Advertisement

ಉನ್ನತ ಹುದ್ದೆಗೆ ಕಣ್ಣಿಟ್ಟು ದುರ್ಗಾದೇವಿಯ ಸನ್ನಿಧಿಗೆ ಬಂದರಾ ಅರೋಗ್ಯ ಸಚಿವರು?

08:53 PM Sep 16, 2020 | sudhir |

ಯಾದಗಿರಿ: ಕಾಂಗ್ರೆಸ್ ಟ್ರಬಲ್ ಶೂಟರ್ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ಡಿ.ಕೆ.ಶಿವಕುಮಾರ ಯಶಸ್ಸು ಕಾಣುತ್ತಿದ್ದಂತೆ ಇದೀಗ ಇನ್ನೊಬ್ಬ ಪ್ರಭಾವಿ ಸಚಿವ ಬಿ.ಶ್ರೀರಾಮುಲು ಅವರ ನೋಟ ಗಡೇ ದುರ್ಗಾದೇವಿಯತ್ತ ಆಕರ್ಷಿತಗೊಂಡಿದೆ.

Advertisement

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ್ ಗಡೇ ದುರ್ಗಾದೇವಿ ಬೇಡಿದ ವರವನ್ನು ನೀಡುವ ಮಹಾತಾಯಿ ಎನ್ನುವ ನಂಬಿಕೆಯಿಂದಲೇ ರಾಜಕೀಯವಾಗಿ ಸಾಕಷ್ಟು ಅಡಕತ್ತರಿಗೆ ಸಿಲುಕಿದ್ದ ಡಿ.ಕೆ.ಶಿ ಎಲ್ಲಾ ಸಂಕಷ್ಟಗಳಿಂದ ಹೊರಬಂದು ಉನ್ನತ ಸ್ಥಾನವನ್ನು ಅಲಂಕರಿಸಿದ ಕೆಲವೇ ತಿಂಗಳಲ್ಲಿ ಶ್ರೀರಾಮುಲು ದುರ್ಗಾದೇವಿ ದರ್ಶನ ಪಡೆಯಲು ಆಗಮಿಸಿರುವುದು ರಾಜಕೀಯವಾಗಿ ಸಾಕಷ್ಟು ಸಂಚಲನ ಮೂಡಿಸಿದೆ. ಅಭಿಮಾನಿ ಕಾರ್ಯಕರ್ತರಲ್ಲಿ ಸಾಮಾನ್ಯವಾಗಿ ತಮ್ಮ ನಾಯಕ ಮುಖ್ಯಮಂತ್ರಿಯಾಗಬೇಕು ಎನ್ನುವ ಬಯಕೆ ಇದ್ದೇ ಇದೆ.

ಹಿಂದುಳಿದ ವರ್ಗದ ಪ್ರಭಾವಿ ನಾಯಕರಾಗಿರುವ ಶ್ರೀರಾಮುಲು ತಾವು ಸಿಎಂ ಆಗುವ ಬಯಕೆಯೊಂದಿಗೆ ದೇವಿ ದರ್ಶನಕ್ಕೆ ಆಗಮಿಸಿದರೇ? ಇಲ್ಲ ಜಿಲ್ಲೆಗೆ ಭೇಟಿಯ ವೇಳೆ ದರ್ಶನ ಪಡೆದರೇ ಎನ್ನುವ ಕುರಿತು ಚರ್ಚೆ ಶುರುವಾಗಿದೆ.

ಆಪ್ತರು ಹೇಳುವ ಪ್ರಕಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದು, ಸಮಯ ಇರುವುದರಿಂದ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಕೆಲವರ ಪ್ರಕಾರ ದೇವಸ್ಥಾನದ ಕಿರಿಯ ಪೂಜಾರಿ ಶ್ರೀರಾಮುಲು ಅವರನ್ನು ಭೇಟಿಯಾಗಿ ಮುಂದಿನ ರಾಜಕೀಯ ಭವಿಷ್ಯಕ್ಕೆ ದೇವಿಯ ದರ್ಶನ ಪಡೆಯಲು ಆಹ್ವಾನಿಸಿದ್ದರು ಎನ್ನುವ ಮಾತು ಕೇಳಿ ಬರುತ್ತಿದೆ. ಅದೇನೇ ಇರಲಿ ಶ್ರೀರಾಮುಲು ಮನಸ್ಸಿನಲ್ಲಿರುವ ಮಾತು ದೇವಿ ಮತ್ತು ಅವರ ಮದ್ಯೆಯೇ ಗೌಪ್ಯವಾಗಿರುವುದಂತು ಸತ್ಯ. ಎಲ್ಲದ್ದಕ್ಕೂ ಕಾಲವೇ ಉತ್ತರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next