Advertisement

ಸಂಜಯ್ v/s ಮಾಧುರಿ ಗಾಢ ಪ್ರೀತಿ ಬ್ರೇಕ್ ಅಪ್ ಗೆ ಮುಂಬೈ ಬ್ಲಾಸ್ಟ್, ರಿಚಾ ಕಾರಣ!

08:11 PM Jun 27, 2020 | Nagendra Trasi |

ಬಾಲಿವುಡ್ ಸಿನಿಮಾರಂಗದಲ್ಲಿ 1980 ಹಾಗೂ 1990ರ ದಶಕದಲ್ಲಿ ಸುಂದರ ನಗುವಿನ ಬೆಡಗಿ ಮಾಧುರಿ ದೀಕ್ಷಿತ್ ಲಕ್ಷಾಂತರ ಸಿನಿ ಪ್ರಿಯರ ಹೃದಯದ ಬಡಿತವನ್ನು ಹೆಚ್ಚಿಸಿದ್ದ ನಟಿ. 70ಕ್ಕೂ ಅಧಿಕ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ಮಾಧುರಿ, ಬರೋಬ್ಬರಿ ಆರು ಫಿಲ್ಮ್ ಫೇರ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದರು. ಅಷ್ಟೇ ಅಲ್ಲ 1990 ಹಾಗೂ 2000ನೇ ಇಸವಿವರೆಗೆ ದೇಶದ ಸಿನಿಮಾರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ
ನಟಿಯರಲ್ಲಿ ಮಾಧುರಿ ಕೂಡಾ ಒಬ್ಬರಾಗಿದ್ದರು. ಈಕೆಯ ಅದ್ಭುತ ನಟನೆಗಾಗಿ 2008ರಲ್ಲಿ ಭಾರತ ಸರ್ಕಾರ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

Advertisement

1967ರಲ್ಲಿ ಮುಂಬೈನಲ್ಲಿ ಜನಿಸಿದ್ದ ಮಾಧುರಿ ಆರಂಭದಲ್ಲಿ ಆರಿಸಿಕೊಂಡಿದ್ದು ಮೈಕ್ರೋಬಯಾಲಜಿ ಅಂದರೆ ಸೂಕ್ಷ್ಮಜೀವ ವಿಜ್ಞಾನ ವಿಷಯ! ಆದರೆ ಚೆಂದುಳ್ಳಿ ಚೆಲುವೆಗೆ ಸಿನಿಮಾದಲ್ಲಿ ನಟಿಸಲು ಆಫರ್ ಬಂದ ಹಿನ್ನೆಲೆಯಲ್ಲಿ ದೀಕ್ಷಿತ್ ಓದಿಗೆ ಗುಡ್ ಬೈ ಹೇಳಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. 1984ರಲ್ಲಿ ಹಿರೇನ್ ನಾಗ್ ನಿರ್ದೇಶನದ “ಅಬೋಧ್” ಸಿನಿಮಾದಲ್ಲಿ ಮಾಧುರಿ ನಟಿಸುವ ಮೂಲಕ ಮೊತ್ತ ಮೊದಲ ಬಾರಿ ಬೆಳ್ಳಿಪರದೆಗೆ ಪ್ರವೇಶಿಸಿದ್ದರು. ಆ ಬಳಿಕ ಸುಮಾರು ನಾಲ್ಕು ವರ್ಷಗಳ ಕಾಲ ಮಾಧುರಿ ನಟಿಸಿದ್ದ ಸಿನಿಮಾಗಳು ಯಶಸ್ವಿಯಾಗಲೇ ಇಲ್ಲ!1987ರ ಮಿಸ್ಟರ್ ಇಂಡಿಯಾ ಸಿನಿಮಾ ಯಶಸ್ಸಿನಿಂದ ಬೀಗುತ್ತಿದ್ದ ಅನಿಲ್ ಕಪೂರ್ ಗೆ ಅದೃಷ್ಟ ಎಂಬಂತೆ 1988ರಲ್ಲಿ ಬಿಡುಗಡೆಯಾದ ತೇಜಾಬ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಗೆದ್ದುಬಿಟ್ಟಿದ್ದಲ್ಲದೇ ಮಾಧುರಿ ದೀಕ್ಷಿತ್ ಗೆ ಸ್ಟಾರ್ ಪಟ್ಟವನ್ನು
ತಂದುಕೊಟ್ಟಿತ್ತು!

