ನುವ ಚಿತ್ರಣಗಳು ಕಾಣ ಸಿಗುತ್ತಿವೆ.
ವಿಶೇಷವಾಗಿ ಸುತ್ತಲೂ ಮಸ್ಕಿ ಕ್ಷೇತ್ರಕ್ಕೆ ಹೊಂದಿಕೊಂಡ ಸಿಂಧನೂರು, ಲಿಂಗಸುಗೂರು, ಕುಷ್ಟಗಿ, ಕನಕಗಿರಿ, ಮಾನ್ವಿ ಕ್ಷೇತ್ರಗಳಲ್ಲೂ ರಾಜಕೀಯ ಗೌಜು-ಗದ್ದಲ ಜೋರಾಗಿವೆ. ಗಡಿಯಲ್ಲೇ ಕಾರ್ಯತಂತ್ರ: ಬಿಜೆಪಿಯಲ್ಲಿ ಚುನಾವಣೆ ಉಸ್ತುವಾರಿ ಹೊತ್ತ ಸಚಿವ ಬಿ.ಶ್ರೀರಾಮುಲು, ಬಿ.ವೈ. ವಿಜಯೇಂದ್ರ, ಎನ್.ರವಿಕುಮಾರ್ ಸೇರಿ ಇತರೆ ಹಾಲಿ-ಮಾಜಿ ಶಾಸಕರು ಈಗಾಗಲೇ ಮಸ್ಕಿ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ.
ವಿಶೇಷವೆಂದರೆ ಸಚಿವ ಬಿ. ಶ್ರೀರಾಮುಲು ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಪಕ್ಕದ ಸಿಂಧನೂರು ನಗರದಲ್ಲಿ ವಾಸ್ತವ್ಯ ಹೂಡಿದ್ದರೆ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮುದಗಲ್ ಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರ ರಾಜಕೀಯ ಕಾರ್ಯತಂತ್ರಗಳು ಇಲ್ಲಿಂದಲೇ ಆರಂಭವಾಗುತ್ತಿವೆ. ಕಾರ್ಯಕರ್ತರ ಸಭೆ, ಪಕ್ಷದ ಪ್ರಮುಖರು, ಜಾತಿವಾರು ಮುಖಂಡರು ಸೇರಿ ಎಲ್ಲರನ್ನೂ ಕರೆದು ಗಡಿಯಲ್ಲೇ ಚರ್ಚೆ ಮಾಡಲಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಗೆಲುವಿಗೆ ಇಲ್ಲಿಂದಲೇ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ.
ಇನ್ನು ಚುನಾವಣೆ ಪ್ರಚಾರಕ್ಕೂ ಗಡಿ ಪ್ರದೇಶದಿಂದಲೇ ಮೊದಲುಗೊಂಡು ಮಸ್ಕಿ ಪಟ್ಟಣಕ್ಕೆ ಅಂತ್ಯವಾಗುತ್ತಿವೆ. ಇಲ್ಲೂ ಅದೇ ವ್ಯವಸ್ಥೆ: ಕೇವಲ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್‌ನಲ್ಲೂ ಅದೇ ಸ್ಥಿತಿ ಇದೆ. ಈಗಾಗಲೇ ಚುನಾವಣೆ ಅಖಾಡಕ್ಕೆ ಇಳಿದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಎಂಎಲ್ಸಿಗಳಾದ ಅಲ್ಲಂವೀರಭದ್ರ, ಎನ್.ಎಸ್. ಬೋಸರಾಜು, ಶಾಸಕ ಅಮರೇಗೌಡ ಬಯ್ನಾಪೂರ ಸೇರಿ ಇತರರು ನೆರೆಯ ಸಿಂಧನೂರು, ಮಾನ್ವಿ, ಲಿಂಗಸುಗೂರಲ್ಲಿ ವಾಸ್ತವ್ಯ ಹೂಡಿದ್ದಾರೆ.
ಇನ್ನು ಏ.5 ಮತ್ತು 6ರಂದು ಆಗಮಿಸುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೂಡ ನೆರೆಯ ಸಿಂಧನೂರು ಮತ್ತು ಮುದಗಲ್ ಪಟ್ಟಣಗಳನ್ನೇ ವಾಸ್ತವ್ಯಕ್ಕೆ ಆಯ್ದುಕೊಂಡಿದ್ದಾರೆ. ಗಮನಾರ್ಹವೆಂದರೆ ಕಾಂಗ್ರೆಸ್ ವರಿಷ್ಠರು ಆಗಮಿಸುವ ಹೆಲಿಕಾಪ್ಟರ್ ಲ್ಯಾಂಡಿಂಗ್ ಒಂದು ಕಡೆಯಾದರೆ, ಪ್ರಚಾರದ ಮಾರ್ಗ ಮತ್ತೂಂದು. ಪ್ರವಾಸದ ಎರಡು ದಿನವೂ ವಾಸ್ತವ್ಯದ ಜಾಗಗಳನ್ನು ಕಾಂಗ್ರೆಸ್‌ನ ವರಿಷ್ಠರು ಪ್ರತ್ಯೇಕ ಎರಡು ಕಡೆ ಆಯ್ದುಕೊಂಡಿರುವುದು ವಿಶೇಷ.
ಮಸ್ಕಿ ಪ್ರವಾಸ ಮೊದಲ ದಿನ ಏ.5ರಂದು ಡಿಕೆ ಶಿವಕುಮಾರ ಮತ್ತು ಸಿದ್ದರಾಮಯ್ಯ ಸಿಂಧನೂರಿನಲ್ಲಿ ವಾಸ್ತವ್ಯ ಹೂಡಲಿದ್ದರೆ, ಏ.6ರಂದು ಮುದಗಲ್ ಪಟ್ಟಣದಲ್ಲಿ ವಾಸ್ತವ್ಯಕ್ಕೆ ಆಯ್ದುಕೊಂಡಿದ್ದಾರೆ. ಇನ್ನು ಇವರಿಬ್ಬರನ್ನು ಪ್ರಚಾರಕ್ಕಾಗಿ ಹೊತ್ತು ತರುವ ಹೆಲಿಕಾಪ್ಟರ್ ಮಾತ್ರ ಕುಷ್ಟಗಿಯಲ್ಲಿ ಲ್ಯಾಂಡ್ ಆಗಲಿದೆ. ಒಟ್ಟಿನಲ್ಲಿ ಮಸ್ಕಿ ಉಪಚುನಾವಣೆಯ ಪ್ರಚಾರಕ್ಕಾಗಿಯೇ ಎಲ್ಲ ಪಕ್ಷದ ನೇತಾರರು ಆಗಮಿಸುತ್ತಾರೆ. ಆದರೆ ಗಡಿ ಪ್ರದೇಶದಿಂದಲೇ ರಾಜಕೀಯ ಚಟುವಟಿಕೆ ಆರಂಭಿಸಲಾಗುತ್ತಿದೆ.
ಮಲ್ಲಿಕಾರ್ಜುನ ಚಿಲ್ಕರಾಗಿ