Advertisement

ರಮೇಶ್‌-ರಾಮುಲು ನೆಂಟಸ್ತಿಕೆ?

06:00 AM Aug 28, 2018 | |

ಬೆಳಗಾವಿ: ಕಾಂಗ್ರೆಸ್‌ - ಜೆಡಿಎಸ್‌ ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಹಾಗೂ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ “ನೆಂಟಸ್ತಿಕೆ’ ನೆಪದಲ್ಲಿ ತೆರೆಮರೆಯ ಸಿದ್ಧತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಈಗಾಗಲೇ ಉಭಯ ನಾಯಕರು ಮೂರ್‍ನಾಲ್ಕು ಬಾರಿ ಭೇಟಿಯಾಗಿ ಚರ್ಚಿಸಿದ್ದು, ಇದಕ್ಕೆ ಬಿಜೆಪಿ ವರಿಷ್ಠರ ಸಮ್ಮತಿಯನ್ನೂ ಪಡೆದಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಸರ್ಕಾರ ಉರುಳಿಸುವ ಕಾರ್ಯಾಚರಣೆ ಆರಂಭ ಮಾಡುವಂತೆ ಬಿಜೆಪಿ ವರಿಷ್ಠರು ಸೂಚನೆ ಸಹ ನೀಡಿದ್ದಾರೆ ಎಂದು ಹೇಳಲಾಗಿದೆ.

ಸಂಪುಟ ವಿಸ್ತರಣೆ ವೇಳೆ ತಮ್ಮ ಬೆಂಬಲಿಗರಿಗೆ ಅವಕಾಶ ಕೊಡಬೇಕು. ನಿಗಮ ಮಂಡಳಿಗಳಲ್ಲಿ ಹೆಚ್ಚು ಸ್ಥಾನ ನೀಡಬೇಕು ಎಂದು ಕಾಂಗ್ರೆಸ್‌ ವರಿಷ್ಠರಿಗೆ ಮನವಿ ಮಾಡಿಕೊಳ್ಳುವ ನೆಪದಲ್ಲಿ ದೆಹಲಿಗೆ ಹೋಗಿದ್ದ ರಮೇಶ ಜಾರಕಿಹೊಳಿ,ಬಿಜೆಪಿಯ ಶ್ರೀರಾಮುಲು ಅವರನ್ನು ಭೇಟಿಯಾಗಿ ಸುದೀರ್ಘ‌ವಾಗಿ ಚರ್ಚಿಸಿದ್ದಾರೆ.

ಭಾನುವಾರ ಬೆಳಗಾವಿಗೆ ಜಿಲ್ಲೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಆಗಮಿಸುವುದು ಮೊದಲೇ ಗೊತ್ತಿದ್ದರೂ ಅವರ ಕಾರ್ಯಕ್ರಮದಿಂದ ರಮೇಶ ಜಾರಕಿಹೊಳಿ ದೂರ ಉಳಿದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ರಹಸ್ಯ ಸಭೆ ನಡೆಸಿರುವುದು ಮತ್ತು ಇದಕ್ಕೆ ಪೂರಕವಾಗಿ ಜಿಲ್ಲೆಯ ಸಂಸದ ಸುರೇಶ ಅಂಗಡಿ ಕೆಲವೇ ದಿನಗಳಲ್ಲಿ ಸಮ್ಮಿಶ್ರ ಸರ್ಕಾರದ ಆಯುಷ್ಯ ಮುಗಿಯಲಿದೆ ಎಂದು ಹೇಳಿರುವುದು ಪುಷ್ಟಿ ನೀಡಿದೆ.

ಮೂಲಗಳ ಪ್ರಕಾರ ರಮೇಶ್‌ ಜಾರಕಿಹೊಳಿ ಗುಂಪು ಹಾಗೂ ಬಿಜೆಪಿ ವರಿಷ್ಠರ ಮಧ್ಯೆ ಕೇಂದ್ರ ಸಚಿವ ಅನಂತಕುಮಾರ ಹಾಗೂ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಧ್ಯಸ್ಥಿಕೆ ವಹಿಸಿದ್ದಾರೆ. ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಕಾಂಗ್ರೆಸ್‌ನಿಂದ 17 ಶಾಸಕರನ್ನು ರಾಜೀನಾಮೆಕೊಡಿಸಿ ಕರೆ ತರುತ್ತೇವೆ. ಉಪಮುಖ್ಯಮಂತ್ರಿ ಸ್ಥಾನ ಹಾಗೂ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬೇಡಿಕೆ ಇಡಲಾಗಿದೆ. ಬಿಜೆಪಿ ಜೊತೆ ಕೈಜೋಡಿಸುವ ವಿಚಾರವಾಗಿ ಮೂವರೂ ಜಾರಕಿಹೊಳಿ ಸಹೋದರರು ಈಗಾಗಲೇ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಗುಟ್ಟಾಗಿ ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ರಮೇಶ-ರಾಮುಲು ಬೀಗರಾಗುತ್ತಿದ್ದಾರೆ!: ರಮೇಶ ಜಾರಕಿಹೊಳಿ ಪುತ್ರನ ಜತೆ ಶ್ರೀರಾಮುಲು ಪುತ್ರಿಯ ವಿವಾಹಕ್ಕೆ ವೇದಿಕೆ ಸಿದ್ಧವಾಗಿದೆ. ಈ ಕುರಿತು ಉಭಯ ಕುಟುಂಬಗಳ ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಮುಂದೆ
ಒಟ್ಟಾಗಿ ರಮೇಶ್‌ ಅಥವಾ ರಾಮುಲು ಉಪ ಮುಖ್ಯಮಂತ್ರಿ ಸ್ಥಾನ ಪಡೆಯುವ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಇದೆಲ್ಲ ಕೇವಲ ಊಹಾಪೋಹ. ನಾನು ಬಿಜೆಪಿ ಜೊತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ. ಶ್ರೀರಾಮುಲು ಜೊತೆ ಸಂಬಂಧ ಬೆಳೆಸುತ್ತಿದ್ದೇನೆ. ಹೀಗಾಗಿ ಆಗಾಗ ನಾವಿಬ್ಬರೂ ಭೇಟಿಯಾಗುತ್ತೇವೆ. ಅದಕ್ಕೆ ಕೆಲವರು ರಾಜಕೀಯ ಬಣ್ಣ ಹಚ್ಚುತ್ತಿದ್ದಾರೆ.
– ರಮೇಶ ಜಾರಕಿಹೊಳಿ, ಪೌರಾಡಳಿತ ಸಚಿವ

– ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next