ನಂತರ ದಿಲ್, ಬೇಟಾ, ಹಮ್ ಆಮ್ ಕೆ ಹೈ ಕೌನ್, ದಿಲ್ ತೋ ಪಾಗಲ್ ಹೈ,ದೇವದಾಸ್ ರಾಮ್ ಲಖನ್, ತ್ರಿದೇವ್, ಠಾಣೆದಾರ್, ಕಿಶನ್ ಕನ್ನಯ್ಯಾ, ಸಾಜನ್ ಸೇರಿದಂತೆ ಒಂದರ ಹಿಂದೆ ಒಂದು ಯಶಸ್ವಿ ಸಿನಿಮಾದೊಂದಿಗೆ ಮಾಧುರಿ ಬಾಲಿವುಡ್ ನ ಬೇಡಿಕೆಯ ನಟಿಯಾಗಿ ಬೆಳೆದು ಬಿಟ್ಟಿದ್ದರು. ಆದರೆ ಪ್ರೇಮ್ ಕಹಾನಿ ಮಾತ್ರ ಮಾಧುರಿ ಪಾಲಿಗೆ ಖಳ್ ನಾಯಕ್ ಸಿನಿಮಾದಂತೆ ಆಗಿಬಿಟ್ಟಿತ್ತು…

ಮಾಧುರಿ ಗಾಢವಾಗಿ ಪ್ರೀತಿಸುತ್ತಿದ್ದದ್ದು ಸಂಜಯ್ ದತ್ ನನ್ನು!
ಬಿ ಟೌನ್ ನಲ್ಲಿ 1990ರ ದಶಕದಲ್ಲಿ ಸಂಜಯ್ ದತ್ ಮತ್ತು ಮಾಧುರಿ ದೀಕ್ಷಿತ್ ನಡುವಿನ ಅಫೇರ್ ತುಂಬಾ ರಹಸ್ಯವಾಗಿ ಉಳಿದಿರಲಿಲ್ಲವಾಗಿತ್ತು. ಅದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿತ್ತು. ಬಾಲಿವುಡ್ ನ ಸಾಜನ್, ಠಾಣೇದಾರ್, ಖಳ್ ನಾಯಕ್ ಸಿನಿಮಾದಲ್ಲಿ ಸಂಜು ಮತ್ತು ಮಾಧುರಿ ಒಟ್ಟಿಗೆ ಅಭಿನಯಿಸಿದ ನಂತರ ಇಬ್ಬರು ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸ ತೊಡಗಿದ್ದರು.

Advertisement

ಇಬ್ಬರೂ 1988ರಿಂದ ಸಿನಿ ಪಯಣದಲ್ಲಿ ಒಟ್ಟಿಗೆ ಇದ್ದರು. ಸಂಜಯ್ ಬಗ್ಗೆ ಆಕೆ ಅದೆಷ್ಟು ಉತ್ಕಟವಾದ ಪ್ರೀತಿ ಮತ್ತು ಅಭಿಮಾನ ಹೊಂದಿದ್ದಳು ಎಂಬುದಕ್ಕೆ ಅಂದು ನೀಡಿದ್ದ ಹೇಳಿಕೆಯೇ ಸಾಕ್ಷಿಯಾಗಿತ್ತು…”ನನ್ನ ಅಚ್ಚುಮೆಚ್ಚಿನ ಸಂಗಾತಿ ಎಂದರೆ ಅದು ಸಂಜಯ್ ದತ್. ಆತ ನಿಜವಾದ ಹಾಸ್ಯ ಚಟಾಕಿ ಹಾರಿಸುವ ವ್ಯಕ್ತಿ. ಆತ ಹೇಳುವ ಸಂಗತಿಗಳು ನನ್ನನ್ನು ನಗುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಅವರೊಬ್ಬ ಜಂಟಲ್ ಮ್ಯಾನ್. ಸಂಜು ಪೆಂಟಾಸ್ಟಿಕ್ ವ್ಯಕ್ತಿ. ಆತನೊಳಗೊಂದು ಪ್ರೀತಿಸುವ ಹೃದಯವಿದೆ. ಮತ್ತೊಬ್ಬರನ್ನು ನಗಿಸುವ ಗುಣವಿದೆ. ನನ್ನ ನಗಿಸಬಲ್ಲ ಏಕೈಕ ವ್ಯಕ್ತಿ ಅದು ಸಂಜಯ್ ಮಾತ್ರ. ಆತ ಹೃದಯ ವೈಶಾಲ್ಯ ಹೊಂದಿರುವ, ವಿವಾದ ಹೊಂದದ ವ್ಯಕ್ತಿ ಎಂದು ಮನದಾಳದ ಮಾತನ್ನು ಹೊರಹಾಕಿದ್ದಳು.

ಮಾಧುರಿಯ ಈ ಹೇಳಿಕೆ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿತ್ತು…ಇಬ್ಬರ ಲವ್ ಅಫೇರ್ ಸುದ್ದಿ ನೇರವಾಗಿ ತಲುಪಿದ್ದು ಸಂಜಯ್ ದತ್ ಮೊದಲ ಪತ್ನಿ ರಿಚಾ ಶರ್ಮಾಗೆ. ಈ ವೇಳೆ ರಿಚಾ ಅಮೆರಿಕದಲ್ಲಿ ಬ್ರೈನ್ ಟ್ಯೂಮರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ರಿಚಾ 1992ರಲ್ಲಿ ಮುಂಬೈಗೆ ಆಗಮಿಸಿಬಿಟ್ಟಿದ್ದರು.ಸಂಜಯ್ ದತ್ ವಿವಾಹ ವಿಚ್ಛೇದನ ನೀಡುತ್ತಾರೆ ಎಂಬ ಸುದ್ದಿ ರಿಚಾಗೆ ಆಘಾತ ನೀಡಿತ್ತು. ಅಷ್ಟರಲ್ಲಿ ರಿಚಾ ಕೂಡಾ ನಾನು ಎಂದೆಂದಿಗೂ ಸಂಜಯ್ ಜತೆಯಾಗಿಯೇ ಇರುತ್ತೇನೆ. ನನಗೆ ಡೈವೋರ್ಸ್ ಬೇಕಾಗಿಲ್ಲ. ನಾನು ವಿದೇಶದಿಂದ ಬಂದಿತ್ತು ಸಂಜು ಜತೆ ಇರಲು ಎಂಬುದಾಗಿ ಹೇಳಿಕೆ ಕೊಟ್ಟು ಬಿಟ್ಟಿದ್ದರು. ಆದರೆ 15 ದಿನದೊಳಗೆ ರಿಚಾ ಭಾರ ಹೃದಯದಿಂದ ನ್ಯೂಯಾರ್ಕ್ ಗೆ ವಾಪಸ್ ಹೊರಟು ಬಿಟ್ಟಿದ್ದರು!

ಮುಂಬೈ ಬ್ಲಾಸ್ಟ್ ಕೇಸ್ ನಲ್ಲಿ ಸಂಜು ಅರೆಸ್ಟ್:
ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ 1993ರಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ಟಾಡಾ ಕಾಯ್ದೆಯಡಿ ಜೈಲುಪಾಲಾಗಿಬಿಟ್ಟಿದ್ದ. ಸಂಜಯ್ ಬಂಧನದ ಸುದ್ದಿ ಕೇಳಿ ಮಾಧುರಿ ಆಘಾತಕ್ಕೊಳಗಾಗಿದ್ದಳು. ಕೊನೆಗೆ ಭಗ್ನ ಹೃದಯಿ ಮಾಧುರಿ ಸಂಜಯ್ ಜತೆಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿಬಿಟ್ಟಿದ್ದಳು. ಅಷ್ಟೇ ಅಲ್ಲ ಸಂಜಯ್ ಜೈಲಿನಿಂದ ಹೊರಬಂದ ಮೇಲೂ ಒಂದೇ ಒಂದು ಬಾರಿ ಕೂಡಾ ಆತನನ್ನು ಭೇಟಿಯಾಗಲಿಲ್ಲ. ನಂತರ ಜಾಮೀನಿನ ಮೇಲೆ ಹೊರ ಬಂದ ಸಂಜಯ್ ಕೂಡಾ ಗಾಢವಾಗಿ ಪ್ರೀತಿಸಿದ್ದ ಹುಡುಗಿ ತನ್ನನ್ನು ಬಿಟ್ಟು ದೂರ ಹೋಗಲು ನಿರ್ಧರಿಸಿಬಿಟ್ಟಿದ್ದಾಳೆ ಎಂಬುದು ಮನವರಿಕೆಯಾಗಿತ್ತು. ನಾನು ಮತ್ತು ಆಕೆ ಸ್ನೇಹಿತರು. ನನ್ನ ಎಲ್ಲಾ ಸಹ ನಟ, ನಟಿಯರು ಇಂಡಸ್ಟ್ರೀಯಲ್ಲಿ ಉತ್ತಮವಾಗಿ ಇರಬೇಕು ಅದು ಮಾಧುರಿಯಾಗಲಿ, ಶ್ರೀದೇವಿಯಾಗಲಿ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿಕೆ ಕೊಟ್ಟು ಬಿಟ್ಟಿದ್ದರು!

ಇಬ್ಬರು ತಮ್ಮ ನಡುವಿನ ಅಫೇರ್ ಬಗ್ಗೆ ಮೌನವಾಗಿದ್ದುಬಿಟ್ಟರು. ಮಾಧುರಿ ಜತೆಗಿನ ಅಫೇರ್ ಅನ್ನು ಸಂಜಯ್ ಅಲ್ಲಗಳೆದುಬಿಟ್ಟಿದ್ದ. ಮಾಧುರಿ ಕೂಡಾ ಸಂಜಯ್ ಬಗ್ಗೆ ಕಟ್ಟಿಕೊಂಡಿದ್ದ ಕನಸು ನುಜ್ಜುನೂರಾಗಿತ್ತು..ಅದಕ್ಕೆ ಕಾರಣ ಮುಂಬೈ ಸ್ಫೋಟ ಮತ್ತು ಜೈಲುಶಿಕ್ಷೆ. ಏತನ್ಮಧ್ಯೆ 1996ರಲ್ಲಿ ಸಂಜಯ್ ಪತ್ನಿ ರಿಚಾ ಇಹಲೋಕ ತ್ಯಜಿಸಿದ್ದರು. 1998ರಲ್ಲಿ ಸಂಜಯ್ ರೂಪದರ್ಶಿ ರಿಯಾ ಪಿಳ್ಳೈಯನ್ನು ವಿವಾಹವಾದರು. ಕೊನೆಗೆ 1999ರಲ್ಲಿ ಮಾಧುರಿ ದೀಕ್ಷಿತ್ ಅಮೆರಿಕದಲ್ಲಿ ನೆಲೆಸಿದ್ದ ಸರ್ಜನ್, ಡಾ.ಶ್ರೀರಾಮ್ ನೇನೆ ಅವರನ್ನು ವಿವಾಹವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next